ಬಳ್ಳಾರಿ
ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಿರಗುಪ್ಪ ತಾಲೂಕನ್ನು ಪೈಲಟ್ ತಾಲೂಕಾಗಿ ಆಯ್ಕೆ ಮಾಡಲಾಗಿದ್ದು, ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಪ್ರಯತ್ನಿಸಬೇಕು. ನಾಲ್ಕು ತಿಂಗಳೊಳಗೆ ಈ ಗುರಿಯನ್ನು ಸಾಧಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋಟ್ಪಾ ಕಾಯ್ದೆ ಕುರಿತ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟ್ಪಾ ಕಾಯ್ದೆಯನ್ನು ಸಿರಗುಪ್ಪ ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ತಹಸೀಲ್ದಾರರು,ಇಒ, ಆರೋಗ್ಯಾ ಧಿಕಾರಿಗಳು, ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು ಸಭೆ ನಡೆಸಿ ಕ್ರಮಕೈಗೊಳ್ಳಬೇಕು. ಬೇರೆಡೆ ಮಾದರಿಯಾಗುವ ನಿಟ್ಟಿನಲ್ಲಿ ಅನುಷ್ಠಾನ ಮಾಡಬೇಕು. ಇಲ್ಲಿ ಯಶಸ್ವಿ ಆದ ನಂತರ ಬೇರೆಡೆ ಪೈಲಟ್ ರೂಪದಲ್ಲಿ ಅನುಷ್ಠಾನಕ್ಕೆ ಯತ್ನಿಸಲಾಗುವುದು ಎಂದರು.
ಕೋಟ್ಪಾ ಕಾಯ್ದೆ ಜಿಲ್ಲೆಯಾದ್ಯಂತ ಯಶಸ್ವಿಯಾಗುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಸಹಕರಿಸಬೇಕು. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ತಂಬಾಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಡೆಸಲಾಗುವ ಕಾರ್ಯಾಚರಣೆಗಳಲ್ಲಿ ಸಮಿತಿಯ ಸದಸ್ಯ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಎಲ್ಲ ಸರಕಾರಿ ಕಚೇರಿಗಳಲ್ಲಿ ಧೂಮಪಾನ ನಿಷೇಧಿತ ಪ್ರದೇಶ, ಇಲ್ಲಿ ಧೂಮಪಾನ ಮಾಡುವುದು ಅಪರಾಧ;ಉಲ್ಲಂಘನೆಯಾದಲ್ಲಿ 2 ಸಾವಿರ ರೂ. ದಂಡ ವಿಧಿಸಲಾಗುವುದು ಎಂಬ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಅವರು ಸೂಚಿಸಿದರು.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದರ ಕುರಿತು ಮತ್ತು ಅದರ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ತಂಬಾಕು ತ್ಯಜಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ(18 ವರ್ಷದೊಳಗಿನ ಮಕ್ಕಳಿಗೆ) ಸಿಗದಂತೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು,ಉತ್ತೇಜನ, ಪ್ರಾಯೋಜಕತೆ ನಿಷೇಧ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ ಎಂದರು.
ಕೋಟ್ಪಾ ಸೆಕ್ಷನ್ 6ಬಿ ಪ್ರಕಾರ ಶೈಕ್ಷಣಿಕ ಸಂಸ್ಥೆಗಳ ಸುತ್ತ 300 ಅಡಿ ಅಂತರದೊಳಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದು,ಅಂತವುಗಳ ಕಂಡುಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಿ ಎಂದರು.
ಗಾಂಜಾ ಜಾಗೃತಿ ಮೂಡಿಸಿ : ಸ್ಮೋಕಿಂಗ್ ಜೋನ್ ಆರಂಭಿಸಿ:
ತಂಬಾಕಿನಷ್ಟೇ ಅಪಾಯಕಾರಿ ಗಾಂಜಾ ಕೂಡ ಆಗಿದೆ. ಇದರ ಅರಿವು ಬಹುತೇಕ ರೈತರಿಗೆ ಇರದ ಮಧ್ಯವರ್ತಿಗಳು ಮೂಲಕ ಬಳ್ಳಾರಿ ಸುತ್ತಮುತ್ತಲು ಜಮೀನುಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ಇದರ ಕುರಿತು ಇದು ಬೆಳೆದರೇ ಇದರಿಂದ ತಾವು ಎದುರಿಸಬೇಕಾಗುವ ಜೈಲು ಶಿಕ್ಷೆ ಕುರಿತು ಜಾಗೃತಿ ಮೂಡಿಸುವ ಕೆಲಸ ಕೃಷಿ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಡಿವೈಎಸ್ಪಿ ಕೆ.ರಾಮರಾವ್ ತಿಳಿಸಿದರು.
ಇದನ್ನು ಆಲಿಸಿದ ಎಡಿಸಿ ಮಂಜುನಾಥ ಅವರು ಕೃಷಿ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ನಗರದಲ್ಲಿರುವ ಬಹುತೇಕ ಹೋಟಲ್‍ಗಳು ಮತ್ತು ಅಂಗಡಿಗಳು ಟ್ರೇಡ್‍ಲೈಸೆನ್ಸ್ ಪಡೆಯದೇ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಟ್ರೇಡ್‍ಲೈಸೆನ್ಸ್ ಪಡೆಯುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು. ಆ ಎಲ್ಲ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಸ್ಮೋಕಿಂಗ್ ಜೋನ್ ಆರಂಭಿಸುವುದಕ್ಕೆ ಕ್ರಮವಹಿಸಬೇಕು ಎಂದರು.
ಟ್ರೇಡ್‍ಲೈಸೆನ್ಸ್ ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಹೋಟಲ್‍ಗಳು ಹಾಗೂ ಅಂಗಡಿಗಳ ಪತ್ತೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿ ಲೈಸೆನ್ಸ್ ಪಡೆಯದಿರುವುದು ಕಂಡುಬಂದಲ್ಲಿ ಬೀಗ ಜಡಿಯಿರಿ; ಇತರರು ಇದರಿಂದ ಪಾಠ ಕಲಿಯುತ್ತಾರೆ ಎಂದರು.ಕೋಟ್ಪಾ ಕಾರ್ಯಾಚರಣೆಗೆ ಗ್ರಾಮಗಳ ಮಟ್ಟದಲ್ಲಿಯೂ ಸಮಿತಿ ರಚಿಸಿ; ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತನ್ನಿ ಎಂದರು.ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಿಎಚ್‍ಒ ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಇಂದ್ರಾಣಿ, ಅನಿಲಕುಮಾರ್, ಮರಿಯಾಂಬಿ, ಈಶ್ವರ್ ದಾಸಪ್ಪನವರ್, ದುರ್ಗಪ್ಪ ಮಾಚನೂರು, ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಬಾಲಕಾರ್ಮಿಕ ಅಧಿಕಾರಿ ಮೌನೇಶ್ವರ, ವಾಣಿಜ್ಯ ತೆರಿಗೆ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








