ದಾವಣಗೆರೆ:
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ, ಜೂನ್ 9 ರಂದು ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೆಂಗಳೂರಿನ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ನಾಯಕ ಹಾಸ್ಟೆಲ್ ಅಧ್ಯಕ್ಷ ಬಿ.ವೀರಣ್ಣ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜನಹಳ್ಳಿ ಗುರುಪೀಠದ ಆವರಣದಲ್ಲಿರುವ ಲಿಂಗೈಕ್ಯ ಶ್ರೀಪುಣ್ಯಾನಂದಪುರಿ ಸ್ವಾಮೀಜಿ ಅವರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ, ಬೃಹತ್ ಪಾದಯಾತ್ರೆ ಹೊರಟು, ದಿನಕ್ಕೆ 20ರಿಂದ 25 ಕಿ.ಮೀ.ಗಳಂತೆ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ರಾಜಧಾನಿ ಬೆಂಗಳೂರು ತಲುಪಿ, ಜೂನ್.24ರಂದು ವಿಧಾನಸೌಧದ ಆವರಣದಲ್ಲಿರುವ ವಾಲ್ಮೀಕಿ ಮಹರ್ಷಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಮ್ಮ ಬೇಡಿಕೆ ಈಡೇರುವ ವರೆಗೂ ಹೋರಾಟ ಮುಂದು ವರೆಸುತ್ತೇವೆ ಎಂದು ಮಾಹಿತಿ ನೀಡಿದರು.
ಈ ಹೋರಾಟದಲ್ಲಿ ಪಕ್ಷಾತೀತವಾಗಿ ಪರಿಶಿಷ್ಟ ಪಂಗಡದ ಶಾಸಕರು, ಸಂಸದರು ಭಾಗವಹಿಸಲಿದ್ದು, ನಾಯಕ ಸಮಾಜದ ಬಂಧುಗಳು, ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ನಾಯಕ ಸಮುದಾಯದ ಮುಖಂಡ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಚ್.ಓಬಳಪ್ಪ ಮಾತನಾಡಿ, ನಮ್ಮ ಹೋರಾಟ ಯಾವುದೇ ಸಮುದಾಯದ ವಿರುದ್ಧವಲ್ಲ. ನಮ್ಮ ಹಕ್ಕಿಗಾಗಿ ಮಾತ್ರ ಹೋರಾಟ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
2011ರ ಜಾತಿ ಗಣತಿಯ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ 42.50 ಲಕ್ಷವಿದ್ದು, ರಾಜ್ಯದಲ್ಲಿ ನಮ್ಮದು 6ನೇ ದೊಡ್ಡ ಸಮುದಾಯವಾಗಿದೆ. ಇಷ್ಟು ದೊಡ್ಡ ಸಮುದಾಯಕ್ಕೆ ರಾಜ್ಯ ಸರ್ಕಾರ ಕೇವಲ ಶೇ.3ರಷ್ಟು ಮೀಸಲಾತಿ ನೀಡುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಬೇಕು. ಎಸ್ಸಿ-ಎಸ್ಟಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪಡೆದಿರುವವರನ್ನು ಗುರುತಿಸಿ, ಕೆಲಸದಿಂದ ಕಿತ್ತು ಹಾಕಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದ ಯಾವುದಾದರೂ ಒಂದು ವಿವಿಗೆ ವಾಲ್ಮೀಕಿ ಮಹರ್ಷಿಗಳ ಹೆಸರು ನಾಮಕರಣ ಮಾಡಬೇಕೆನ್ನುವುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು, ಈ ಬೇಡಿಕೆಗಳು ಈಡೇರುವ ವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಕಂದಗಲ್ ಮಂಜಪ್ಪ, ವಿನಾಯಕ ಪೈಲ್ವಾನ್, ಶ್ಯಾಗಲೆ ಮಂಜುನಾಥ್, ಅಣಜಿ ಅಂಜಿನಪ್ಪ, ಆರನೇಕಲ್ಲು ಹನುಮಂತಪ್ಪ, ಅಣ್ಣಾಪುರದ ಹೇಮಣ್ಣ, ಮಹಾಲಕ್ಷ್ಮೀ, ಸತೀಶ್ ಮತ್ತಿತರರು ಹಾಜರಿದ್ದರು.