ಬೆಂಗಳೂರು
ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿದ್ದು, ಶಾಸಕರು ತಮ್ಮ ಕ್ಷೇತ್ರದಲ್ಲಿರುವ ಬರದ ವಾಸ್ತವಿಕ ಚಿತ್ರಣ ಕುರಿತು ವರದಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ಶಾಸಕರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಬರ ಪರಿಸ್ಥಿತಿ ಕುರಿತು ಎರಡು ದಿನಗಳಲ್ಲಿ ವರದಿ ನೀಡುವಂತೆ ಶಾಸಕರಿಗೆ ಪತ್ರ ಬರೆಯಲಾಗಿದ್ದು, ಮೇ 20 ರಂದು ನಡೆಯಲಿರುವ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಬರ ಕುರಿತು ಚರ್ಚಿಸಿ, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಂಸದರು ಹಾಗೂ ಪ್ರತಿಪಕ್ಷ ನಾಯಕರ ಸಭೆ ಕರೆದು ಬರ ಸಂಬಂಧ ಚರ್ಚೆ ನಡೆಸಬಹುದಿತ್ತು. ಬರ ಕುರಿತು ಚರ್ಚಿಸಲು ಕುಮಾರಸ್ವಾಮಿ ಅವರಿಗೆ ಆಸಕ್ತಿಯಿಲ್ಲದ ಕಾರಣ ಅವರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರು ಹಾಗೂ ಕುಮಾರಸ್ವಾಮಿ ಅವರ ಸಹೋದರರೂ ಆಗಿರುವ ಹೆಚ್.ಡಿ.ರೇವಣ್ಣ ಅವರ ವಿರುದ್ಧ ಕಿಡಿಕಾರಿದ ಯಡಿಯೂರಪ್ಪ, ಹಾಸನ ಜಿಲ್ಲಾಧಿಕಾರಿ ವಿರುದ್ಧ ರೇವಣ್ಣ ಸೇಡಿನ ರಾಜಕೀಯ ಮಾಡಲು ಹೊರಟಿದ್ದಾರೆ. ಬರ ಪರಿಹಾರ ಕಾಮಗಾರಿಗೆ ಜಿಲ್ಲಾಧಿಕಾರಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಅವರ ವರ್ಗಾವಣೆಗೆ ಯತ್ನಿಸುತ್ತಿದ್ದಾರೆ. ಇದು ಒಬ್ಬ ಪ್ರಾಮಾಣಿಕ ಅಧಿಕಾರಿಗೆ ಮಾಡುತ್ತಿರುವ ಅವಮಾನ. ರೇವಣ್ಣ ಅವರ ಸೇಡಿನ ರಾಜಕಾರಣವನ್ನು ಖಂಡಿಸುವುದಾಗಿ ಅವರು ಒತ್ತಿ ಹೇಳಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ವಿರುದ್ಧ ಬೇಹುಗಾರಿಕೆ ಮಾಡುತ್ತಿದ್ದು, ಈ ಬಗ್ಗೆ ತಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಸವಾಲು ಹಾಕಿದರು.ಇದೇ ಸಂದರ್ಭದಲ್ಲಿ ಮೈತ್ರಿ ಸರ್ಕಾರದಲ್ಲಿ ತಲೆದೋರಿರುವ ಮುಖ್ಯಮಂತ್ರಿ ಹುದ್ದೆಗೆ ಕಸರತ್ತು, ಲಾಬಿ ಕುರಿತು ಪ್ರತಿಕ್ರಿಯಿಸಲು ಯಡಿಯೂರಪ್ಪ ಮುಂದಾಗಲಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕಾಂಗ್ರೆಸ್ ಶಾಸಕರ ಒತ್ತಡದ ಕುರಿತು ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
