ಬೆಂಗಳೂರು:
ಮೈತ್ರಿ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ
ಉಪಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆ ಬೆಂಗಳೂರಿಗೆ ದೌಡಾಯಿಸುವಂತೆ ಪಕ್ಷದ ಶಾಸಕರು ಮತ್ತು ಸಂಸದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ.
ಸಭೆಗೆ ಹಾಜರಾಗುವಾಗ ಬರದ ವರದಿಯೊಂದಿಗೆ ಬರುವಂತೆ ಸೂಚನೆ ನೀಡಿದ್ದಾರೆ.ಲೋಕ ಸಮರ, ವಿಧಾನಸಭಾ ಉಪಚುನಾವಣೆಯಲ್ಲಿ ತೊಡಗಿದ್ದ ಬಿಜೆಪಿ ನಾಯಕರು ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ಸರ್ಕಾರ ರಚನೆ ಕಸರತ್ತು ಆರಂಭಿಸಲು ಪರೋಕ್ಷವಾಗಿ ಸಜ್ಜಾಗುತ್ತಿದ್ದಾರೆ.ಪಕ್ಷದ ಶಾಸಕರು ಮತ್ತು ಸಂಸದರನ್ನು ಸಭೆಗೆ ಆಹ್ವಾನಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂತಹದ್ದೊಂದು ಅನುಮಾನ ಹುಟ್ಟುವಂತೆ ಮಾಡಿದ್ದಾರೆ.
ಈಗಾಗಲೇ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿ ವರದಿ ಸಿದ್ದಪಡಿಸುವಂತೆ ಸೂಚನೆ ನೀಡಿದ್ದ ಬಿಎಸ್‍ವೈ,ಇದೀಗ ವರದಿಯೊಂದಿಗೆ ಸಭೆಗೆ ಬರುವಂತೆ ಸೂಚನೆ ನೀಡಿದ್ದಾರೆ.ಚುನಾವಣಾ ಫಲಿತಾಂಶಕ್ಕೂ ಎರಡು ದಿನ ಮೊದಲ ಅಂದರೆ ಮೇ.21ರಂದು ಸಭೆ ಕರೆದಿದ್ದಾರೆ. ಮೇಲ್ನೋಟಕ್ಕೆ ಬರ ಸಮಸ್ಯೆ ಅವಲೋಕನದ ಸಭೆಯಂತೆ ಕಂಡುಬಂದರೂ ಪಕ್ಷದ ಮುಂದಿನ ನಡೆ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಪಕ್ಷದ ಶಾಸಕರ ಮತ್ತು ಸಂಸದರ ಅಭಿಪ್ರಾಯ ಸಂಗ್ರಹಿಸಲು ಈ ಸಭೆ ಕರೆಯಲಾಗಿದೆ ಎನ್ನುವ ಮಾಹಿತಿ ಬಿಜೆಪಿ ಅಂಗಳದಲ್ಲಿ ಹರಿದಾಡುತ್ತಿದೆ.
ಉಪ ಚುನಾವಣೆಯ ಎರಡೂ ಸ್ಥಾನ ಗೆದ್ದರೆ ಶಾಸಕರ ಸಂಖ್ಯೆ 106ಕ್ಕೆ ತಲುಪಲಿದೆ.ಇಬ್ಬರು ಪಕ್ಷೇತರ ಶಾಸಕರನ್ನು ಸೇರಿಸಿಕೊಂಡರೆ ಸಂಖ್ಯೆ 108 ಆಗಲಿದೆ.ಸರ್ಕಾರ ರಚನೆಯ ಅವಕಾಶಕ್ಕೆ ಸನಿಹದಲ್ಲಿ ಇರುತ್ತೇವೆ.ಇಂತಹ ಸಂದರ್ಭದಲ್ಲಿ ಪಕ್ಷದ ನಾಯಕತ್ವದಲ್ಲಿ ಸಮಸ್ಯೆ, ಗೊಂದಲ ಇರಬಾರದು ಎನ್ನುವ ಕಾರಣಕ್ಕೆ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರ ರಚನೆ ಯತ್ನದ ಹಾದಿ ಸುಗಮಗೊಳಿಸಿಕೊಳ್ಳಲು ತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಸಿದ್ದರಾಮಯ್ಯ, ಕುಮಾರಸ್ವಾಮಿ, ಹೆಚ್.ವಿಶ್ವನಾಥ್, ದಿನೇಶ್ ಗುಂಡೂರಾವ್ ನೀಡುತ್ತಿರುವ ಹೇಳಿಕೆಗಳು ಮೈತ್ರಿ ಸರ್ಕಾರದಲ್ಲಿನ ಗೊಂದಲಕ್ಕೆ ನಿದರ್ಶನವಾಗಿವೆ. ಮೈತ್ರಿ ಸರ್ಕಾರದ ಗೊಂದಲದ ಸನ್ನಿವೇಶವನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಹೀಗಾಗಿ ಮೈತ್ರಿ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಮಹತ್ವದ ಸಭೆ ಕರೆದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಮೈತ್ರಿ ಸರ್ಕಾರದಲ್ಲಿನ ಆಂತರಿಕ ಕಲಹ, ರಮೇಶ್ ಜಾರಕಿಹೊಳಿ ತಂಡದ ನಿಗೂಢ ನಡೆಯಿಂದಾಗಿ ಬಿಜೆಪಿ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
