ಬ್ಯಾಡಗಿ:
ಸ್ಥಳೀಯ ಪುರಸಭೆಯ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ರೂ.15 ಲಕ್ಷ ಉಳಿತಾಯದೊಂದಿಗೆ 16 ಕೋಟಿ ಯೋಜನಾ ಗಾತ್ರದ 2019-20ನೇ ಸಾಲಿನ ಬಜೆಟ್‍ನ್ನು ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಂಗಳವಾರ ಮಂಡಿಸಿದರು.
ಬಜೆಟ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನಸೇವೆಯೇ ಜನಾರ್ದನ ಸೇವೆ, ಜಗತ್ತಿನ ವೇಗಕ್ಕೆ ಭಾರತವನ್ನು ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರಿಂದ ಪ್ರೇರಿತನಾಗಿ ಕ್ಯಾಶ್‍ಲೆಸ್‍ಗೆ ಮನ್ನಣೆ ನೀಡಿದ್ದು ಪುರಸಭೆಯಲ್ಲಿ ಹಣಕಾಸಿನ ವ್ಯವಹಾರ ಸ್ಥಗಿಗತೊಳಿಸಲಾಗಿದೆ, ಸ್ವಚ್ಚತೆಯೇ ಸೌಭಾಗ್ಯ, ಆರೋಗ್ಯ ಭಾಗ್ಯ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಂಧೋಲನ ರೂಪದಲ್ಲಿ ನಡೆಸಲು ಇಚ್ಚಿಸಿದ್ದೇನೆ,
ಪಟ್ಟಣದಲ್ಲಿ ದಿನದ 24 ಗಂಟೆ ಕುಡಿಯುವ ನೀರು ಸೌಲಭ್ಯ ಇನ್ನೇನು ಜಾರಿಗೊಳ್ಳುವ ಹಂತದಲ್ಲಿದೆ, ಪ್ರತಿ 200 ಮೀಟರ್ ಒಂದರಂತೆ ವಿದ್ಯುತ್ ದೀಪ ಅಳವಡಿಸಲಾಗಿದೆ, ಸಮಗ್ರ ಪಟ್ಟಣ ಅಭಿವೃದ್ಧಿ ಯೋಜನೆಯಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಮ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಪುರಸಭೆಯ ವ್ಯಾಪಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಅವಶ್ಯ ಬೆಳಕು, ಸ್ವಂತ ಆದಾಯ ಹೆಚ್ಚಳಕ್ಕೆ ವಿಶೇಷ ಯೋಜನೆ, ಸದಸ್ಯರು ಸೇರಿದಂತೆ ಅಧಿಕಾರಿಗಳೊಂದಿಗೆ ಕಡ್ಡಾಯ ವಾರ್ಡ ಸಭೆ, ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಆಸ್ತಿ ತೆರಿಗೆಯಲ್ಲಿ ಹೆಚ್ಚಳ, ಮೆಣಸಿನಕಾಯಿ ವ್ಯಾಪಾರಕ್ಕೆ ವಿಶ್ವದಲ್ಲೇ ದ್ವಿತೀಯ ಸ್ಥಾನ ಪಡೆದಿರುವ ಬ್ಯಾಡಗಿ ಮೂಲ ಸೌಕರ್ಯಗಳ ಕೊರತೆಯಿಂದ ಜಾಗತಿಕ ಮಟ್ಟದಲ್ಲಿ ಒಂದು ಸುಂದರ ನಗರವಾಗಿ ರೂಪಗೊಂಡಿಲ್ಲ, ಪಟ್ಟಣವನ್ನು ಮಾದರಿಯನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಆದಾಯ ನೀರಿಕ್ಷೆ: ಎಸ್‍ಎಫ್‍ಸಿ ಮುಕ್ತನಿಧಿಯಿಂದ ರೂ.1.20 ಕೋಟಿ ಬರುವ ನಿರೀಕ್ಷೆಯಿದ್ದು, ಸಾಮಾನ್ಯ ಮೂಲ ಅನುದಾನ (14ನೇ ಹಣಕಾಸು) ರೂ.1.57 ಕೋಟಿ, ಮಳಿಗೆ ಬಾಡಿಗೆಯಿಂದ 56 ಲಕ್ಷ, ಆಸ್ತಿತೆರಿಗೆ (ಎಸ್‍ಎಎಸ್) 84 ಲಕ್ಷ, ನೀರಿನ ಕರ 55.19 ಲಕ್ಷ ಖಾತೆ ಬದಲಾವಣೆ 6 ಲಕ್ಷ, ಬ್ಯಾಂಕ್ ಬಡ್ಡಿ 10 ಲಕ್ಷ, ಸಂತೆ ಹರಾಜಿನಿಂದ 15 ಲಕ್ಷ, ಮೇಲ್ವಿಚಾರಣೆ ಫೀ 40 ಲಕ್ಷ, ಕಟ್ಟಡ ಪರವಾನಗಿ 23 ಲಕ್ಷ, ವಿದ್ಯುತ್ ಅನುದಾನ ರೂ.2.40 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ 14 ಲಕ್ಷ, ಸಕ್ಕಿಂಗ್ ಮಿಶಿನ್ ಬಾಡಿಗೆ 1.30 ಲಕ್ಷ, ಸ್ಟಾಂಪ್ ಡ್ಯೂಟಿ ರೂ.1.75 ಲಕ್ಷ, ಉಪಕರ ಸಂಗ್ರಹಣಾ ಶುಲ್ಕ ರೂ.2.19 ಲಕ್ಷ, ಅನುಪಯುಕ್ತ ವಸ್ತು ಮಾರಾಟ 1.85 ಲಕ್ಷ ಆದಾಯ ನೀರಿಕ್ಷೆ ಮಾಡಲಾಗಿದೆ.
ವೆಚ್ಚಗಳು:ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ರೂ.1.08 ಲಕ್ಷ, ಶೌಚಾಲಯ ಅಭಿವೃದ್ಧಿಗೆ 16 ಲಕ್ಷ, ಉದ್ಯಾನವನ ಅಭಿವೃದ್ಧಿಗೆ 22 ಲಕ್ಷ, ಮಳಿಗೆ ನಿರ್ಮಾಣಕ್ಕೆ 20 ಲಕ್ಷ, ಶೇ.24.10 ಅನುದಾನ ಬಳಕೆಗೆ 18.51 ಸಾವಿರ ಲಕ್ಷ, ಹಿಂದುಳಿದ ವರ್ಗಗಳ ಅಭಿವೃದ್ಧಿ (ಶೇ7.25) 5.56 ಲಕ್ಷ, ಅಂಗವಿಕಲರ ಕ್ಷೇಮಾಭಿವೃದ್ಧಿ (ಶೇ.3) ಮೀಸಲು ಬಳಕೆಗೆ 6 ಲಕ್ಷ, ನೀರು ನಿರ್ವಹಣೆ 41 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ 15 ಲಕ್ಷ, ವಿದ್ಯುತ್ ದೀಪಕ್ಕೆ 2.45 ಕೋಟಿ, ಕ್ರೀಡಾ ಚಟುವಟಿಕೆಗಳಿಗೆ 3 ಲಕ್ಷ, ವಾಹನ ವಿಮೆ 2.50 ಲಕ್ಷ, ಬೀದಿದೀಪ ನಿರ್ವಹಣೆಗೆ 31 ಲಕ್ಷ, ಇಂಧನಕ್ಕಾಗಿ ರೂ.15 ಲಕ್ಷ, ಮನೆಮನೆ ಕಸ ಸಂಗ್ರಹಣೆ ವೆಚ್ಚಕ್ಕೆ 12 ಲಕ್ಷ, ಗುತ್ತಿಗೆ ಪೌರ ಕಾರ್ಮಿಕರ ವೇತನ 85 ಲಕ್ಷ, ನೀರು ಸರಬರಾಜು ಗುತ್ತಿಗೆ ಸಿಬ್ಬಂದಿ ವೇತನ 39 ಲಕ್ಷ, ನಲ್ಮ ಯೋಜನೆ ಅನುಷ್ಟಾನಕ್ಕೆ 10 ಲಕ್ಷ, ಮುದ್ರಣಕ್ಕಾಗಿ 7 ಲಕ್ಷ, ಜಾಹೀರಾತು ಮತ್ತು ಪ್ರಚಾರಕ್ಕೆ 7.5 ಲಕ್ಷ ಸ್ವಚ್ಚ ಭಾರತ ಅನುಷ್ಟಾನಕ್ಕೆ 10 ಲಕ್ಷ ಪ್ರಸಕ್ತ ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದರು.
ಕ್ರೀಡಾ ಚಟುವಟಿಕೆಗೆ ಬಜೆಟ್ 6 ಲಕ್ಷಕ್ಕೇರಿಸಿ:ಬಳಿಕ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಸದಸ್ಯ ದುರ್ಗೇಶ ಗೋಣೆಮ್ಮನವರ ಮಾತನಾಡಿ, ಕ್ರೀಡಾ ಚಟುವಟಿಕೆಗಳಿಗೆ ಬಜೆಟ್‍ನಲ್ಲಿ ಕೇವಲ 3 ಲಕ್ಷ ರೂ.ಗಳನ್ನು ನಿಗದಿಗೊಳಿಸಲಾಗಿದ್ದು ಇದು ಏತಕ್ಕೂ ಸಾಲುವುದಿಲ್ಲ ಇದನ್ನು 6 ಲಕ್ಷಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದರು.
ಬಹುತೇಕ ರಾಷ್ಟ್ರಮಟ್ಟದ ಕ್ರೀಡಾಪಟುಗಳು ಉದ್ಯೋಗವಿಲ್ಲದೇ ಕೂಲಿ ಕೆಲಸಕ್ಕೆ ಹೋಗುವುದು ಕಂಡು ಬರುತ್ತಿದೆ, ಅವರೂ ಸಹ ಇತರರಂತೆ ಸ್ವಾಭಿಮಾನದಿಂದ ಬದುಕಲು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಸಹಾಯ ನೀಡುವುದು ಪುರಸಭೆಯ ಕರ್ತವ್ಯ ಈ ಹಿನ್ನೆಲೆಯಲ್ಲಿ ಎಸ್ಸಿಎಸ್ಟಿ ಮೀಸಲಿನ ಶೇ.24.10 ಹಾಗೂ ಅಂಗವಿಕಲರ ಶೇ.3 ರ ಅನುದಾನದಲ್ಲಿಯೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಅನುದಾನ ಮೀಸಲಿಡುವಂತೆ ಸಭೆಯಲ್ಲಿ ಆಗ್ರಹಿಸಿದರು.
ವಿದ್ಯುತ್ ಚಿತಾಗಾರ ಹಾಗೂ ಶವ ಸಾಗಿಸುವ ವಾಹನ: ಸದಸ್ಯ ನಾರಾಯಣಪ್ಪ ಕರ್ನೂಲ ಮಾತನಾಡಿ, ಪಟ್ಟಣದಲ್ಲಿ ಬಡ ಕುಟುಂಬಗಳಿಗೆ ದೂರದ ಸ್ಮಶಾನಕ್ಕೆ ಶವಗಳನ್ನು ಹೊತ್ತೊಯ್ಯಲು ಬಡವರಿಂದ ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ, ಪುರಸಭೆ ವತಿಯಿಂದ ಶವ ಸಾಗಿಸುವ ವಾಹನ ನಿರ್ಮಿಸಿ ಅನುಕೂಲ ಕಲ್ಪಿಸಲಬೇಕು, ವಿದ್ಯುತ್ ಚಾಲಿತ ಚಿತಾಗಾರ ನಿರ್ಮಾಣಕ್ಕಾಗಿ ಪ್ರಸಕ್ತ ಬಜೆಟ್‍ನಲ್ಲಿ ಹಣ ಕಾಯ್ದಿರಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಎರಡಕ್ಕೂ ಸೇರಿ ಅಂದಾಜು 32 ರೂ.ಗಳನ್ನು ಮೀಸಲಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಗಳ ನಿರ್ಮಾಣಕ್ಕೆ ಮುಂದಾಗಿ: ಸದಸ್ಯ ಪ್ರಶಾಂತ್ ಯಾದವಾಡ ಮಾತನಾಡಿ, ಪ್ರತಿ ವರ್ಷವೂ ಕೇವಲ ರಸ್ತೆ ಚರಂಡಿ ಇನ್ನಿತರ ಕಾಮಗಾರಿಗಳಿಗೆ ಹಣ ಹಾಕುತ್ತಾ ಬಂದಿದ್ದೇವೆ ಆದರೆ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಅಥವಾ ನೀರು ಸಂಗ್ರಹಣೆಗಾಗಿ ಯಾವುದೇ ವಿಶೇಷ ಅನುದಾನ ನೀಡಿಲ್ಲ, ಈ ಹಿನ್ನೆಲೆಯಲ್ಲಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ಗುಡ್ಡದ ಎರಡೂ ಗುಡ್ಡಗಳ ನಡುವೆ ನೈಸರ್ಗಿಕವಾಗಿ (ಮಳೆಮೂಲ) ನೀರು ಸಂಗ್ರಹಣೆ ಯೋಗ್ಯವಾದ ಸ್ಥಳವಿದೆ ಆ ಕಾರಣಕ್ಕಾಗಿ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಿಕೊಳ್ಳುವ ಮೂಲಕ ಬ್ಯಾರೇಜ್ ನಿರ್ಮಾಣಕ್ಕೆ ಮುಂದಾಗುವಂತೆ ಆಗ್ರಹಿಸಿದರು.
ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಸಿದ್ಧಗಂಗಾಮಠದ ಡಾ.ಶಿವಕುಮಾರಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸಭೆಯಲ್ಲಿ ಒಂದು ನಿಮಿಷದ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ ಪಾಟೀಲ, ಮುಖ್ಯಾಧಿಕಾರಿ ವಿ.ಎಂ.ಪೂಜಾರ ಉಪಸ್ಥಿತರಿದ್ದರು. ಎಂ.ಆರ್.ಭದ್ರಗೌಡ್ರ, ನಜೀರ್‍ಹ್ಮದ್ ಶೇಖ್, ಗುಡ್ಡಪ್ಪ ಆಡಿನವರ, ಜುಲೈಕಾಬಿ, ನೀಲಮ್ಮ ದೊಡ್ಮನಿ, ಶಕುಂತಲಮ್ಮ ಬೂದಿಹಾಳಮಠ, ಯಲ್ಲಮ್ಮ ಡಾವಣಗೇರಿ, ಬಸವರಾಜ ಹಂಜಿ, ಇಂಜಿನಿಯರ್ ಸಂಗ ಮೇಶ ಹಾದೀಮನಿ, ವ್ಯವಸ್ಥಾಪಕ ಎಲ್.ಶಂಕರ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಯಲ್ಲಣ್ಣನವರ, ಸೌಭಾಗ್ಯ ಬಳಿಗಾರ, ಎಂ.ಡಿ.ಕೋಡಿಹಳ್ಳಿ, ಮಾಲತೇಶ ಹಳ್ಳಿ, ಪಾರ್ವತಿ ಪಾಟೀಲ, ಶಿವಕುಮಾರ, ಇನ್ನಿತರರು ಉಪಸ್ಥಿತರಿದ್ದರು.