ದಾವಣಗೆರೆ:
ರಾಷ್ಟ್ರೀಯ ಹೆದ್ದಾರಿಯಲ್ಲಿ ವೈಜ್ಞಾನಿಕವಾಗಿ ಕೆಳ ಸೇತುವೆ ನಿರ್ಮಾಣ ಮಾಡಬೇಕೆಂದು ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯ (ಎನ್.ಹೆಚ್.4) ರಸ್ತೆಯ ಕೆಳ ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ಅನೇಕ ರೈತರ ಸಾವಿಗೆ ಕಾರಣವಾಗಿದೆ. ಮಳೆ ಬಂದ ಸಂದರ್ಭದಲ್ಲಿ ಈ ಕೆಳ ಸೇತುವೆಗಳ ಮೂಲಕ ಸಂಚಾರಕ್ಕೆ ತೊಂದರೆ ಆಗಿದ್ದರಿಂದ ರೈತರು ಹೆದ್ದಾರಿ ದಾಟುವ ಸಂದರ್ಭದಲ್ಲಿ ಈ ಕೆಳ ಸೇತುವೆಗಳಲ್ಲಿ ಅಪಘಾತಗಳು ಸಂಭವಿಸಿ. ಅನೇಕೆ ಸಾವು-ನೋವುಗಳಾಗಿವೆ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಷಟ್‍ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ಸಂದರ್ಭ ಸರ್ಕಾರಗಳು ಆಯಾ ಗ್ರಾಮಗಳ ರಸ್ತೆಯಲ್ಲಿನ ಸಂಚಾರಕ್ಕೆ ಅನುಗುಣವಾಗಿ ಕೆಳ ಸೇತುವೆ ನಿರ್ಮಿಸಬೇಕು.ಕೆಳ ಸೇತುವೆಯಲ್ಲಿ ನೀರು ನಿಲ್ಲದಂತೆ ಮಾಡಬೇಕು. ಅದಕ್ಕೆ ವ್ಯವಸ್ಥಿತವಾದ ಬಾಕ್ ಚರಂಡಿ ನಿರ್ಮಿಸಬೇಕು. ಅಷ್ಟೇ ಅಲ್ಲದೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿರಮಗೊಂಡನಹಳ್ಳಿ ಮತ್ತಿತರೇ ಭಾಗದಲ್ಲಿ ನಿರ್ಮಿಸಿರುವ ಕೆಳ ಸೇತುವೆಗಳು ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆ ರೀತಿ ಕಾಮಗಾರಿ ಮಾಡಬಾರದು ಎಂದು ಮನವಿ ಮಾಡಿದರು.
ತೋಳಹುಣಸೆ ಗ್ರಾಮದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ ಮೇಲೆ ರೈಲ್ವೆ ಸೇತುವೆ ರೂ. 39.79 ಕೋಟಿ ಅನುದಾನದಲ್ಲಿ 1.38 ಕಿ.ಮೀ. ಕೆಲಸ 2016ರಲ್ಲೇ ಮುಗಿಯಬೇಕಿತ್ತು. ಆದರೆ ಇಂದಿಗೂ ಈ ಕೆಲಸ ಆಗಿಲ್ಲ. ಈಗ ಈ ಕಾಮಗಾರಿ ಸ್ಥಗಿತಗೊಂಡಿದೆ. ಸಂಸದರು, ಈ ವಿಚಾರವಾಗಿ ಸರ್ಕಾರದೊಂದಿಗೆ ಚರ್ಚೆ ನಡೆಸಿ ಬೇಗ ಕಾಮಗಾರಿ ಮುಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಗುಡಾಳು ಗ್ರಾ.ಪಂ. ಅಧ್ಯಕ್ಷ ತಿಪ್ಪೇಸ್ವಾಮಿ, ಗ್ರಾ.ಪಂ. ಸದಸ್ಯ ಶೇಖರಪ್ಪ, ಅಜ್ಜಪ್ಪ ಕಲ್ಪನಹಳ್ಳಿ, ಕೆ.ಆರ್.ರವಿ, ಕಲ್ಲೇಶಪ್ಪ, ಶಂಭುಲಿಂಗಪ್ಪ, ವೀರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
