ಔಷಧ ಅಂಗಡಿ ಬಂದ್ ಬಹುತೇಕ ಯಶಸ್ವಿ

ದಾವಣಗೆರೆ :

       ಆನ್‍ಲೈನ್‍ನಲ್ಲಿ ಔಷಧ ಮಾರಾಟ ಮಾಡುವ ಇ.ಫಾರ್ಮಸಿಗೆ ಕರಡು ನಿಯಮಾವಳಿ ಹೊರಡಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದ್ದ ಔಷಧಿ ಅಂಗಡಿ ಬಂದ್ ಬಹುತೇಕ ಯಶಸ್ವಿಯಾಗಿದೆ.

      ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ಕರೆ ನೀಡಿದ್ದ ಔಷಧಿ ಅಂಗಡಿ ಬಂದ್‍ಗೆ ಜಿಲ್ಲೆಯ ಸುಮಾರು ಔಷಧಿ ಅಚಿಡಿ ಮಾಲೀಕರು ತಮ್ಮ ಮೆಡಿಕಲ್ ಶಾಪ್‍ಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿಸ್ದರು. ಈ ಹಿನ್ನೆಯಲ್ಲಿ ಜಿಲ್ಲೆಯೊಂದರಲ್ಲೇ ಸುಮಾರು 750ಕ್ಕೂ ಹೆಚ್ಚು ಔಷಧಿ ಅಂಗಡಿಗಳು ಬಂದ್ ಆಗಿದ್ದವು. ಹೀಗಾಗಿ ಔಷಧಿ ಖರೀದಿಗೆ ಬಂದ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

     ಆದರೆ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಮೆಡಿಕಲ್ ಶಾಪ್‍ಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ಮೆಡ್‍ಪ್ಲೆಸ್, ಮೆಡ್‍ಹೌಸ್‍ಗಳು ಎಂದಿನಂತೆ ತೆರೆದಿದ್ದವು. ಹೀಗಾಗಿ ಸಾರ್ವಜನಿಕರು ಔಷಧ ಖರೀದಿಗಾಗಿ ದಾವಣಗೆರೆಯ ಜಿಲ್ಲಾ ಸಾರ್ವಜನಿಕ ಸ್ಪತ್ರೆಯ ಆವರಣದಲ್ಲಿರುವ ಜನೌಷಧಿ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದರು. ಆದ್ದರಿಂದ ಜನೌಷಧಿ ಕೇಂದ್ರ ದಿನವಿಡೀ ಗ್ರಾಹಕರಿಂದ ಗಿಜುಗೂಡುತ್ತಿತ್ತು.

     ಅಲ್ಲದೆ, ಎಂದಿನಂತೆ ತೆರೆದಿದ್ದ ಮೆಡ್‍ಹೌಸ್, ಪೆಡ್‍ಪ್ಲಸ್‍ಗಳಲ್ಲೂ ಔಷಧಿ ಮಾರಾಟ ಎಂದಿಗಿಂತ ತುಸು ಹೆಚ್ಚಾಗಿಯೇ ನಡೆಯಿತು. ಆದರೆ, ಅಪೊಲೋ ಔಷಧಿ ಅಂಗಡಿಗಳು ಬಂದ್‍ಗೆ ಬೆಂಬಲ ಸೂಚಿಸಿ, ವ್ಯಾಪಾರವನ್ನು ಸ್ಥಗಿತಗೊಳಿಸಿತ್ತು.

     ಸರ್ಕಾರಿ ಆಸ್ಪತ್ರೆಗಳು, ಕ್ಲಿನಿಕ್‍ಗಳು, ನರ್ಸಿಂಗ್ ಹೋಂಗಳು ಎಂದಿನಂತೆ ಸೇವೆ ಆರಂಭಿಸಿದ್ದವು. ಆದರೆ, ವೈದ್ಯರು ರೋಗಿಗಳ ತಪಾಸಣೆ ನಡೆಸಿ ಔಷಧಿ ಚೀಟಿ ಬರೆದುಕೊಟ್ಟ ನಂತರದಲ್ಲಿ ಔಷಧಿ ಅಂಗಡಿಗಳು ಬಂದ್ ಆಗಿದ್ದ ಕಾರಣಕ್ಕೆ ಔಷಧಿ ಖರೀದಿಸಲು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಎಲ್ಲಾ ಔಷಧ ಅಂಗಡಿಗಳ ಎದರು ಸಾಮಾನ್ಯವಾಗಿತ್ತು.

      ಔಷಧ ಅಂಗಡಿಗಳ ಬಂದ್ ಕರೆಯ ಹಿನ್ನೆಲೆಯಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ನಿಯೋಗದ ಮೂಲಕ ತೆರಳಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ಎನ್.ಪಿ.ಪ್ರಸನ್ನಕುಮಾರ್ ಮಾತನಾಡಿ, ಆನ್‍ಲೈನ್‍ನಲ್ಲಿ ಔಷಧ ಮಾರಾಟ ಮಾಡುವ ಇ.ಫಾರ್ಮಸಿ ಕರಡಿನ ನಿಯಮಾವಳಿಗಳು 1940ರ ಕಾಂತಿವರ್ಧಕ ಕಾಯ್ದೆಗೆ ವಿರುದ್ಧವಾಗಿವೆ. ಆನ್‍ಲೈನ್‍ನಲ್ಲಿ ಔಷಧಿ ಮಾರಾಟ ಮಾಡಲು ಸರ್ಕಾರ ಅನುವು ನೀಡಿದರೆ, ಮಾದಕ ಔಷಧಗಳು ಸಾರ್ವಜನಿಕರಿಗೆ ಸುಲಭವಾಗಿ ಪೂರೈಕೆಯಾಗಿ, ಸಮಾಜದ ಆರೋಗ್ಯ ಹದಗೆಡೆಉವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

        ಔಷಧಿ ಅಂಗಡಿಯವರು ಯಾರೂ ಸಹ ಅಮಲು ಬರುವಂತಹ ಔಷಧಗಳನ್ನು ಕೇಳಿದವರಿಗೆ ಕೊಡುವುದಿಲ್ಲ. ವೈದ್ಯರು ಚೀಟಿ ಬರೆದರೆ ಮಾತ್ರ ನೀಡುತ್ತವೆ. ಆದರೆ, ಆನ್‍ಲೈನ್‍ನಲ್ಲಿ ಅಮಲು ಬರುಂತಹ ಔಷಧಿಗಳು ಮನೆ ಬಾಗಿಲಿಗೆ ಸುಲಭವಾಗಿ ತಲುಪಲಿದೆ ಇದರಿಂದ ಸಮಾಜದ ಸ್ವಾಸ್ಥ್ಯವೂ ಹಾಳಾಗಲಿದೆ.

        ಅಲ್ಲದೇ, ಆನ್‍ಲೈನ್ ಮಾರಾಟದಿಂದ ನಕಲಿ, ಮಾಧಕ ಔಷಧಗಳ ವ್ಯಾಪಾರ ಇತಿಮಿತಿ ಇಲ್ಲದಂತೆ ನಡೆಯಲು ರಹದಾರಿ ಮಾಡಿಕೊಟ್ಟಂತೆ ಆಗುತ್ತಿದೆ. ಯುವಜನತೆ ಇದಕ್ಕೆ ಬಲಿಪಶುಯಾಗಿ, ಜೀವನ ಕಳೆದುಕೊಳ್ಳುವಂತಹ ಪರಿಸ್ಥಿತಿಯೂ ಎದುರಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

      ಆನ್‍ಲೈನ್‍ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಈ ಕ್ರಮ ಸರಿಯಲ್ಲ. ತಕ್ಷಣವೇ ಆನ್‍ಲೈನ್‍ನಲ್ಲಿ ಔಷಧ ಮಾರಾಟ ಮಾಡಲು ಅನುವಾಗುವಂತೆ ಇ.ಫಾರ್ಮಸಿಗೆ ಕರಡು ನಿಯಮಾವಳಿ ಹೊರಡಿಸಿರುವುದನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು. ಯಾವುದೇ ಕಾರಣಕ್ಕೂ ಆನ್‍ಲೈನ್‍ನಲ್ಲಿ ಔಷಧಿ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಬಾರದು ಎಂದು ಪ್ರತಿಭಟನಾನಿರತ ಔಷಧಿ ಅಂಗಡಿಗಳ ಮಾಲೀಕರು, ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

       ಈ ಸಂದರ್ಭದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುನಿಲ್ ದಾಸಪ್ಳ, ಕೆ. ನಾಗರಾಜ್, ಎಸ್. ಗೋಪಾಲಕೃಷ್ಣ, ಖಜಾಂಚಿಗಳಾದ ಲಿಂಗರಾಜು ವಾಲಿ, ವೆಂಕಟರಾಜು, ನಿತೀಶ್ ಕುಮಾರ್ ಜೈನ್, ರವಿಚಂದ್ರ ನಾಯಕ್, ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ಬಿ.ಓ.ಮಲ್ಲಿಕಾರ್ಜುನ, ವಿರೂಪಾಕ್ಷಪ್ಪ ಕಡ್ಲಿ, ಸುನೀಲ್ ಮತ್ತಿತರರು ಹಾಜರಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap