ಚಿತ್ರದುರ್ಗ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯಿದೆ ಒಂದು ಐತಿಹಾಸಿಕ ತೀರ್ಮಾನವಾಗಿದೆ. ಇದರಿಂದ ಭಾರತದಲ್ಲಿನ ಯಾವುದೇ ಮುಸ್ಲೀಮರಿಗೆ ತೊಂದರೆ ಆಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಕೆಳಗೋಟೆಯ 30ನೇ ವಾರ್ಡ್‍ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯಿದೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರದ ನಾಗರೀಕರ ಮನೆ ಮನೆಗಳಿಗೆ ಭೇಟಿ ನೀಡಿ ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಅರಿವು ಮೂಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದ ಅಭಿವೃದ್ಧಿಗಾಗಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅಂತಹ ಯೋಜನೆಗಳಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯೂ ಒಂದಾಗಿದೆ. ಆದರೆ ಇಂತಹ ಕಾಯಿದೆ ಕುರಿತು ಬಿಜೆಪಿಯ ವಿರೋಧಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ವಿರೋಧ ಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಹಾಗಾಗಿ ದೇಶದ ನಾಗರೀಕರು ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂದು ಸಲಹೆ ಮಾಡಿದರು.
ಪೌರತ್ವ ತಿದ್ದುಪಡಿ ಕಾಯಿದೆಯನ್ನು ನಿರಾಶ್ರಿತರಿಗೆ ನೆಲೆ ಒದಗಿಸುವು ಉದ್ದೇಶದಿಂದ ಜಾರಿ ಮಾಡಲಾಗಿದೆ. ಇದು ಪೌರತ್ವ ನೀಡುವ ಕಾಯಿದೆಯೇ ಹೊರತು, ಪೌರತ್ವ ಕಿತ್ತುಕೊಳ್ಳುವುದು ಅಥವಾ ರದ್ದು ಮಾಡುವ ಯೋಜನೆಯಲ್ಲ. ಹಾಗಾಗಿ ಯಾರೂ ಸಹ ಈ ಕಾಯಿದೆ ಬಗ್ಗೆ ಆತಂಕಪಡಬೇಕಾಗಿಲ್ಲ. ಅದರಲ್ಲೂ ಭಾರತದಲ್ಲೇ ನೆಲೆಸಿರುವ ಮುಸ್ಲೀಮರಿಗೆ ಈ ಕಾಯಿದೆಯಿಂದ ಯಾವುದೇ ತೊಂದರೆ ಇಲ್ಲ. ಹಾಗಾಗಿ ವಿರೋಧ ಪಕ್ಷಗಳ ದಾರಿ ತಪ್ಪಿಸುವ ಮಾತಿಗಳಿಗೆ ಬೆಲೆ ನೀಡಬಾರದು ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ಮಾಡುವ ಮೂಲಕ ಭಾರತೀಯ ಮುಸ್ಲೀಮರ ಪೌರತ್ವ ಕಿತ್ತುಕೊಳ್ಳಲಾಗುತ್ತದೆ. ಮುಸ್ಲೀಮರೆಲ್ಲರೂ ನುಸುಳುಕೋರರು ಎಂದು ತೀರ್ಮಾನಿಸಲಾಗುತ್ತದೆ. ಈ ಕಾಯಿದೆ ಜಾರಿಗೆ ತಂದು ಮುಸ್ಲೀಮರನ್ನು ದೇಶದಿಂದ ಹೊರ ಹಾಕಲಾಗುತ್ತದೆ ಎಂದು ವಿರೋಧ ಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಇದರಿಂದ ಪ್ರಚೋದಿತರಾದ ಜನರು ಪ್ರತಿಭಟನೆ ನಡೆಸುವ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪದ ಹಿಂದೆ ವಿರೋಧ ಪಕ್ಷಗಳ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶ್ಯಾಮಲಾ ಶಿವಪ್ರಕಾಶ್, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್ ಮಾರಘಟ್ಟ, ನಗರ ಘಟಕದ ಅಧ್ಯಕ್ಷ ಶಶಿಧರ್, ಮಾಜಿ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ನಗರಸಭೆ ಸದಸ್ಯರಾದ ಅನುರಾಧ ರವಿಕುಮಾರ್, ಅಂಗಡಿ ಮಂಜಣ್ಣ, ಸ್ಲಂ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸ್ಲಾಂಪಾಷ, ಮಹಂತೇಶ್, ಬಸಮ್ಮ ಸೇರಿದಂತೆ ನೂರಾರು ಸಂಖ್ಯೆಯ ಕಾರ್ಯಕರ್ತರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
