ಪಟ್ಟು ಬಿಡದ ಅನರ್ಹರು : ಸಿಎಂಗೆ ತಲೆನೋವಾದ ಸಂಪುಟ ವಿಸ್ತರಣೆ

ಬೆಂಗಳೂರು

      ವಿಧಾನಸಭೆಯ 15 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿರುವ 12 ಮಂದಿ ನೂತನ ಶಾಸಕರು ತಾವು ಸಚಿವರಾಗದೆ ವಿಧಾನ ಮಂಡಲದ ಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

     ಕೇವಲ ಶಾಸಕರಾಗಿ ವಿಧಾನಸಭಾ ಅಧಿವೇಶನಕ್ಕೆ ಹಾಜರಾದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನವರಿಂದ ತೀವ್ರ ಮುಜುಗುರಕ್ಕೊಳಗಾಗಬೇಕಾಗುತ್ತದೆ. ಹೀಗಾಗಿ, ಸಂಪುಟ ವಿಸ್ತರಿಸಿ ಸಚಿವ ಸ್ಥಾನ ನೀಡುವಂತೆ ಒತ್ತಡ ಹೇರಿದ್ದಾರೆ.
ಶೀಘ್ರ ಸಚಿವ ಸಂಪುಟ ವಿಸ್ತರಣೆ ಮಾಡಿ ನಮ್ಮನ್ನು ಸಚಿವರನ್ನಾಗಿ ಮಾಡಬೇಕು. ಇಲ್ಲದಿದ್ದರೆ ನಾವು ಅಧಿವೇಶನದಿಂದ ದೂರ ಉಳಿಯುತ್ತೇವೆಂದು ಕಡ್ಡಿ ಮುರಿದಂತೆ ದೊರೆ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳಲು ಈ ಶಾಸಕರು ಮುಂದಾಗಿದ್ದಾರೆ.

     ಡಿ. 9 ರಂದು ಪ್ರಕಟಗೊಂಡ ಚುನಾವಣಾ ಫಲಿತಾಂಶದಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ 12 ಮಂದಿ ಜಯಗಳಿಸಿದ್ದು, ಈಗಾಗಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ನೂತನ ಶಾಸಕರಾಗಿರುವ ಅವರು, ಮಂತ್ರಿ ಸ್ಥಾನಗಳಿಗಾಗಿ ಪಟ್ಟು ಹಿಡಿದಿದ್ದು, ಯಡಿಯೂರಪ್ಪ ಅವರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುವ ನೆಪವನ್ನು ಮುಂದಿಟ್ಟುಕೊಂಡು ನಾಳೆ ಮುಖ್ಯಮಂತ್ರಿಯವರ ನಿವಾಸದ ದವಳಗಿರಿಯಲ್ಲಿ ಭೇಟಿ ಮಾಡಿ ತಮ್ಮ ಹಕ್ಕೊತ್ತಾಯವನ್ನು ಮಂಡಿಸಲು ಸಿದ್ಧತೆ ನಡೆಸಿದ್ದಾರೆ.

    14 ತಿಂಗಳ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣೀಭೂತರಾಗಿರುವ ಶಾಸಕರು ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಅಲಂಕರಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದು, ಶಾಸಕರಾಗಿ ಗೆದ್ದು ಬಂದು ತಿಂಗಳಾದರೂ ಮಂತ್ರಿ ಸ್ಥಾನ ಸಿಗದಿರುವುದು ಅವರಲ್ಲಿ ತೀವ್ರ ಅತೃಪ್ತಿ- ಅಸಮಾಧಾನ ಮೂಡಿಸಿದೆ.

    ಈ ಎರಡೂ ಪಕ್ಷಗಳ ಚಿಹ್ನೆಯಡಿ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಅನರ್ಹತೆ ಆಧಾರದ ಮೇಲೆ ಶಾಸಕ ಸ್ಥಾನಗಳನ್ನು ಕಳೆದುಕೊಂಡಿದ್ದೆವು. 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಅಧಿವೇಶನಕ್ಕೆ ಹಾಜರಾದಲ್ಲಿ ಈ ಎರಡೂ ಪಕ್ಷಗಳ ಶಾಸಕರು ನಮ್ಮನ್ನು ಹಂಗಿಸಲಿದ್ದಾರೆ ಎಂಬುದು ಅವರ ಅಂತರಂಗದ ನೋವಾಗಿದೆ.

   ಶಾಸಕರಾಗುವ `ಸಂಪತ್ತಿ’ಗೆ ರಾಜೀನಾಮೆ ಏಕೆ ನೀಡಬೇಕಾಗಿತ್ತು? ಮಾತೃ ಪಕ್ಷಗಳಲ್ಲೆ ಉಳಿದುಕೊಂಡಿದ್ದರೆ ಗೌರವವಾದರೂ ಇರುತ್ತಿತ್ತು. ಯಾವ ಪುರುಷಾರ್ಥಕ್ಕಾಗಿ ರಾಜೀನಾಮೆ ನೀಡಬೇಕಾಗಿತ್ತು ಎಂಬೆಲ್ಲ ವ್ಯಂಗ್ಯದ ಮಾತುಗಳನ್ನು ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ನಮ್ಮನ್ನು ರಕ್ಷಿಸಬೇಕು. ಶೀಘ್ರ ಸಚಿವ ಸಂಪುಟ ವಿಸ್ತರಣೆ ಮಾಡಿ ನಮ್ಮನ್ನು ಸಚಿವರನ್ನಾಗಿ ಮಾಡಬೇಕು. ಇಲ್ಲದಿದ್ದರೆ ನಾವು ಅಧಿವೇಶನದಿಂದ ದೂರ ಉಳಿಯಬೇಕಾಗುತ್ತದೆ ಎಂದು ಕಡ್ಡಿ ಮುರಿದಂತೆ ದೊರೆ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳಲು ಶಾಸಕರು ಮುಂದಾಗಿದ್ದಾರೆ.

    ಧರ್ನುಮಾಸ, ಜಾರ್ಖಂಡ್ ಚುನಾವಣೆ, ಪೌರತ್ವ ತಿದ್ದುಪಡಿ ಕಾಯ್ದೆ, ಸಂಸತ್ತಿನಲ್ಲಿ ಅಂಗೀಕಾರದಿಂದ ದೇಶಾದ್ಯಂತ ಉಂಟಾದ ಉದ್ವಿಗ್ನ ಪರಿಸ್ಥಿತಿ ಮತ್ತಿತರ ಕಾರಣಗಳನ್ನು ನೀಡಿ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಮುಂದೂಡುತ್ತಲೆ ಬಂದಿರುವುದು ಅವರಲ್ಲಿ ಅಸಮಾಧಾನವುಂಟಾಗಲು ಕಾರಣವಾಗಿದೆ.

    2020ರ ನೂತನ ವರ್ಷ ಆರಂಭಕ್ಕೆ ಮುನ್ನವೆ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೂತನ ವರ್ಷಾಚರಣೆಯನ್ನು ಅದ್ಧೂರಿಯಾಗಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಡುವೆ ಆಚರಿಸಬೇಕೆಂದು ತೀರ್ಮಾನಿಸಿದ್ದರು. ಅವರ ಉದ್ದೇಶಿತ ಸಂಭ್ರಮಾಚರಣೆಗೆ ಇನ್ನೂ ಭೂಮಿಕೆ ಸಿದ್ಧವಾಗುವ ಲಕ್ಷಣಗಳು ಕಂಡು ಬಂದಿಲ್ಲವಾದ ಕಾರಣ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿ, ತಮಗೆ ಭರವಸೆ ನೀಡಿರುವಂತೆ ಪ್ರಮುಖ ಖಾತೆಗಳನ್ನು ನೀಡಬೇಕೆಂಬ ಒತ್ತಾಯವನ್ನು ಎಲ್ಲ ಬಿಜೆಪಿಯ ನೂತನ ಶಾಸಕರು ಮುಂದಿಡಲು ತೀರ್ಮಾನಿಸಿದ್ದಾರೆ.

    15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅನರ್ಹ ಶಾಸಕರ ಪೈಕಿ 12 ಮಂದಿ ಜಯಗಳಿಸಿದ್ದು, ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

    ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್. ವಿಶ್ವನಾಥ್ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಶರವಣ ಅವರಿಗೆ ಸೋಲುಂಟಾಗಿದ್ದು, ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ.

    ಹುಣಸೂರಿನಲ್ಲಿ ಕಾಂಗ್ರೆಸ್ನ ಮಂಜುನಾಥ್ ಮತ್ತು ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ.
ಈ ನಡುವೆ ಬಿಜೆಪಿಯ ಹಿರಿಯ ಶಾಸಕರಲ್ಲಿ ಅನೇಕರು ಸಚಿವ ಸ್ಥಾನಗಳ ಆಕಾಂಕ್ಷಿಗಳಾಗಿದ್ದು, ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ದುಂಬಾಲು ಬೀಳುತ್ತಿರುವುದು ಸಂಪುಟ ವಿಸ್ತರಣೆಗೆ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ.

    ಹಿರಿಯ ಶಾಸಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮತ್ತಿತರರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಮುಖಂಡರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಇಂದೂ ಸಹ ಉಮೇಶ್ ಕತ್ತಿ ಮತ್ತು ಎಂ.ಟಿ.ಬಿ ನಾಗರಾಜ್ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅವರ ಡಾಲರ್ಸ್ ಕಾಲನಿ ನಿವಾಸದಲ್ಲಿ ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದರು.

   ಮತ್ತೊಂದೆಡೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ಎಂ.ಟಿ.ಬಿ ನಾಗರಾಜ್ ಮತ್ತು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರೆಯದ ಅನರ್ಹ ಶಾಸಕ ಆರ್. ಶಂಕರ್ ಸಚಿವ ಸ್ಥಾನಗಳಿಗಾಗಿ ಲಾಬಿ ನಡೆಸಿದ್ದಾರೆ.ಚುನಾವಣೆಗೂ ಮುನ್ನ ತಮಗೆ ಸಚಿವ ಸ್ಥಾನ ನೀಡಿ ಪ್ರಮುಖ ಖಾತೆಯನ್ನು ನೀಡುವುದಾಗಿ ಭರವಸೆಯಂತೆ ತಮ್ಮನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಎಂ.ಟಿ.ಬಿ ನಾಗರಾಜ್ ಪಟ್ಟು ಹಿಡಿದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap