ತುಮಕೂರು:
ಶಿರಾ ವಿಧಾನಸಭಾ ಉಪ ಚುನಾವಣೆಗೆ ಒಳ ಮೀಸಲಾತಿ ಹೋರಾಟಗಾರರಿಂದ ಅಭ್ಯರ್ಥಿಯನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಹಕ್ಕೊತ್ತಾಯ ಸಮಿತಿ, ಕರ್ನಾಟಕ, ತುಮಕೂರು ಘಟಕ ಇವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಬಹುಸಂಖ್ಯಾತರಾದ ಮಾದಿಗರಿಂದ ಕೇಳಿಬರುತ್ತಿರುವ ಬಹುದೊಡ್ಡ ಕೂಗು ಏನೆಂದರೆ, ಅದು ಒಳ ಮೀಸಲಾತಿ ಜಾರಿಗೊಳಿಸಿ ಎಂದು. ಇದಕ್ಕೆ ರಾಜ್ಯದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷಗಳು ಒಂದೇ ನಾಣ್ಯದ ರೀತಿ ನಮಗೆ ವಂಚಿಸುತ್ತಾ ಬಂದಿವೆ. ಇವರಿಗೆ ಚುನಾವಣೆಗಳು ಬಂದಾಗ ಮಾತ್ರ ಬಹುಸಂಖ್ಯಾತರಾದ ಮಾದಿಗರ ಮೇಲೆ ಎಲ್ಲಿಲ್ಲದ ಪ್ರೀತಿ, ಪ್ರೇಮ, ಕರುಣೆ ಉಕ್ಕಿ ಬರುತ್ತದೆ ಎಂದು ತಿಳಿಸಿದೆ.
ತುಮಕೂರು ಜಿಲ್ಲೆಯಲ್ಲಿ ಬಹುಸಂಖ್ಯಾತ ಮಾದಿಗರು ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ, ತುಮಕೂರು ಗ್ರಾಮಾಂತರದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತದಾರರನ್ನು ಹೊಂದಿದ್ದು, ಜಿಲ್ಲೆಯಲ್ಲಿ 4 ರಿಂದ 5 ಜನ ನಮ್ಮ ಸಮುದಾಯದವರೆ ವಿಧಾನಸಭೆಗೆ ಚುನಾಯಿತರಾಗಿ ಆಯ್ಕೆಯಾಗಬಹುದು. ಆದರೆ ಅಧಿಕಾರದ ವ್ಯಾಮೋಹದಲ್ಲಿರುವ ಇತರೆ ಬಲಾಢ್ಯ ಜಾತಿಗಳು ನಮ್ಮಲ್ಲಿರುವ ಒಗ್ಗಟ್ಟನ್ನು ಒಡೆಯಲು ನಮ್ಮ ನಮ್ಮಲ್ಲೇ ನಮ್ಮನ್ನು ಹಂಚಿ ಒಡೆದು ಹಾಳುವ ನೀತಿಯಿಂದ ನಮ್ಮ ಶಕ್ತಿ ನಮಗೇ ತಿಳಿಯದಂತೆ ಮಾಡಿದ್ದಾರೆಂದರು.
ಶಿರಾ ಉಪ ಚುನಾವಣೆಗೆ ನಮ್ಮ ಸಮುದಾಯದ ನಾಯಕರನ್ನು ನಿಲ್ಲಿಸಿ ಅವರಿಗೆ ಶಕ್ತಿ ತುಂಬಲು ತೀರ್ಮಾನಿಸಲಾಗಿದೆ ಹಾಗೂ ನಮ್ಮ ಬಹುದಿನಗಳ ಬೇಡಿಕೆಯಾದ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ವಿಫಲರಾದ ಪಕ್ಷಗಳನ್ನು ಪ್ರಶ್ನಿಸಲು ಕಲಿಯೋಣ ನಮ್ಮ ಒಗ್ಗಟ್ಟನ್ನು ತೋರಿಸೋಣ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಜಿಲ್ಲಾ ಮಾದಿಗ ಮಹಾ ಸಭಾ ತುಮಕೂರು, ಎ.ಜೆ.ಸದಾಶಿವ ಆಯೋಗ ಜಾರಿ ಹಕ್ಕೊತ್ತಾಯ ಸಮಿತಿ, ದಲಿತ ಸಂರಕ್ಷಣಾ ಸಮಿತಿ, ಮಾದಿಗ ಸಮನ್ವಯ ಹೋರಾಟ ಸಮಿತಿ, ದಲಿತ ಭೂಮಿ ಹಕ್ಕು ಹಿತರಕ್ಷಣಾ ಸಂಘಟನೆಗಳ ಬೆಂಬಲದೊಂದಿಗೆ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ