ಕಾಂಗ್ರೆಸ್ ನಲ್ಲಿ ಒಳಜಗಳಕ್ಕೆ ಕಾರಣವಾದ ಅಭ್ಯರ್ಥಿ ಆಯ್ಕೆ..!

ಬೆಂಗಳೂರು

      ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಕ್ಯಾಂಡಿಡೇಟ್‍ಗಳ ಆಯ್ಕೆಗೆ ಮುಂದಾಗಿರುವ ಕಾಂಗ್ರೆಸ್‍ನಲ್ಲಿ ಒಳಜಗಳ ಆರಂಭವಾಗಿದ್ದು ಮತ್ತೆ ಮೂಲ ಕಾಂಗ್ರೆಸ್-ವಲಸಿಗ ಕಾಂಗ್ರೆಸ್ಸಿಗರ ನಡುವೆ ಜಟಾಪಟಿ ಆರಂಭವಾಗಿದೆ.

       ಈಗಾಗಲೇ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿರುವ ರಾಜ್ಯ ಕಾಂಗ್ರೆಸ್ ಬಾಕಿ ಉಳಿದಿರುವ ಏಳು ಕ್ಷೇತ್ರಗಳ ಕ್ಯಾಂಡಿಡೇಟ್‍ಗಳ ಆಯ್ಕೆಗೆ ಇಂದು ಕಸರತ್ತು ನಡೆಸಿತಾದರೂ ಪಕ್ಷದ ಉಭಯ ಬಣಗಳ ಕಚ್ಚಾಟದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಕಾದು ನೋಡಲು ತೀರ್ಮಾನಿಸಿತು.

      ಈಗಾಗಲೇ ಸಿದ್ಧವಾಗಿರುವ ಏಳು ಮಂದಿ ಕ್ಯಾಂಡಿಡೇಟುಗಳ ಪಟ್ಟಿಯಲ್ಲಿ ನಿಮ್ಮ ಬೆಂಬಲಿಗರೇ ಹೆಚ್ಚಾಗಿದ್ದು ಮೂಲ ಕಾಂಗ್ರೆಸ್ಸಿಗರ ಶಕ್ತಿ ಕಡಿಮೆಯಾಗಿದೆ.ಹೀಗಾಗಿ ಈಗ ಎರಡನೇ ಪಟ್ಟಿಯಲ್ಲಿ ನಾವು ಹೇಳಿದವರಿಗೆ ಟಿಕೆಟ್ ಕೊಡಬೇಕು ಎಂದು ಡಿಕೆಶಿ ಗ್ಯಾಂಗು ಸಿದ್ಧು ಗ್ಯಾಂಗ್ ವಿರುದ್ಧ ಮುಗಿಬಿದ್ದಿದೆ.

     ಗೋಕಾಕ್ ಕ್ಷೇತ್ರದಿಂದ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಬೇಕು ಎಂದು ಸಿದ್ಧರಾಮಯ್ಯ ಗ್ಯಾಂಗು ವಾದಿಸಿದರೆ,ಅಶೋಕ್ ಪೂಜಾರಿ ಅವರಿಗೆ ಟಿಕೆಟ್ ನೀಡುವಂತೆ ಡಿಕೆಶಿ ಗ್ಯಾಂಗು ಪಟ್ಟು ಹಿಡಿದಿದೆ.ಜಾರಕಿಹೊಳಿ ಬ್ರದರ್ಸ್ ರಾಜಕೀಯಕ್ಕೆ ತಲೆಬಾಗುವುದು ಬೇಡ.ಸಹೋದರರು ಮಾತನಾಡಿಕೊಂಡು ಒಂದೊಂದು ಕಡೆ ಇರುತ್ತಾರೆ.ತಮ್ಮ ಹಿತ ಕಾಪಾಡಿಕೊಳ್ಳುತ್ತಾರೆ.ಆದರೆ ಅವರ ಹಿಡಿತದಿಂದ ಗೋಕಾಕ್ ಕ್ಷೇತ್ರ ಮುಕ್ತವಾಗಬೇಕು.

     ಹೀಗಾಗಿ ಜಾರಕಿಹೊಳಿ ಫ್ಯಾಮಿಲಿಯವರಿಗೆ ಗೋಕಾಕ್ ಕ್ಷೇತ್ರದ ಟಿಕೆಟ್ ಕೊಡುವುದು ಬೇಡ ಎಂದು ಡಿಕೆಶಿ ಗ್ಯಾಂಗು ಪಟ್ಟು ಹಿಡಿದಿದ್ದು ಈ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿಯಲ್ಲಿ ನಡೆದ ಚರ್ಚೆ ಅಪೂರ್ಣವಾಗಿದೆ ಎಂದು ಮೂಲಗಳು ಹೇಳಿವೆ.ಇದೇ ರೀತಿ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ರಾಜುಕಾಗೆ ಅವರಿಗೆ ಟಿಕೆಟ್ ನೀಡಬೇಕು.ಸಧ್ಯಕ್ಕೆ ಅವರು ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ಟಿಕೆಟ್ ದೊರೆತರೆ ಬರಲು ಸಿದ್ಧರಾಗಿದ್ದಾರೆ ಎಂದು ಡಿಕೆಶಿ ಗ್ಯಾಂಗು ಹೇಳಿದೆ.

     ಹೀಗೆ ರಾಜ್ಯ ಕಾಂಗ್ರೆಸ್‍ನಲ್ಲಿ ಮೂಲ ಕಾಂಗ್ರೆಸ್ಸಿಗರು,ವಲಸಿಗ ಕಾಂಗ್ರೆಸ್ಸಿಗರ ನಡುವೆ ಕಚ್ಚಾಟ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲು ನಿರ್ಧರಿಸಲಾಗಿದೆ.ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಇಂದು ನಡೆದ ಸಭೆ ಅಪೂರ್ಣಗೊಂಡಿದ್ದು ಬುಧವಾರದ ನಂತರ ಪುನ: ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದರು.

      ಬಹುತೇಕ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಂದೆರಡು ಕ್ಷೇತ್ರಗಳ ವಿಷಯದಲ್ಲಿ ಅಂತಿಮ ತೀರ್ಮಾನವಾಗಿಲ್ಲ.ಆದರೆ ಈ ವಿಷಯದಲ್ಲಿ ಯಾವ ರೀತಿಯ ತೊಂದರೆಯೂ ಇಲ್ಲ ಎಂದರು.ಕೆಪಿಸಿಸಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ದಿನೇಶ್ ಗುಂಡೂರಾವ್,ಸಿದ್ಧರಾಮಯ್ಯ,ಡಿ.ಕೆ.ಶಿವಕುಮಾರ್,ಈಶ್ವರ ಡ್ರೆ,ಎಸ್.ಆರ್.ಪಾಟೀಲ್ ,ಕೆ.ಜೆ.ಜಾರ್ಜ್ ,ಉಮಾಶ್ರೀ ,ರಮೇಶ್ ಕುಮಾರ್,ಎಂ.ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap