ದಾವಣಗೆರೆ:
ಮಹಾನಗರ ಪಾಲಿಕೆ ಚುನಾವಣೆ ಮುಗಿದ ಮರು ದಿನ ದಾವಣಗೆರೆ ಶಾಂತವಾಗಿದ್ದು, ಈಗೇನಿದ್ದರೂ ಅಭ್ಯರ್ಥಿಗಳ ಮತ್ತು ಸಾರ್ವಜನಿಕರ ಚಿತ್ತ ಗುರುವಾರ ಪ್ರಕಟವಾಗುವ ಫಲಿತಾಂಶದತ್ತ ಹೊರಳಿದೆ.
ಭಾರೀ ಕುತೂಹಲ:
ಮಂಗಳವಾರ ನಡೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 45 ವಾರ್ಡುಗಳಿಂದ ಕಣದಲ್ಲಿದ್ದ 208 ಅಭ್ಯರ್ಥಿಗಳ ಭವಿಷ್ಯವು ವಿದ್ಯುನ್ಮಾನ ಮತಯಂತ್ರ(ಇವಿಎಂ)ದಲ್ಲಿ ಭದ್ರವಾಗಿದೆ. ಅಭ್ಯರ್ಥಿಗಳು, ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರಲ್ಲಿ ಫಲಿತಾಂಶದ ಬಗ್ಗೆ ಕುತೂಹಲ ಉಂಟಾಗಿದ್ದು, ಯಾರು ಗೆಲ್ಲುತ್ತಾರೆಂಬ ಚರ್ಚೆ ನಡೆಯುತ್ತಿರುವುದಲ್ಲದೇ, ಗೆಲ್ಲುವ ಕುದುರೆಗಳ ಮೇಲೆ ಭರ್ಜರಿ ಬೆಟ್ಟಿಂಗ್ ಸಹ ಕಟ್ಟಲಾಗುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ತಾಲೀಮು ನಡೆಸಿದ ನಾಯಕರು:
ಬಿಜೆಪಿ ಅಭ್ಯರ್ಥಿಗಳ ಜತೆಗೆ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರಪ್ಪ, ಮಾಡಾಳು ವಿರೂಪಾಕ್ಷಪ್ಪ, ಪ್ರೊ.ಎನ್.ಲಿಂಗಣ್ಣ, ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮತ್ತಿತರರು ಅಭ್ಯರ್ಥಿಗಳ ಗೆಲುವಿಗಾಗಿ ಅಬ್ಬರದ ಪ್ರಚಾರ ನಡೆಸಿ ಬೆವರಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಸೇರಿದಂತೆ ಇತರರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಾಮು ತೆದಿದ್ದರೆ, ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಚಿದಾನಂದಪ್ಪ ಸೇರಿದಂತೆ ಹಲವು ಮುಖಂಡರು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.
ಸೋಲು-ಗೆಲುವಿನ ಲೆಕ್ಕಾಚಾರ:
ಚುನಾವಣೆ ನಡೆದು ಎರಡೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಿರುವುದರಿಂದ ಪಾಲಿಕೆ ತಮ್ಮ ವಶ ಆಗಬಹುದೆಂಬ ಲೆಕ್ಕಾಚಾರದಲ್ಲಿ ಕೈ ಮತ್ತು ಕಮಲ ನಾಯಕರು ನಿರತರಾಗಿದ್ದರೆ, ಪಾಲಿಕೆಯಲ್ಲಿ ಅತಂತ್ರ ಸ್ಥಿತಿ ಉಂಟಾಗಲಿದ್ದು, ಯಾವುದೇ ಪಕ್ಷ ಅಧಿಕಾರ ಸ್ಥಾಪಿಸಲು ತೆನೆ ಹೊತ್ತ ಮಹಿಳೆಯ ಬೆಂಬಲ ಪಡೆಯಲೇಬೇಕೆಂಬ ಲೆಕ್ಕಚಾರದಲ್ಲಿ ಜೆಡಿಎಸ್ ಮುಖಂಡರು ನಿರತರಾಗಿದ್ದಾರೆ.
ಚುನಾವಣೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು, ಕಟ್ಟಾ ಕಾರ್ಯಕರ್ತರು ತಣ್ಣಗೆ ಮನೆ ಸೇರಿದ್ದಾರೆ. ವಾರವಿಡೀ ಬೀದಿಬೀದಿ ತಿರುಗಾಡಿ ಮತ ಯಾಚನೆ ಮಾಡಿದ ಅಭ್ಯರ್ಥಿಗಳು ಈಗ ವಾರ್ಡಿನ ಯಾವ ಭಾಗದಲ್ಲಿ ಯಾವ ಬೀದಿ ಜನ ಕೈ ಕೊಟ್ಟಿರಬಹುದು, ಜಾತಿವಾರು ಮತ ಪ್ರಮಾಣ ಎಷ್ಟಾಗಿದೆ. ನಮ್ಮ ಪಕ್ಷಗಳಿಂದ ಬಂಡಾಯದ ಬಾವುಟ ಬೀಸಿರುವವರು ನಮಗೆ ಮುಳುವಾಗಬಹುದು ಎಂಬ ಬಗ್ಗೆ ಕಾರ್ಯಕರ್ತರು ಮತ್ತು ಬೆಂಬಲಿಗರ ಜತೆ ಚರ್ಚೆ ನಡೆಸುತ್ತಿದ್ದಾರೆ.
ಮತದಾರನ ಮನೆ ಬಾಗಿಲಿಗೆ ಅಲೆದು ಮನವೊಲಿಕೆಗೆ ತನು ಮನ ಧನದೊಂದಿಗೆ ಹೋರಾಟ ನಡೆಸಿದ ಅಭ್ಯರ್ಥಿಗಳು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಆದರೂ ಫಲಿತಾಂಶದ ಗುಮ್ಮ ನಿದ್ದೆ ಮಾಡಲು ಬಿಡುತ್ತಿಲ್ಲ. ಯಾವ ಅಭ್ಯರ್ಥಿ ಗೆಲ್ಲುತ್ತಾರೆ? ಯಾವ ಪಕ್ಷ ಗೆಲ್ಲುತ್ತದೆ? ಕಾಂಗ್ರೆಸ್ ಈ ಬಾರಿ ಅಧಿಕಾರ ಕಳೆದುಕೊಳ್ಳಬಹುದೆ? ಬಿಜೆಪಿ ಗದ್ದುಗೆ ಏರಲು ಈ ಬಾರಿ ಮತದಾರರು ಅವಕಾಶ ನೀಡಿದ್ದಾರೆಯೇ? ಜೆಡಿಎಸ್ ಈ ಬಾರಿ ಪಾಲಿಕೆಯಲ್ಲಿ ಖಾತೆ ತೆರೆಯಬಹುದೆ? ಪಕ್ಷೇತರರು ಅಚ್ಚರಿ ಫಲಿತಾಂಶ ನೀಡಬಹುದೆ? ಈ ಚರ್ಚೆಗಳ ನಡುವೆಯೇ ಬೆಟ್ಟಿಂಗ್ ಕಟ್ಟುವ ಹಣ ಹೂಡಿಕೆಯೂ ನಡೆಯಲಾರಂಭಿಸಿದೆ. ಸಾವಿರದಿಂದ ಲಕ್ಷ ರೂ. ವರೆಗೂ ಬಾಜಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ