ಬಳ್ಳಾರಿ
ಬಳ್ಳಾರಿ ಲೋಕಸಭೆ ಉಪಚುನಾವಣೆಗೆ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.61.12ರಷ್ಟು ಮತದಾನವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ಮತಯಂತ್ರಗಳು ಅತ್ಯಂತ ಬಿಗಿಭದ್ರತೆಯಲ್ಲಿ ನಗರದ ಆರ್‍ವೈಎಂಇಸಿ ಎಂಜನಿಯರಿಂಗ್ ಕಾಲೇಜಿನಲ್ಲಿಡಲಾಗಿದ್ದು, ನ.6ರಂದು ಮತ ಏಣಿಕೆ ನಡೆಯಲಿದೆ. ಮತ ಏಣಿಕೆ ಸಿಬ್ಬಂದಿಯ ತರಬೇತಿ ಕಾರ್ಯ ಭಾನುವಾರ ಬೆಳಗ್ಗೆಯಿಂದ ಶುರುವಾಗಿದ್ದು, ಸೋಮವಾರ ಸಂಜೆಯವರೆಗೆ ನಡೆಯಲಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕವಾಗಿ ಕೋಣೆಗಳಲ್ಲಿಟ್ಟು, ಅಭ್ಯರ್ಥಿಗಳ ಚುನಾವಣಾ ಏಜೆಂಟರ(ಪ್ರತಿನಿಧಿಗಳ) ಸಮ್ಮುಖದಲ್ಲಿಯೇ ಅವುಗಳಿಗೆ ಮುಚ್ಚಿ ಭದ್ರತೆ ಒದಗಿಸಲಾಗಿದೆ.
ಈ ಲೋಕಸಭಾ ಉಪಚುನಾವಣೆಗೆ ನಿಯೋಜಿಸಲಾದ ಪೊಲೀಸ್ ಮತ್ತು ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ ಸ್ಟ್ರಾಂಗ್‍ರೂಮ್‍ಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನೆಲ್ಲಾ ನಡೆಸಲಾಯಿತು.
ಮತ ಏಣಿಕೆಗೆ ಸಂಬಂಧಿಸಿದ ಭದ್ರತೆ ಮತ್ತು ವಿವಿಧ ಸಿದ್ಧತೆಗಳನ್ನು ಪೊಲೀಸ್ ಮತ್ತು ಸಾಮಾನ್ಯ ವೀಕ್ಷಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಪರಿಶೀಲಿಸಿದರು.
ಕಂಪ್ಲಿ ಕ್ಷೇತ್ರದಲ್ಲಿ ಹೆಚ್ಚು, ಬಳ್ಳಾರಿ ನಗರದಲ್ಲಿ ಅತಿ ಕಡಿಮೆ ಮತದಾನ: ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದೆ. 237 ಮತಗಟ್ಟೆಗಳಲ್ಲಿ 213350 ಮತದಾರರಲ್ಲಿ 139597 ಮತದಾರರು ಮತಚಲಾಯಿಸಿದ್ದು, ಶೇ.65.43 ಮತದಾನವಾಗಿದೆ.
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 245 ಮತಗಟ್ಟೆಗಳಿದ್ದು, 233291 ಮತದಾರರಲ್ಲಿ 124932 ಮತದಾರರು ಮತಚಲಾಯಿಸಿದ್ದು,ಶೇ.53.55ರಷ್ಟು ಮತದಾನವಾಗಿದೆ. ಉಳಿದಂತೆ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ 182552 ಮತದಾರರಿಗೆ 216 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು,ಇಲ್ಲಿ 112990 ಮತದಾರರು ಮತದಾನ ಮಾಡಿದ್ದು, ಶೇ.61.89ರಷ್ಟು ಮತದಾನವಾಗಿದೆ. ಹಗರಿಬೊಮ್ಮನಳ್ಳಿಯಲ್ಲಿ ಶೇ.63.13, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.61.25, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶೇ.63.35ರಷ್ಟು ಮತದಾನವಾಗಿದೆ. ಸಂಡೂರು ಕ್ಷೇತ್ರದಲ್ಲಿ ಶೇ.63.51 ಮತ್ತು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 57.25ರಷ್ಟು ಮತದಾನವಾಗಿದೆ. ಪುರುಷರು ಶೇ.62.13ರಷ್ಟು ಮತಚಲಾಯಿಸಿದರೇ ಮಹಿಳಾ ಮತದಾರರು ಶೇ.60.13 ಹಾಗೂ ಇತರೆ ಶೇ.2.76ರಷ್ಟು ಜನರು ಮತಚಲಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ