ಬೆಂಗಳೂರು
ಹೊಸದಾಗಿ ಆರಂಭಿಸಲಿದ್ದ ಟಿವಿ ಶೋರೂಂನ ಮರಗೆಲಸಕ್ಕೆ ಬಂದು ಅಲ್ಲಿ ಶೇಖರಿಸಿದ್ದ ಎಲ್‍ಇಡಿ ಟಿವಿಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಖರ್ತನಾಕ್ ಬಡಗಿಯೊಬ್ಬನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿ 20 ಟಿವಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಸ್ತಾನ ನಾಗೋರ್ ಮೂಲದ ದೇವಾರಾಂ (22) ಬಂಧಿತ ಆರೋಪಿಯಾಗಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿದ್ದ ನರೇಂದ್ರ ಸೇರಿ ಇನ್ನಿಬ್ಬರಿಗಾಗಿ ಶೋಧ ನಡೆಸಲಾಗಿದ್ದು, ಬಂಧಿತನಿಂದ 3 ಲಕ್ಷ 66 ಸಾವಿರ ಮೌಲ್ಯದ 20 ಎಲ್‍ಇಡಿ ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ಬಂಡೇಪಾಳ್ಯದ ಚಂದಾಪುರದಲ್ಲಿ ದುರ್ಗಾರಾಂ ಎಂಬುವರು ಥಾಮ್ಸನ್ ಕಂಪನಿಯ ಹೊಸ ಶೋ ರೂಂನ್ನು ಆರಂಭಿಸಲು ಮುಂದಾಗಿ ಶೋ ರೂಂನ ಮರಗೆಲಸ ಮಾಡಿಸುತ್ತಿದ್ದರು. ಒಳ ಭಾಗದಲ್ಲಿ ಮರಗೆಲಸ ಮುಗಿದ ನಂತರ ಹೊಸ ಟಿವಿಗಳನ್ನು ತಂದು ಶೇಖರಿಸಲಾಗಿತ್ತು,
ಹೊರ ಭಾಗದಲ್ಲಿ ಮರಗೆಲಸ ಮಾಡುತ್ತಿದ್ದ ಆರೋಪಿಯು ಹೊಂಚು ಹಾಕಿ 20 ಟಿವಿಗಳನ್ನು ಕಳವು ಮಾಡಿಕೊಂಡು ತಾನು ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಮಾಗಡಿ ರಸ್ತೆಯ ಟೋಲ್‍ಗೇಟ್‍ಗೆ ತಂದಿಟ್ಟುಕೊಂಡಿದ್ದ.
ಅವುಗಳನ್ನು ನರೇಂದ್ರ ಎಂಬಾತನ ಮೂಲಕ ಪೂನಾದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದು, ಈ ಕೃತ್ಯದಲ್ಲಿ ಮತ್ತೊಬ್ಬ ಕೂಡ ಭಾಗಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಬಂಡೇಪಾಳ್ಯ ಪೊಲೀಸ್ ಇನ್ಸ್‍ಪೆಕ್ಟರ್ ಆರೋಪಿಯನ್ನು ಬಂಧಿಸಿ ಇನ್ನಿಬ್ಬರಿಗಾಗಿ ಶೋಧ ನಡೆಸಿದ್ದಾರೆಂದು ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
