ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ, ವ್ಯಾಜ್ಯಗಳೂ ಹೆಚ್ಚು

ದಾವಣಗೆರೆ:

    ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ, ನ್ಯಾಯಾಲಯಗಳಲ್ಲಿ ವ್ಯಾಜ್ಯ ಹೂಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ಸಿವಿಲ್ ನ್ಯಾಯಾಧೀಶ ಪಿ.ಜೆ.ಸೋಮಶೇಖರ ಕಳವಳ ವ್ಯಕ್ತಪಡಿಸಿದರು.ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಹೆಣ್ಣುಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ಭಾಗವಹಿಸಿ ಹೆಣ್ಣುಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ವಿಷಯ ಕುರಿತು ಮಾತನಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರ ಜೊತೆಗೆ ನ್ಯಾಯಾಲಯಗಳಲ್ಲಿ ವಿಚ್ಛೇದನ, ಜೀವನಾಂಶ ಕೋರಿಕೆ ಪ್ರಕರಣಗಳೂ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

    ಮನೆಯಲ್ಲಿ ಕುಳಿತು ಸುಲಭವಾಗಿ ಬಗೆಹರಿಸಿಕೊಳ್ಳಬಹುದಾದ ವಿಚಾರಗಳನ್ನು ಸಹ ಇತ್ತೀಚೆಗೆ ನ್ಯಾಯಾಲಯಗಳಿಗೆ ತರುತ್ತಿರುವುದು ಒಳ್ಳೆಯದಲ್ಲ. ಮನೆಯಲ್ಲಿನ ಹಿರಿಯರ ಬುದ್ಧಿ ಮಾತು ಕೇಳಿದರೆ ಸಣ್ಣಪುಟ್ಟ ಸಮಸ್ಯೆಗಳನ್ನು ಅಲ್ಲೇ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

    ಇನ್ನೊಬ್ಬರ ಹಕ್ಕುಗಳನ್ನು ಗೌರವಿಸಿದರೆ ಯಾವುದೇ ವಿವಾದ ಏರ್ಪಡುವುದಿಲ್ಲ. ಇದಾಗಬೇಕಾದರೆ, ಕಾನೂನು ಅರಿವು ಪಡೆಯುವುದರ ಜೊತೆಗೆ ಒಳ್ಳೆಯ ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು. ಈ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

    ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೊಳಿಸಿದೆ. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ ಎಂದ ಅವರು, ಆಸ್ತಿಯಲ್ಲಿ ಪುರುಷನಷ್ಟೇ ಮಹಿಳೆಗೂ ಸಮಾನ ಹಕ್ಕು ಇದೆ. ಸಾಮಾನ್ಯಜ್ಞಾನದ ತಳಹದಿಯ ಮೇಲೆ ಕಾನೂನುಗಳು ನಿಂತಿವೆ. ಇಂತಹ ಕಾನೂನುಗಳ ಬಗ್ಗೆ ಎಷ್ಟು ಅರಿತರೂ ಸಾಲದು ಎಂದರು.ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ಶೀಘ್ರ ವಿಲೇವಾರಿಯಾಗಿ, ತ್ವರಿತ ನ್ಯಾಯದಾನ ಆಗಬೇಕಾದರೆ, ವಕೀಲರ ಅಗತ್ಯ ಸಹಕಾರ ನೀಡಬೇಕೆಂದು ಕಿವಿಮಾತು ಹೇಳಿದರು

   ಕಾರ್ಯಕ್ರಮ ಉದ್ಘಾಟಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ, ಸ್ವಾಮಿ ವಿವೇಕಾನಂದರೂ ಚಿಕ್ಕಂದಿನಿಂದಲೇ ಪ್ರತಿಯೊಂದನ್ನು ವಿಚಕ್ಷಣ ಬುದ್ಧಿಯಿಂದ ನೋಡುವವರಾಗಿದ್ದರು. ಎಲ್ಲವನ್ನೂ ಪ್ರಶ್ನಿಸುವ ಮನೋಭಾವ ಹೊಂದಿದ್ದರು. ಅವರಂತೆಯೇ ಈಗಿನ ಯುವ ಪೀಳಿಗೆಯು ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳುವ ಮೂಲಕ ಸಾಧನೆಗೆ ಮುಂದಾಗಬೇಕೆಂದು ಕರೆ ನೀಡಿದರು.

   ಸ್ವಾಮಿ ವಿವೇಕಾನಂದರು 7ನೇ ವಯಸ್ಸಿನಲ್ಲೇ ರಾಮಾಯಣ, ಮಹಾಭಾರತ ಬಲ್ಲವರಾಗಿದ್ದರು. ದೀನದಲಿತರು ಹಾಗೂ ಮಹಿಳೆಯರ ಬಗ್ಗೆ ಅಪಾರ ಗೌರವ, ಕಾಳಜಿ ಹೊಂದಿರುವುದರ ಜೊತೆಗೆ ಯುವಶಕ್ತಿಯ ಮೇಲೆ ಭರವಸೆ ಇಟ್ಟಿದ್ದರು. ಇಂತಹವರ ಜಯಂತಿ ಆಚರಣೆ ಮೂಲಕ ಅವರ ವಿಚರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪರಿವರ್ತನೆ ತರುವ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.ಅಧಿವಕ್ತಾ ಪರಿಷತ್ ರಾಜ್ಯ ಉಪಾಧ್ಯಕ್ಷ ಪ್ರಕಾಶ ರಾವ್ ಅಧ್ಯಕ್ಷತೆ ವಹಿಸಿದ್ದರು.

  ಪರಿಷತ್ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಿ.ಪಿ.ಅನಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೈಕೋರ್ಟ್ ವಕೀಲ ಮಧುಕರ್ ದೇಶಪಾಂಡೆ ಅವರು ವಿದ್ಯುನ್ಮಾನ ಸಾಕ್ಷಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ವಕೀಲ ಮಂಜಪ್ಪ ಕಾಕನೂರು ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap