ವಂಚನೆಗೆ ಸಹಕರಿಸಿದ ಇಬ್ಬರನ್ನು ಸಿಸಿಬಿ ಬಲೆಗೆ

ಬೆಂಗಳೂರು

        ಬಂಧಿತ ಆನ್ ಲೈನ್ ವಂಚಕರಿಗೆ ತಮ್ಮ ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ್ ನೀಡಿ ವಂಚನೆಗೆ ಸಹಕರಿಸಿದ ಇಬ್ಬರನ್ನು ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

         ಗೌರಿಬಿದನೂರಿನ ವಿದ್ಯಾನಗರದ ಕಮಲಾಕರ (26) ಹಾಗೂ ಎಂ.ಜಿ. ರಸ್ತೆಯ ವಿನೋದ್ (28) ಬಂಧಿತ ಆರೋಪಿಗಳಾಗಿದ್ದಾರೆ. ಇವರ ಬಂಧನದಿಂದ ಅನ್‍ಲೈನ್ ವಂಚಕರು ನಡೆಸಿದ್ದ 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

          ಕಳೆದ ಅಕ್ಟೋಬರ್ 14 ರಂದು ಆನ್ ಲೈನ್ ವಂಚನೆ ಮಾಡುತ್ತಿದ್ದ ಹೊಸರೋಡ್‍ನ ರಾಘವೇಂದ್ರ (24), ವಿದ್ಯಾನಗರದ ರಾಕೇಶ್ ಎಂಬುವವರನ್ನು ಬಂಧಿಸಿ, ನಡೆಸಿದ ವಿಚಾರಣೆಯಲ್ಲಿ ವಂಚನೆಗೆ ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ್ ನೀಡಿದ್ದವರ ಮಾಹಿತಿ ನೀಡಿದ್ದರು

        ಈ ಸಂಬಂಧ ಕಾರ್ಯಾಚರಣೆ ನಡೆಸಿ, ಈ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ವಿನೋದ್ ಹಾಗೂ ಕಮಲಾಕರ್ ಬ್ಯಾಂಕ್ ಖಾತೆಗಳನ್ನು ತೆರೆದು ರಾಘವೇಂದ್ರ ಹಾಗೂ ರಾಕೇಶ್‍ಗೆ ಡೆಬಿಟ್ ಕಾರ್ಡ್ ನೀಡಿ ವಂಚನೆಗೆ ಸಹಕರಿಸುತ್ತಿದ್ದರು. ಆರೋಪಿಗಳು ಕಾವಲ್ ಬೈರಸಂದ್ರದ ಬಳಿ ಇರುವ ಖಚಿತ ಮಾಹಿತಿ ಆಧರಿಸಿ ಬಂಧಿಸಲಾಗಿದೆ.

         ಕಳೆದ ಆಗಸ್ಟ್ 31 ರಂದು ನಾಗರಬಾವಿಯ ವ್ಯಕ್ತಿಯೊಬ್ಬರು ವ್ಯಾಪಾರ ಕುದುರಿಸಿಕೊಡುವುದಾಗಿ ಕರೆಮಾಡಿ, ನಂತರ ಭೇಟಿಯಾಗಿ ವ್ಯವಹಾರದ ಸಂಬಂಧ ಚರ್ಚಿಸಿ ಮೊಬೈಲ್ ಹಾಗೂ ವ್ಯವಹಾರದ ಮಾಹಿತಿ ಪಡೆದು, ಕೆಲವೇ ದಿನಗಳಲ್ಲಿ ಆನ್ ಲೈನ್ ಮೂಲಕ 75 ಸಾವಿರ ರೂ. ಗಳನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದ ಸಂಬಂಧ ಪ್ರಕರಣ ದಾಖಲಿಸಿ ಆನ್ ಲೈನ್ ವಂಚನೆಯನ್ನು ಬಯಲಿಗೆಳೆಯಲಾಗಿತ್ತು.

          ಸಾರ್ವಜನಿಕರು ಯಾವುದೇ ಕಾರಣಕ್ಕೂ ತಮ್ಮ ಎಟಿಎಂ ಕಾರ್ಡ್, ಮೊಬೈಲ್ ಸಂಖ್ಯೆಗಳನ್ನು ಬೇರೆಯವರು ಹಣ ಜಮಾವಣೆ ನಗದೀಕರಣ ವ್ಯವಹಾರಕ್ಕೆ ಬಳಸಿಕೊಳ್ಳಲು ಅವಕಾಶ ಕೊಡಬಾರದೆಂದು ಗಿರೀಶ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link