ಬೆಂಗಳೂರು
ಖಾಸಗಿ ಪ್ರತಿಷ್ಠಿತ ಮುಕ್ತ ವಿಶ್ವ ವಿದ್ಯಾನಿಲಯಗಳಿಗೆ ಸಂಬಂಧಿಸಿದ ನಕಲಿ ಅಂಕ ಪಟ್ಟಿಗಳನ್ನು ಅಸಲಿ ಎಂದು ನೀಡಿ ವಂಚಿಸುತ್ತಿದ್ದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಡಾ.ರಾಜ್‌ಕುಮಾರ್ ರಸ್ತೆಯ ಬ್ರಿಗೇಡ್ ಗೇಟ್ ವೇಯಲ್ಲಿ ವಾಸಿಸುತ್ತಿದ್ದ ಆಂಧ್ರ ಪ್ರದೇಶ ಮೂಲದ ಶ್ರೀನಿವಾಸ ರೆಡ್ಡಿ (42) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ಮುಕ್ತ ವಿಶ್ವ ವಿದ್ಯಾನಿಲಯಗಳ ಅಪಾರ ಪ್ರಮಾಣದ ನಕಲಿ ಅಂಕಪಟ್ಟಿಗಳು ರಬ್ಬರ್ ಸ್ಟಾಂಪ್, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯು ಮಹಾಲಕ್ಷ್ಮೀಪುರಂನ 5ನೇ ಮುಖ್ಯರಸ್ತೆಯಲ್ಲಿ ವಿ.ಎಸ್.ಎಸ್. ಇನ್ಸ್‌ಸ್ಟಿಟ್ಯೂಟ್ ಆಫ್ ಎಜುಕೇಷನಲ್ ರಿಸರ್ಚ್ ಮತ್ತು ಶ್ರೀ ವೆಂಕಟೇಶ್ವರ ಇಂಟರ್ ನ್ಯಾಷನಲ್ ಎಜುಕೇಷನಲ್ ಸೊಸೈಟಿ ತೆರೆದಿದ್ದನು.
ಸೊಸೈಟಿಯಿಂದ ಪ್ರತಿಷ್ಠಿತ ಮುಕ್ತ ವಿಶ್ವ ವಿದ್ಯಾನಿಲಯಗಳಾದ ದೆಹಲಿ ಅಕಾಡೆಮಿ ಕೌನ್ಸಿಲ್ ಫಾರ್ ಹೈಯರ್ ಎಜುಕೇಷನ್, ಮಾನವ್ ಭಾರತಿ ಯುನಿವರ್ಸಿಟಿ, ಸೋಲನ್ ಹಿಮಾಚಲ ಪ್ರದೇಶ, ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಓಪನ್ ಸ್ಕೂಲಿಂಗ್, ಡಾ.ಸಿ.ವಿ.ರಾಮನ್ ಯುನಿವರ್ಸಿಟಿ, ವಿಲಿಯನ್ ಕ್ರಾಸಿ ಯುನಿವರ್ಸಿಟಿ, ಇಲಂ ಯುನಿವರ್ಸಿಟಿ, ವೆಂಕಟೇಶ್ವರ ಯುನಿವರ್ಸಿಟಿ ಇನ್ನಿತರ ವಿಶ್ವ ವಿದ್ಯಾನಿಲಯಗಳಿಂದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್‌ಸಿ, ಎಂಎ, ಎಂಕಾಂ, ಎಂಟೆಕ್, ಡಿಫಾರ್ಮ, ಬಿಫಾರ್ಮ, ಎಸ್‌ಎಸ್‌ಎಲ್‌ಸಿ, ಪಿಯುಸಿ ಕೋರ್ಸ್ ಗಳಿಗೆ ದೂರಶಿಕ್ಷಣ ಮೂಲಕ ಪರೀಕ್ಷೆ ಕೊಡಿಸುವುದಾಗಿ ಆರೋಪಿಯು ನಂಬಿಸುತ್ತಿದ್ದ.
ಕೋರ್ಸ್ ಪಡೆಯಲು ಬರುವ ಅಭ್ಯರ್ಥಿಗಳಿಗೆ ವಿವಿಧ ಕೋರ್ಸ್ ಗಳಿಗೆ 40 ಸಾವಿರದಿಂದ 2 ಲಕ್ಷದವರೆಗೆ ಹಣ ಪಡೆದು ಪರೀಕ್ಷೆಯನ್ನು ತನ್ನ ಕಚೇರಿಯಲ್ಲಿ ಬರೆಸಿ ನಂತರ ಅವರಿಗೆ ಅಸಲಿ ಎಂದು ನಕಲಿ ಅಂಕಪಟ್ಟಿಗಳನ್ನು ನೀಡಿ ಮೋಸ ಮಾಡುತ್ತಿದ್ದ,ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಿಂದ ಕೆಲವೇ ದೂರದಲ್ಲಿ ಸಂಸ್ಥೆಯಿದ್ದು ಆಂಧ್ರಪ್ರದೇಶ ಸೇರಿ ಇತರ ರಾಜ್ಯಗಳ ಅನೇಕ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳನ್ನು ಆರೋಪಿಗಳು ಕೊಡುತ್ತಿದ್ದರು. ಕಾರ್ಲೆಕ್ಸ್ ಟೀಚರ್ ಯುನಿವರ್ಸಿಟಿ, ನಾರ್ತ್ ಈಸ್ಟ್ ಯುನಿವರ್ಸಿಟಿ, ಸ್ವಾಮಿ ವಿವೇಕಾನಂದ ಯುನಿವರ್ಸಿಟಿಗಳ ಅಂಕ ಪಟ್ಟಿಗಳನ್ನು ಹಣ ತೆಗೆದುಕೊಂಡು ಕೊಡಿಸುತ್ತಿದ್ದರು.
ಮೋಸ ಹೋದ ಅಭ್ಯರ್ಥಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








