ದಾವಣಗೆರೆ :
ಅರ್ಥಪೂರ್ಣ ಹಾಗೂ ವೈಭವಪೂರಿತ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಗುರುವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಕನ್ನಡದ ನಾಡಹಬ್ಬ ಅರ್ಥ ಪೂರ್ಣವಾಗಿರಬೇಕು. ಪ್ರತಿವರ್ಷದಂತೆ ನಾಡು ನುಡಿ ಹಿರಿಮೆ ಸಾರುವ ಸ್ಥಬ್ದ ಚಿತ್ರಗಳ ಮೆರವಣಿಗೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಿ, ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಕ್ಕೆ ನಾಡ ಧ್ವಜರೋಹಣವಿದ್ದು, ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಲು ಎಲ್ಲಾ ಇಲಾಖೆಯ ಅಧಿಕಾರಿಗಳು ಕನ್ನಡ ಪರ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕರಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ,
ಪ್ರತಿ ವರ್ಷದಂತೆ ಅ. 31 ರಂದು ಹಾಗೂ ನವೆಂಬರ್ 1 ರಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪದ ಅಲಂಕಾರ ಮಾಡಿಸಬೇಕು. ನಾಡತಾಯಿ ಭುವನೇಶ್ವರಿ ಮೆರವಣಿಗೆಯು ಬೆಳಿಗ್ಗೆ 7.30 ಕ್ಕೆ ಹೈಸ್ಕೂಲ್ ಮೈದಾನದಿಂದ ಆರಂಭವಾಗಿ ಜಯದೇವ ಸರ್ಕಲ್, ಗಾಂಧಿ ಸರ್ಕಲ್, ವಿದ್ಯಾರ್ಥಿ ಭವನದ ಮುಖಾಂತರ ಕ್ರೀಡಾಂಗಣ ತಲುಪಲಿದೆ. ಪ್ರತಿ ವರ್ಷದಂತೆ ಸಂಬಂಧಿಸಿದ ಇಲಾಖೆಗಳು ಸ್ಥಬ್ದ ಚಿತ್ರಗಳನ್ನು ಆಕರ್ಷಕವಾಗಿ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವೇದಿಕೆ ನಿರ್ವಹಣೆ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಣೆ, ಹಾಗೂ ಸಂಜೆಯ ಸಾಂಸ್ಕತಿಕ ಕಾರ್ಯಕ್ರಮಗಳ ಬಗೆಗೆ ಮಾಹಿತಿ ನೀಡಿದರು.
ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ರಾಜ್ಯೋತ್ಸವದ ವಿಷಯದಲ್ಲಿ ಅಧಿಕಾರಿಗಳು ಬಹಳ ಉದಾಸೀನ ಮನೋಭಾವ ಹೊಂದಿದ್ದು ಅಧೇಶವಿದ್ದರು ಸಭೆಗೆ ಬರುವುದಿಲ್ಲ. ಹಾಗಾಗಿ ಇಂತಹ ಅಧಿಕಾರಿಗಳನ್ನು ಕಡ್ಡಾಯವಾಗಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಆದೇಶಿಸಬೇಕು. ದಾವಣಗೆರೆಯಲ್ಲಿ ನಾಮ ಫಲಕಗಳಲ್ಲಿ ಕನ್ನಡ ಅನುಷ್ಠಾನ ಸಂಪೂರ್ಣ ಆಗಿರುವುದಿಲ್ಲ. ಈ ಬಗೆಗೆ ಸತತ 10 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೆವೆ. ಮುಂದಿನ ದಿನಗಳಲ್ಲಾದರೂ ನಾಮ ಫಲಕಗಳು ಸಂಪೂರ್ಣ ಕನ್ನಡ ಮಯವಾಗಲಿ ಎಂದರು. ಹಾಗೂ ನಗರದ ಚಿತ್ರಮಂದಿರಗಳಲ್ಲಿ ಕನಿಷ್ಠ 1 ತಿಂಗಳಾದರು ಕನ್ನಡ ಭಾಷೆಯ ಚಿತ್ರಗಳು ಪ್ರದರ್ಶನಗೊಳ್ಳಲಿ ಎಂದರು. ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳು ಅರ್ಹರಿಗೆ ಸಿಗುತ್ತಿದ್ದು ಯಾವುದೇ ಅರ್ಜಿ ಹಾಕದಂತೆ ರಾಜ್ಯೋತ್ಸವ ಪುರಸ್ಕøತರನ್ನು ಆಯ್ಕೆ ಮಾಡಬೇಕೆಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ಜಾಹೀರಾತು ಫಲಕಗಳಲ್ಲಿ ಶೇ. 60 ರಷ್ಟು ಸಾಹಿತ್ಯ ಕನ್ನಡದಲ್ಲಿರಬೇಕು ಎಂಬ ನಿಯಮವಿದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳು ಬೇರೆ ಭಾಷೆಗಳ ಫಲಕಗಳನ್ನು ಅಳವಡಿಸಿರುವವರಿಗೆ ನೋಟಿಸ್ ನೀಡಿ ದಂಡ ವಿಧಿಸಬೇಕು. ಈ ಬಗೆಗೆ ಪಾಲಿಕೆಯಲ್ಲಿ ಕಾಯ್ದೆ ಇದ್ದರೂ ಅನುಷ್ಠಾನವಾಗಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್ ಮಲ್ಲೇಶ್ ಮಾತನಾಡಿ, ರಾಜ್ಯೋತ್ಸವ ಮೆರವಣಿಗೆ ಕಾಟಾಚಾರಕ್ಕೆ ಆಗಬಾರದು ಇಡೀ ಕಾರ್ಯಕ್ರಮದ ಕೇಂದ್ರ ಬಿಂದು ಮೆರವಣಿಗೆ ಆಗಿದ್ದು, ನಾಡು ನುಡಿಯ ಪ್ರತಿಬಿಂಬ ಅನಾವರಣವಾಗಲಿ ಎಂದರು.
ಮುಖಂಡರಾದ ಶಿವಕುಮಾರ್ ಮಾತನಾಡಿ, ಮೈಲುಗಲ್ಲುಗಳಲ್ಲಿ ಕನ್ನಡ ಮೂರನೇಯ ಸ್ಥಾನದಲ್ಲಿ ಹಾಗಾಗಿ ಸಂಬಂಧಿಸಿದವರಿಗೆ ಆದೇಶ ನೀಡಿ ಕನ್ನಡಕ್ಕೆ ಆದ್ಯತೆ ಸಿಗುವಂತೆ ಮಾಡಬೇಕೆಂದರು.
ಮುಖಂಡ ಗಣೇಶ್ ಶಣೈ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಶೇ. 100 ರಷ್ಟು ಅಂಕ ಗಳಿಸಿದ ಮಕ್ಕಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಬೇಕು ಎಂದರು.
ಸಭೆಯಲ್ಲಿ ಮುಖಂಡರುಗಳಾದ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ. ಮಂಜುನಾಥ್ ಕುರ್ಕಿ, ಎನ್ ಎಸ್ ರಾಜು, ನಾಗೇಂದ್ರ ಬಂಡಿಕರ್, ಸಿದ್ದರಾಜು, ಮಹಾಲಿಂಗಪ್ಪ, ಗೋಪಾಲ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ ಉದೇಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಜುನಾಥನ್, ಡಿಹೆಚ್‍ಓ ತ್ರಿಫುಲಾಂಭ, ತಹಶೀಲ್ದಾರ ಸಂತೋಷ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
