ಹೂವಿನಹಡಗಲಿ :
ತಾಲೂಕಿನ ಹಿರೇಹಡಗಲಿ ಗ್ರಾಮದ ಬಳಿ ಡಾ.ಅಭಿಲಾಕೇಶ್, ಬಿ.ಕೆ.ಶ್ರೀವತ್ಸವ್, ಎಸ್.ಸಿ.ಶರ್ಮ, ಗಿರೀಶ, ಡಾ.ವಿಶ್ವನಾಥ ಇವರ ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡವು ನರೇಗಾ ಯೋಜನೆಯಲ್ಲಿ ನಡೆದ ಕಾಮಗಾರಿ ಮತ್ತು ಬೆಳೆ ನಾಶ ಪರಿಶೀಲನೆಯನ್ನು ನಡೆಸಿತು.
ಉದ್ಯೋಗಖಾತ್ರಿ ಯೋಜನೆಯಡಿ, 150 ಮಾನವ ದಿನಗಳು ನಿರ್ಮಾಣಗೊಂಡಿದ್ದು, ಬರಗಾಲದ ಪ್ರಯುಕ್ತ ಗುಳೇ ಹೋಗದಂತೆ ಕೂಲಿಕಾರ್ಮಿಕರಿಗೆ ಕೆಲಸವನ್ನು ನೀಡುವ ಉದ್ದೇಶವನ್ನು ವ್ಯಕ್ತಪಡಿಸಲಾಯಿತು.
ಜಿಲ್ಲಾಧಿಕಾರಿಗಳಾದ ಡಾ.ರಾಮಪ್ರಸಾತ್ ಮನೋಹರ್, ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರುಮಳೆ ಶೇ 52 ರಷ್ಟು ಕಡಿಮೆ ಪ್ರಮಾಣದಲ್ಲಿ ಆಗಿದ್ದು, 150 ಮಿ.ಮೀ. ಗುರಿ ಇತ್ತು, ಇದರಲ್ಲಿ 72 ಮಿ.ಮೀ. ಮಾತ್ರ ಮಳೆಯಾಗಿದ್ದು, 56.264 ಹೆಕ್ಟೇರ್ ಹಿಂಗಾರು ಬೆಳೆ ನಾಶವಾಗಿರುವುದಾಗಿ ತಿಳಿಸಿದರು.
ಈ ಕುರಿತು 37.55 ಕೋಟಿ ಪರಿಹಾರದ ಹಣವನ್ನು ರೈತರಿಗೆ ಕೊಡಲು ಕೇಂದ್ರ ತಂಡಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು. ತೋಟಗಾರಿಕೆ ಬೆಳೆಗಳಾದ ದಾಳಿಂಬೆ ಸೇರಿದಂತೆ, 218 ಹೆಕ್ಟೇರ್ ನಷ್ಟವಾಗಿದ್ದು, 1.16 ಕೋಟಿ ರೂ ಅಂದಾಜಿಸಲಾಗಿದ್ದು, 38.6 ಕೋಟಿ ರೂ ಬೆಳೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನೀಡಲು ಕೋರಲಾಗಿದೆ.
ಹೂವಿನಹಡಗಲಿ ತಾಲೂಕಿನಲ್ಲಿ ಮೇವಿನ ಕೊರತೆ ಕಂಡುಬಂದಿರುವುದಿಲ್ಲ, ಪ್ರಸಕ್ತ ಕೂಡ್ಲಿಗಿ ತಾಲೂಕಿನ ಗಂಡುಬೊಮ್ಮನಹಳ್ಳಿಯಲ್ಲಿ ಗೋಶಾಲೆಯನ್ನು ತೆರೆದಿದ್ದು, ಅಗತ್ಯವಿದ್ದಲ್ಲಿ ಇನ್ನೂ 4 ಗೋಶಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಿದರು. ಪ್ರತಿ ತಾಲೂಕಿಗೆ 380 ಟನ್ ಮೇವು ಸಂಗ್ರಹಿಸಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಮಗಾರಿ ನಿರ್ವಹಿಸಿದ ಕಾರ್ಮಿಕರಿಗೆ ಈ ವರ್ಷದಲ್ಲಿ ಒಂದು ತಿಂಗಳು ಕೂಲಿವೆಚ್ಚವನ್ನು ಪಾವತಿಸಿರುವುದಿಲ್ಲ ಎಂದು ತಿಳಿಸಿದರು. ಉಳಿದಂತೆ ಕುಡಿಯುವ ನೀರು, ಆರೋಗ್ಯ, ಸ್ವಚ್ಚತೆ ಸೇರಿದಂತೆ ಸಾರ್ವಜನಿಕರಿಗೆ ಬರಗಾಲದ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಕಾಶಿಗವಿ ಶಾರದಮ್ಮ, ತಹಶೀಲ್ದಾರ ಕೆ.ರಾಘವೇಂದ್ರರಾವ್, ಕೃಷಿ ಇಲಾಖೆಯ ಜೆ.ಡಿ. ಡಾ.ಕೆ.ಮಲ್ಲಿಕಾರ್ಜುನ, ಡಿ.ಡಿ. ಸಿದ್ದೇಶ್ವರ್, ಎ.ಡಿ. ನೀಲಾನಾಯ್ಕ, ಇ.ಓ. ಸೋಮಶೇಖರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








