ದಲಿತ ನಾಯಕನ ಶಕ್ತಿ ಕುಗ್ಗಿಸಲು ಷಡ್ಯಂತ್ರ
ಕೊರಟಗೆರೆ
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಐಟಿ ಮತ್ತು ಇಡಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ತನಿಖೆಯ ನೆಪದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ರಾಜಕೀಯ ರಂಗದಲ್ಲಿ ದಲಿತ ನಾಯಕನಾಗಿ ರಾಷ್ಟ್ರ ಮಟ್ಟದಲ್ಲಿ ಬೆಳೆದಿರುವ ಡಾ.ಜಿ.ಪರಮೇಶ್ವರ್ ಒಡೆತನದ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ರಾಜಕೀಯ ದುರುದ್ದೇಶದಿಂದ ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಐಟಿ ದಾಳಿ ಮೂಲಕ ಭಯಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಮಾತನಾಡಿ, ರಾಷ್ಟ್ರ ಮತ್ತು ರಾಜ್ಯದ ಲಕ್ಷಾಂತರ ಬಡಮಕ್ಕಳಿಗೆ ಶಿಕ್ಷಣದ ಸೌಲಭ್ಯ ನೀಡಿದ ಕೀರ್ತಿ ಡಾ.ಜಿ.ಪರಮೇಶ್ವರ್ ಕುಟುಂಬಕ್ಕೆ ಸೇರಲಿದೆ. 30 ವರ್ಷದ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ಸಜ್ಜನ ರಾಜಕಾರಣಿಯಾಗಿ, ದೇಶಕ್ಕೆ ಮಾದರಿ ಆಗಿದ್ದಾರೆ. ಮಾಜಿ ಡಿಸಿಎಂ ಮೇಲೆ ಮಾಡಿರುವ ದಾಳಿ ದುರುದ್ದೇಶದಿಂದ ಕೂಡಿದೆ ಎಂದರು.
ಕೊರಟಗೆರೆ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಬಿಜೆಪಿ ಪಕ್ಷದ ನಾಯಕರಿಗೆ ಧೈರ್ಯವಿದ್ದರೆ ಮತ್ತೊಮ್ಮೆ ಜನಾದೇಶಕ್ಕೆ ಬರಲಿ. ಬಿಜೆಪಿ ನೇತೃತ್ವದ ರಾಜ್ಯ ಸರಕಾರದ ರಕ್ಷಣೆಗಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೊರಟಗೆರೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್ ಮಾತನಾಡಿ, ಬಿಜೆಪಿ ಪಕ್ಷದ ಸಿಎಂ, ಡಿಸಿಎಂ, ಸಚಿವ, ಸಂಸದ ಮತ್ತು ಮಂತ್ರಿಗಳ ಒಡೆತನದ ಶಿಕ್ಷಣ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯದಲ್ಲಿ ಇಲ್ಲವೆ? ದ್ವೇಷದ ರಾಜಕಾರಣದ ಮೂಲಕ ದಲಿತ ನಾಯಕನ ಮೇಲೆ ವಿನಾಕಾರಣ ಐಟಿ ದಾಳಿ ಮಾಡಿಸುತ್ತಿರುವ ಬಿಜೆಪಿ ಪಕ್ಷಕ್ಕೆ ಮತದಾರರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು. ಪೋಲೀಸರು ಬಿಗಿಭದ್ರತೆ ಕೈ ಗೊಂಡಿದ್ದರು. ತುಮಕೂರು, ಕೊರಟಗೆರೆ ಮತ್ತು ಮಧುಗಿರಿ ವೃತ್ತದ ಪೋಲೀಸ್ ತಂಡ ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನಿಯೋಜನೆಗೊಂಡಿದ್ದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ನಾರಾಯಣಮೂರ್ತಿ, ತಾಪಂ ಅಧ್ಯಕ್ಷೆ ನಾಜಿಮಾ ಬಿ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯರಾದ ವೀರಣ್ಣ, ನರಸಮ್ಮ, ರಾಮಯ್ಯ, ಸುಮರಾಜು, ಜ್ಯೋತಿ, ಶ್ಯಾಮಲ, ಪಪಂ ಸದಸ್ಯರಾದ ಓಬಳರಾಜು, ನರಸಿಂಹಪ್ಪ, ನಟರಾಜು, ಮುಖಂಡರಾದ ವೆಂಕಟಾಚಲಯ್ಯ, ಕವಿತಾ, ಜಯರಾಂ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
