ಕೇಂದ್ರದ ನೀತಿಗಳು ದುಡಿಯುವ ವರ್ಗಕ್ಕೆ ಮಾರಕ

ದಾವಣಗೆರೆ:

     ಕೇಂದ್ರ ಸರ್ಕಾರದ ನೀತಿಗಳು ದುಡಿಯುವ ವರ್ಗದ ಜನರಿಗೆ ಮಾರಕವಾಗಿವೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಆರೋಪಿಸಿದರು.

      ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕಾಗಿ, ಕಾರ್ಮಿಕರ ಐಕ್ಯತೆಗಾಗಿ, ಸಮಾನತೆಯ ಸಮಾಜಕ್ಕಾಗಿ, ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಘೋಷಣೆಯೊಂದಿಗೆ ಏರ್ಪಡಿಸಿದ್ದ ಕಾರ್ಮಿಕರ ಮೇ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

      ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯು, ದೇಶದಾದ್ಯಂತ 2 ಲಕ್ಷ ಕೋಟಿ ಆಸ್ತಿ ಹೊಂದಿದ್ದರೂ, ದೇಶದ ಬ್ಯಾಂಕ್‍ಗಳು ಬಿಎಸ್‍ಎನ್‍ಎಲ್‍ಗೆ 2 ಸಾವಿರ ಕೋಟಿ ಸಾಲ ಕೊಡುತ್ತಿಲ್ಲ. ಇದಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅನುಮತಿ ಕೊಡುತ್ತಿಲ್ಲ. ಹೀಗಾಗಿ ಬಿಎಸ್‍ಎನ್‍ಎಲ್ ಸಂಸ್ಥೆಯು ದಿವಾಳಿಯಾಗಿರುವ ಕಾರಣ ಸಂಸ್ಥೆಯ ಖಾಯಂ ನೌಕರರಿಗೆ ವೇತನ ಸಿಗುತ್ತಿಲ್ಲ. ಅಲ್ಲದೇ, ಗುತ್ತಿಗೆ ಆಧಾರದಲ್ಲಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಕಳೆದ ಆರು ತಿಂಗಳುಗಳಿಂದ ಸಂಬಳವೇ ಸಿಕ್ಕಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿನೀತಿಯೇ ಕಾರಣವಾಗಿದೆ ಎಂದು ದೂರಿದರು.

       ಸರ್ಕಾರಿ ಸ್ವಾಮ್ಯದ ಜೆಟ್ ಏರ್‍ವೇಸ್ ಸಂಸ್ಥೆಯು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ನೂರಾರು ವಿಮಾನಗಳು ಹಾರಾಟ ನಿಲ್ಲಿಸಿವೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೈಲಟ್‍ಗಳಿಗೆ ಹಾಗೂ ಗಗನಸಖಿಯರಿಗೂ ಸಂಬಳ ಇಲ್ಲವಾಗಿದೆ. ಇದು ಬರೀ ಎರಡು ಸಂಸ್ಥೆಗಳ ಕಥೆಯಲ್ಲ. ಎಲ್ಲ ವರ್ಗದ ಕಾರ್ಮಿಕರಿಗೆ ಸೇವಾ ಭದ್ರತೆಯೇ ಇಲ್ಲವಾಗಿದೆ. ಹೀಗಾಗಿ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಹೋರಾಟ ಮುಂದುವರೆಸಬೇಕೆಂದು ಕರೆ ನೀಡಿದರು.

       ದುಡಿಯುವ ವರ್ಗದ ಜನತೆ ಹೋರಾಟ ಮುಂದುವರೆಸಬೇಕಾದರೆ, ಕಾರ್ಮಿಕರ ಚಳವಳಿಯ ಹೋರಾಟವನ್ನು ಸ್ಮರಿಸಲೇಬೇಕಾಗಿದೆ. ಭಾರತದ ಕಾರ್ಮಿಕ ಚಳವಳಿಯು ಶತಮಾನದ ಹೊಸ್ತಿಲಲ್ಲಿದೆ. 1908ರಲ್ಲಿ ಬಾಲಗಂಧರ ತಿಲಕ್ ಅವರು ತಮ್ಮ ಸಾರಥ್ಯದಲ್ಲಿ ಹೊರಬರುತ್ತಿದ್ದ ಪತ್ರಿಕೆಯಲ್ಲಿ ಬ್ರಿಟೀಷ್ ಸರ್ಕಾರದ ವಿರುದ್ಧ ಬರೆದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಆಗ ಮುಂಬೈನ ಕಾರ್ಮಿಕರು ಹೋರಾಟ ಆರಂಭಿಸಿದರು. ಇದು ರಷ್ಯದಲ್ಲಿಯೂ ಪ್ರತಿಧ್ವನಿಸಿತ್ತು.

      ರಷ್ಯದಲ್ಲಿ ಲೆನಿನ್ ಅವರು ಭಾರತದ ಕಾರ್ಮಿಕರು ಜಾಗೃತರಾಗಿದ್ದಾರೆಂಬುದಾಗಿ ಲೇಖನ ಬರೆದಿದ್ದರಿಂದ ಸ್ಪೂರ್ತಿಗೊಂದ ನಮ್ಮ ದೇಶದ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಪರಿಣಾಮ, ಬ್ರಿಟೀಷ್ ಸರ್ಕಾರವು 1926ರಲ್ಲಿ ಟ್ರೇಡ್ ಯೂನಿಯನ್ ಆ್ಯಕ್ಟ್ ಜಾರಿಗೆ ತಂದಿದ್ದು, ಅಂದಿನಿಂ ಕಾರ್ಮಿಕರು ಸಂಘ ಕಟ್ಟಿ ಹೋರಾಟ ಮಾಡಲು ಆರಂಭಿಸಲಾಯಿತು. ಹೀಗಾಗಿ ದೇಶದ ಸ್ವಾತಂತ್ರ್ಯ ಚಳವಳಿಗೆ ಕಾರ್ಮಿಕರ ಪಾತ್ರವು ಅತಿ ಮುಖ್ಯವಾಗಿದೆ.

        ಈ ಹೋರಾಟದಲ್ಲಿ ಭಾಗವಹಿಸಿದ್ದ ಕಾರ್ಮಿಕರ ವಿರುದ್ಧ ಪೇಶಾವರ ಮೊಕದ್ದಮ್ಮೆ, ಕಾನ್ಫೂರ್ ಪಿತೂರಿ, ಮಿರತ್ ಮೊಕದ್ದಮ್ಮೆಗಳನ್ನು ಹೂಡಿ, ಕೆಲ ಕಾರ್ಮಿಕ ನಾಯಕರನ್ನು ಜೈಲಿಗೆ ಅಟ್ಟಲಾಯಿತು. ಅಲ್ಲದೇ, ಇನ್ನೂ ಕೆಲವರನ್ನು ಗಲ್ಲಿಗೆ ಏರಿಸಲಾಯಿತು. ಅಲ್ಲದೇ, ಕಾರ್ಮಿಕ ಸಂಘವನ್ನು ಒಡಯುವ ಉದ್ದೇಶದಿಂದ ಬ್ರಿಟೀಷ್ ಸರ್ಕಾರ ಟ್ರೇಡ್ ಡಿಸ್ಪ್ಯುಟ್ ಆ್ಯಕ್ಟ್ ಹಾಗೂ ಸೆಫ್ಟಿ ಆ್ಯಕ್ಟ್ ಜಾರಿಗೆ ತಂದಿತು. ಆದ್ದರಿಂದಲೇ ಭಗತ್‍ಸಿಂಗ್, ರಾಜಗುರು, ಸುಖದೇವ್ ಬಿಟ್ರೀಷ್ ಸರ್ಕಾರದ ಗಮನ ಸೆಳೆಯಲು ಸಂಸತ್‍ನಲ್ಲಿ ಬಾಂಬ್ ಸ್ಪೋಟಿಸುವ ಮೂಲಕ ಗಲ್ಲಿಗೆ ಏರಿದರು. ಇಂತಹ ದೊಡ್ಡ ಪರಂಪರೆ ಕಾರ್ಮಿಕ ಚಳವಳಿಗೆ ಇದೆ ಎಂದು ವಿವರಿಸಿದರು.

        ಬ್ರಿಟೀಷ್ ಸರ್ಕಾರದ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ದಿನಗಳಲ್ಲಿಯೇ, ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಕಾನೂನುಬದ್ಧ ಸೌಲಭ್ಯಗಳನ್ನು ನಿರಾಕರಣೆ ಮಾಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

       ದೇಶದ ಕಾರ್ಮಿಕರ ಮುಂದೆ ಹಲವು ಸವಾಲುಗಳು ಎದುರಾಗಿದ್ದು, ಈ ಸವಾಲಿಗೆ ಮುಖಾಮುಖಿಯಾಗಲು ಕಾರ್ಮಿಕರು ಐಕ್ಯ ಹೋರಾಟ ಮುಂದುವರೆಸಬೇಕೆಂದು ಕರೆ ನೀಡಿದ ಅವರು, ಕಳೆದ ಐದು ವರ್ಷ ಆಡಳಿತ ನಡೆಸಿರುವ ಮೋದಿ ಸರ್ಕಾರ ಅತ್ಯಂತ ಕಾರ್ಮಿಕ ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೋಟು ಅಮಾನ್ಯೀಕರಣ ಹಾಗೂ ಜಿಎಸ್‍ಟಿಯಿಂದಾಗಿ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು, ನೆಲ ಕಚ್ಚಿರುವ ಕಾರಣ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಹೀಗಾಗಿ ಸರ್ಕಾರದ ನೀತಿಗಳು ಜನರ ಪರವಾಗಿ ಜಾರಿಗೆ ಬರುವಂತಾಗಲು ಕಾರ್ಮಿಕರು ಸಂಘಟಿತ ಹೋರಾಟ ನಡೆಸಬೇಕೆಂದು ಕಿವಿಮಾತು ಹೇಳಿದರು.

      ಸಿಐಟಿಯು ಜಿಲ್ಲಾ ಗೌರವಾಧ್ಯಕ್ಷ ಕೆ.ಎಲ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ದಕ್ಷಿಣ ಮಧ್ಯ ವಲಯ ಅಧ್ಯಕ್ಷ ಎಲ್.ಮಂಜುನಾಥ್, ಸಿಐಟಿಯು ಮುಖಂಡರದ ಕೆ.ಎಚ್.ಆನಂದರಾಜ್, ಶ್ರೀನಿವಾಸಮೂರ್ತಿ, ಟಿ.ವಿ.ರೇಣುಕಮ್ಮ, ನವೀನ್‍ಕುಮಾರ್, ಕೆ.ಎಚ್.ಓಲೇಕಾರ್, ಬಾನಳ್ಳಿ ಬಸವರಾಜ, ಮಂಜುನಾಥ ಸಾಲಕಟ್ಟೆ, ಗುಡ್ಡಪ್ಪ, ಶಿವಮೂರ್ತಿ, ಈರಣ್ಣ, ಹಾಲೇಶ ನಾಯ್ಕ, ಅಣ್ಣಪ್ಪಸ್ವಾಮಿ, ಓಬೇದುಲ್ಲಾ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link