ದಾವಣಗೆರೆ
ಶಾಲಾ ಮಕ್ಕಳ ಸಮವಸ್ತ್ರಕ್ಕಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 266.89 ಕೋಟಿ ರೂ. ಅನುದಾನದಲ್ಲಿ ಈ ವರೆಗೂ 175 ಕೋಟಿ ರೂ.ಗಳನ್ನು ಮಾತ್ರ ರಾಜ್ಯ ಸರ್ಕಾರ ಖರ್ಚು ಮಾಡಿದ್ದು, ಇನ್ನುಳಿದ 91 ಕೋಟಿ ರೂ. ಹಣವನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರೂ ಆಗಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದುರುಪಯೋಗ ಪಡೆಸಿಕೊಂಡಿದ್ದಾರೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರತಿ ವಿದ್ಯಾರ್ಥಿಗೆ 2 ಜೊತೆ ಸಮವಸ್ತ್ರಕ್ಕಾಗಿ 600 ರೂ,ಗಳಂತೆ ಮೊದಲ ಹಂತದಲ್ಲಿ 266.89 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಈ ವರೆಗೂ 175 ಕೋಟಿ ರೂಪಾಯಿಗಳನ್ನು ಮಾತ್ರ ರಾಜ್ಯ ಸರ್ಕಾರ ಖರ್ಚು ಮಾಡಿದೆ. ಇನ್ನುಳಿದ ಬಾಕಿ 91 ಕೋಟಿ ರೂ. ಎಲ್ಲಿಗೆ ಹೋಯಿತೆಂಬುದರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಿಸಬೇಕೆಂದು ಆಗ್ರಹಿಸಿದರು.
ಪ್ರತಿ ಒಂದು ಜೊತೆ ಸಮವಸ್ತ್ರದಲ್ಲಿ 100 ರೂಪಾಯಿಗಳನ್ನು ದುರೂಪಯೋಗ ಪಡೆಸಿಕೊಳ್ಳಲಾಗಿದೆ. ಅಲ್ಲದೆ, ಪರೀಕ್ಷೆ ಸಮೀಪಿಸುತ್ತಿದ್ದರೂ ಈ ವರೆಗೂ ಕೇವಲ ಒಂದು ಜೊತೆ ಮಾತ್ರ ಸಮವಸ್ತ್ರವನ್ನು ಮಾತ್ರ ವಿತರಿಸಿದ್ದು, ಇನ್ನೊಂದು ಜೊತೆ ಸಮವಸ್ತ್ರವನ್ನು ಪೂರೈಸಿಲ್ಲ. ಮೊದಲ ಹಂತದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳದ ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾವು ಎರಡನೇ ಹಂತದ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುದಾನ ನೀಡುತ್ತಿಲ್ಲ ಎಂಬುದಾಗಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸಮ್ಮಿಶ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೈತ, ಬಡವ, ಕೂಲಿ-ಕಾರ್ಮಿಕರ, ದಲಿತರ ಮಕ್ಕಳು ಒಂದೇ ಜೊತೆಗೆ ಹರಿದ ಸಮವಸ್ತ್ರವನ್ನು ಧರಿಸಿ ಶಾಲೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯಿಂದಾಗಿ ಲಕ್ಷಾಂತರ ಬಡ ಮಕ್ಕಳು 2ನೇ ಜೊತೆ ಸಮವಸ್ತ್ರದಿಂದ ವಂಚಿತರಾಗಿದ್ದಾರೆ. ಅಲ್ಲದೆ, ರಾಜ್ಯದ ಒಂದು ಲಕ್ಷ ಮಕ್ಕಳಿಗೆ ಇನ್ನೂ ಸೈಕಲ್ ವಿತರಿಸಿಲ್ಲ. ಶೂಸ್, ಸಾಕ್ಸ್, ಲೇಸ್ ಖರೀದಿಯಲ್ಲೂ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಚಿತ್ರದುರ್ಗದ ವಿಜಯಕುಮಾರ, ಸುನಿಲ್, ಎಚ್.ಎನ್.ಶಿವಕುಮಾರ, ಕೆ.ಹೇಮಂತಕುಮಾರ, ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಟಿಂಕರ ಮಂಜಣ್ಣ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
