ತುಮಕೂರು

ಕೇಂದ್ರದ ಬಿಜೆಪಿ ಸರ್ಕಾರ ಮಾಡಿದ ತಪ್ಪುಗಳನ್ನು, ವೈಫಲ್ಯಗಳನ್ನು ಮುಚ್ಚಿಹಾಕಲು ಹೊಸ ಹೊಸ ಕಾನೂನುಗಳನ್ನು ಜಾರಿ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮುರಳೀಧರ ಹಾಲಪ್ಪ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಬಂದು 5 ವರ್ಷ 6 ತಿಂಗಳು ಕಳೆದಿವೆ. ಇಲ್ಲಿಯವರೆಗೆ ದೇಶದ ಅಭಿವೃದ್ಧಿ ಹೆಸರಲ್ಲಿ ನೋಟು ಅಮಾನ್ಯೀಕರಣ ಮಾಡಿದರು. ಜಿಎಸ್‍ಟಿ ಜಾರಿ ಮಾಡಿದರು. ಜಿಡಿಪಿ ದರ ಕುಸಿಯುವಂತೆ ಮಾಡಿದರು. ಇದೀಗ ಪೌರತ್ವ ಕಾಯ್ದೆ ಜಾರಿ ಮಾಡುತ್ತಿದೆ.ಹೀಗೆ ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಹೊಸ ಕಾನೂನುಗಳನ್ನು ತರುತ್ತಿದೆ ಎಂದು ತಿಳಿಸಿದರು.
ದೆಹಲಿ ರೇಪ್ ಕ್ಯಾಪಿಟಲ್ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಸಾಥ್ ಕೊಟ್ಟ ಹಾಲಪ್ಪ ಮೋದಿ ಹೇಳಿದರೆ ಅದರಲ್ಲಿ ತಪ್ಪಿಲ್ಲ, ಈಗಾಗಲೇ ದೆಹಲಿ ರೇಪ್ ಕ್ಯಾಪಿಟಲ್ ಎಂದಾಗಿದೆ. ಒಂದು ವರ್ಷದಲ್ಲಿ ಉತ್ತರಪ್ರದೇಶದಲ್ಲಿ 37 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಈಗಾಗಲೇ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆರ್ಜಾ ಮೇಲಿನ ಆರೋಪ ಸಾಬೀತಾಗಿದೆ. ಪ್ರಧಾನಿ ಮೋದಿ ಕೂಡ ದೆಹಲಿ ರೇಪ್ ಕ್ಯಾಪಿಟಲ್ ಎಂದು ಹೇಳಿದ್ದರು. ಅದಕ್ಕೆ ಯಾರೂ ಚಕಾರ ಎತ್ತಿಲ್ಲ. ದೆಹಲಿ ರೇಪ್ ಕ್ಯಾಪಿಟಲ್ ಎಂಬುದಕ್ಕೆ ಉನ್ನಾವೋ, ಕತುವಾ ಘಟನೆಗಳು ಉತ್ತಮ ಉದಾಹರಣೆ ಆಗಿದೆ ಎಂದರು.
ಪೌರತ್ವ ಕಾಯ್ದೆ ವಿರೋಧಿಸಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಜೊತೆಗೆ ಹಲವು ರಾಜ್ಯಗಳಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಅಲ್ಲಲ್ಲಿ ಕಫ್ರ್ಯೂ ವಿಧಿಸಲಾಗಿದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್ ಕಡೆ ಪ್ರವಾಸಕ್ಕೆ ಯಾರು ಬರಬಾರದು ಎಂದು ಅಲ್ಲಿನ ಸರ್ಕಾರಗಳು ಆದೇಶ ಹೊರಡಿಸಿವೆ. ಆದರೆ ಪ್ರಧಾನಿ ಮೋದಿಯವರು ಮಾತ್ರ ದೆಹಲಿಯಲ್ಲಿ ಕುಳಿತುಕೊಂಡು ನಿಮ್ಮೊಂದಿಗೆ ನಾನಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ರವಾನಿಸುತ್ತಾರೆ. ಈ ಘಟನೆಗಳ ಪರಿಣಾಮದಿಂದ ಚೈನಾದಲ್ಲಿ ನಡೆಯಬೇಕಿದ್ದ ಶೃಂಗಸಭೆ ರದ್ದಾಯಿತು. ಕೇಂದ್ರ ಗೃಹ ಸಚಿವ ಅಮಿಶಾರ ಮೇಘಾಲಯ, ಮಣಿಪುರದ ಪ್ರವಾಸ ರದ್ದಾಯಿತು. ಇದಕ್ಕೆ ಕಾರಣವಾದರೂ ಏನು ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷದವರ ಮೇಲೆ ಬಿಜೆಪಿ ಪಕ್ಷದವರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಆಗುವ ಪ್ರತಿಯಿಂದು ಅನಾಚಾರಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಅಲ್ಲದೆ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಈವರೆಗೆ 12 ಪತ್ರಗಳನ್ನು ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಸರ್ವರಿಗೂ ಸಮಪಾಲು, ಸಮಬಾಳು ಎಂಬ ಅಂಬೇಡ್ಕರ್ ಆಶಯವನ್ನು ಬಿಜೆಪಿ ಪಕ್ಷವು ಮರೆತಿದೆ. ಕೇವಲ ವೋಟ್‍ಬ್ಯಾಂಕ್‍ಗಾಗಿ ರಾಜಕಾರಣ ಮಾಡುತ್ತಿದ್ದು, ಇಂದು ಡೀಸೆಲ್, ಪೆಟ್ರೋಲ್ ದರ ಏರಿಕೆಯಾಗಿದೆ. ಜಿಎಸ್‍ಟಿ ಬಗೆಗಿನ ಗೊಂದಲಗಳು ಇಂದಿಗೂ ಪರಿಹಾರವಾಗಿಲ್ಲ. ಕೇಂದ್ರ ಸರ್ಕಾರದ ಧೋರಣೆಯಿಂದ ಪ್ರತಿಯೊಬ್ಬರಿಗೂ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಎಸ್‍ಟಿಯನ್ನು ಸರಳೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಫಾಸ್ಟ್ ಟ್ಯಾಗ್ ವಿಚಾರ :
ಕೇಂದ್ರ ಸರ್ಕಾರದಿಂದ ಎಲ್ಲಾ ಟೋಲ್‍ಗಳಲ್ಲಿ ಫಾಸ್ಟ್ ಟ್ಯಾಗ್ ಮಾಡಿಸಲು ಆದೇಶ ನೀಡಲಾಗಿದೆ. ಇದರಿಂದ ಟೋಲ್ ಮೂಲಕ ಹೋಗುವ ಎಲ್ಲಾ ವಾಹನಗಳ ಬ್ಯಾಂಕ್ ಖಾತೆಯಿಂದ ಟೋಲ್ ಹಣ ಕಡಿತಗೊಳ್ಳುತ್ತದೆ. ರಸ್ತೆಯಲ್ಲಿ ಚಲಿಸುವ ಎಲ್ಲಾ ವಾಹನದಾರರು ಶ್ರೀಮಂತರಾಗಿರುವುದಿಲ್ಲ, ಬಡವರು ಓಡಾಡುತ್ತಾರೆ. ಇದರಿಂದ ಅವರಿಗೆ ತೀವ್ರತರವಾಗಿ ಸಮಸ್ಯೆ ಎದುರಾಗುತ್ತದೆ ಎಂದರಲ್ಲದೆ, ತುಮಕೂರಿನ ಕ್ಯಾತ್ಸಂದ್ರ – ನೆಲಮಂಗಲ ಟೋಲ್ ಮಧ್ಯೆ ಸರ್ವೀಸ್ ರಸ್ತೆಯೇ ಇಲ್ಲ. ಮೊದಲು ಸರ್ವೀಸ್ ರಸ್ತೆ ಮಾಡಿದ ನಂತರ ಫಾಸ್ಟ್ ಟ್ಯಾಗ್ ಜಾರಿಗೆ ತರಬೇಕು. ಈ ಸಂಬಂಧ ಮುಖಂಡರ ನಡುವೆ ಚರ್ಚೆ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಜಿಪಂ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಬಿಜೆಪಿ ಸರಕಾರ ಸಂವಿಧಾನ ಬದಲಾವಣೆಗೆ ವ್ಯವಸ್ಥಿತವಾಗಿ ಪಿತೂರಿ ಮಾಡುತ್ತಿದೆ. ಬೇರೆ ಬೇರೆ ಸಮುದಾಯದ ಮೇಲೆ ಮನು ಸಂಸ್ಕೃತಿಯನ್ನು ಏರುತ್ತಿದೆ. ಧರ್ಮ ಎಂಬ ಅಮಲಿನಲ್ಲಿ ಒಂದು ಧರ್ಮದ ಮೇಲೆ ಮತ್ತೊಂದು ಧರ್ಮವನ್ನು ಎತ್ತಿಕಟ್ಟುತ್ತಿದ್ದಾರೆ. ಸಿಲ್ಲಿ ಲಲ್ಲಿ ಧಾರವಾಹಿಯಲ್ಲಿ ಲಲಿತಾ ಎಂಬ ಪಾತ್ರಧಾರಿ ನನ್ನನ್ನು ನಂಬಿ ನಂಬಿ ಎಂದು ಹೇಳಿದಂತೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ನಮ್ಮನ್ನು ನಂಬಿ ನಂಬಿ ಎಂದು ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೆ, ಕಾಂಗ್ರೆಸ್ ಪಕ್ಷದವರು ನಿರ್ಲಿಪ್ತರಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಬಾಜಪ ಮತ್ತು ಜೆಡಿಎಸ್ ನವರು ಸೋಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್ ನವರೇ ಸೋಲಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್‍ನ ಮುಖಂಡ ರೆಡ್ಡಿಚಿನ್ನಯಲ್ಲಪ್ಪ ಮಾತನಾಡಿ, ರೆಡ್ಡಿ ಚನ್ನಯಲ್ಲಪ್ಪ, ರೇಫ್ ಇನ್ ಡೆಲ್ಲಿ ಎಂದು ಮೋದಿ ಹೇಳಿದಾಗ ಯಾರು ಈ ಬಗ್ಗೆ ಮಾತನಾಡಿಯೇ ಇಲ್ಲ. ಆದರೆ ಈಗ ರಾಹುಲ್‍ಗಾಂಧಿ ದೆಹಲಿ ರೇಪ್ ಕ್ಯಾಪಿಟಲ್ ಎಂದು ಹೇಳುತ್ತಿದ್ದಂತೆಯೇ ಸ್ಮೃತಿ ಇರಾನಿಯವರು 35 ಜನ ಸಂಸದರನ್ನು ಒಗ್ಗೂಡಿಸಿಕೊಂಡು ರಾಹುಲ್‍ಗಾಂಧಿ ಮೇಲೆ ಎರಗುತ್ತಾರೆ. ಅಂದು ಮೋದಿ ಹೇಳಿದ್ದು ಸರಿ ಎಂದಾದರೆ ಇಂದು ರಾಹುಲ್ ಗಾಂಧಿ ಹೇಳಿದ್ದು ಸರಿಯೇ ಎಂದು ರಾಗಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ವೇಳೆಯಲ್ಲಿ ತುರ್ತು ಪರಿಸ್ಥಿತಿ ಬಂದಾಗ ಘೋಷಣೆ ಮಾಡಿದ್ದರು. ಆದರೆ ಇದೀಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಉತ್ತರ ಕೊಡಲು ಯಾರು ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸದಸ್ಯ ನಾರಾಯಣ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಕೊಂಡವಾಡಿ ಚಂದ್ರಶೇಖರ್, ವಾಲೆ ಚಂದ್ರಯ್ಯ, ಪುರುಷೋತ್ತಮ್, ಪುಟ್ಟರಾಜು, ಮರಿಚನ್ನಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಗೀತಾರುದ್ರೇಶ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
