ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ನಿಲ್ಲಿಸಲು ಮುಂದಾದ ಕೇಂದ್ರ : ಕೃಷ್ಣ ಭೈರೇಗೌಡ

ಬೆಂಗಳೂರು

        ಸಂಕಷ್ಟ ಕಾಲದಲ್ಲಿ ಬಡವರಿಗೆ ಬದುಕುವ ಭರವಸೆ ಮೂಡಿಸಿರುವ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವ್ಯವಸ್ಥಿತವಾಗಿ ರದ್ದು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೃಷ್ಣ ಭೈರೇಗೌಡ ಇಂದಿಲ್ಲಿ ನೇರ ಆರೋಪ ಮಾಡಿದ್ದಾರೆ.

         ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ಎರಡು ಸಾವಿರ ಕೋಟಿ ರೂಗಳಿಗಿಂತ ಅಧಿಕ ಹಣ ನೀಡಬೇಕಿರುವ ಕೇಂದ್ರ ಸರ್ಕಾರ ಕೇವಲ ನೂರಾ ಹದಿನೇಳು ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿದೆ.ಇದೇ ರೀತಿ ದೇಶದ ವಿವಿಧ ರಾಜ್ಯಗಳಿಗೆ ಈ ಯೋಜನೆಯಡಿ ಪಾವ್ತಿಸಬೇಕಾದ ಹನ್ನೆರಡು ಸಾವಿರ ಕೋಟಿ ರೂಗಳಿಗಿಂತ ಹೆಚ್ಚಿನ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿದೆ ಎಂದರು.

        ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬಡ,ಬಗ್ಗರಿಗೆ ಸಂಪೂರ್ಣವಾಗಿ ಕೂಲಿ ಹಣ ಪಾವತಿಸುವುದು ಹಾಗೂ ಸಾಮಾಗ್ರಿಗಳ ಬಾಬ್ತಿನಲ್ಲಿ ಶೇಕಡಾ ಎಪ್ಪತ್ತೈದರಷ್ಟು ಹಣ ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ.ಆದರೆ ಈ ಜವಾಬ್ದಾರಿಯನ್ನು ನಿರ್ವಹಿಸಲು ಅದು ಉತ್ಸುಕತೆ ತೋರುತ್ತಿಲ್ಲ ಎಂದು ಹೇಳಿದರು.

        ಈ ಹಿನ್ನೆಲೆಯಲ್ಲಿ ಅವರು ಪಾವತಿಸಬೇಕಾದ ಹಣದ ಪೈಕಿ 438 ಕೋಟಿ ರೂಗಳನ್ನು ಈಗ ನಾವೇ ಒದಗಿಸಿದ್ದು,ಇದಲ್ಲದೆ ಬಜೆಟ್ ಹೊರತಾಗಿ ಇನ್ನೂ 522 ಕೋಟಿ ರೂಗಳನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಮಾನವ ದಿನದ ಸೃಜನೆಗಾಗಿ ಒದಗಿಸುವ ಹಣ ನಾಲ್ಕುನೂರಾ ಮೂವತ್ತೊಂಭತ್ತು ರೂಪಾಯಿ.ಇಂತಹ ಮಾನವ ದಿನಗಳನ್ನು ಸೃಜಿಸುವ ವಿಷಯದಲ್ಲಿ ಪಶ್ಚಿಮ ಬಂಗಾಳ ನಂಬರ್ ಒನ್ ಸ್ಥಾನದಲ್ಲಿದ್ದು ಮೂವತ್ತೊಂದು ಕೋಟಿ ಮಾನವ ದಿನಗಳನ್ನು ಸೃಜಿಸಿದೆ.

         ಅದೇ ರೀತಿ ಆಂಧ್ರಪ್ರದೇಶ ಇಪ್ಪತ್ತು ಕೋಟಿ ಮಾನವ ದಿನಗಳನ್ನು ಸೃಜಿಸಿದೆ.ತೆಲಂಗಾಣದಂತಹ ಸಣ್ಣ ರಾಜ್ಯ ಕೂಡಾ ಎಂಟು ಕೋಟಿ ಮಾನವ ದಿನಗಳನ್ನು ಸೃಜಿಸಿದೆ ಎಂದ ಅವರು ಮುಂದಿನ ಎರಡು ವರ್ಷಗಳಲ್ಲಿ ನಾವು ಕೂಡಾ ಹದಿನೈದು ಕೋಟಿಯಷ್ಟು ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಿದ್ದೇವೆ.

          ಆದರೆ ದೇಶದ ಬಹುತೇಕ ರಾಜ್ಯಗಳಿಗೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಒದಗಿಸಬೇಕಾದ ಹನ್ನೆರಡು ಸಾವಿರ ಕೋಟಿ ರೂಗಳಿಗಿಂತ ಹೆಚ್ಚಿನ ಹಣವನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ.ಈ ಬಾಕಿ ಒದಗಿಸಲು ಪೂರಕ ಬಜೆಟ್‍ನಲ್ಲೂ ಹಣ ಒದಗಿಸಿಲ್ಲ ಎಂದು ವಿಷಾದಿಸಿದರು.

          ಉದ್ಯೋಗ ಖಾತ್ರಿ ಯೋಜನೆಯಿಂದ ಜನ ಗುಳೆ ಎದ್ದು ಹೋಗುವುದು ತಪ್ಪಿದೆ.ಬಡ ಜನ ಬರಗಾಲದಲ್ಲೂ ನೂರೈವತ್ತು ದಿನಗಳ ಕೆಲಸ ಪಡೆದು ಜೀವನ ಮಾಡುತ್ತಿದ್ದಾರೆ.ಆದರೆ ಇಂತಹ ಮಹತ್ವದ ಯೋಜನೆಯನ್ನು ಸ್ಥಗಿತಗೊಳಿಸುವುದೇ ಕೇಂದ್ರ ಸರ್ಕಾರದ ಧೋರಣೆಯಾಗಿರುವಂತೆ ಕಂಡು ಬರುತ್ತಿದೆ ಎಂದು ಅವರು ಆರೋಪಿಸಿದರು.

          ನಮ್ಮ ರಾಜ್ಯಕ್ಕೆ ಬರಬೇಕಾದ ಬಾಕಿಯನ್ನು ಪಾವತಿಸಿ ಎಂದು ಮುಖ್ಯಮಂತ್ರಿಗಳು ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದಾರೆ.ರಾಜ್ಯದ ಸಂಸದರ ಸಭೆ ಮಾಡಿ,ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಮನವಿ ಮಾಡಲಾಗಿದೆ.ಇದೇ ರೀತಿ ನಾವೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ.ಆದರೆ ಏನೂ ಪ್ರಯೋಜನವಾಗಿಲ್ಲ ಎಂದರು.

          ಉದ್ಯೋಗ ಖಾತ್ರಿ ಯೋಜನೆಯಿಂದ ಬಡವರು,ರೈತರು ನೆಮ್ಮದಿಯಾಗಿರಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ .ತೋಟಗಾರಿಕೆ ಬೆಳೆಗಳಾದ ದಾಳಿಂಬೆ,ಪಪ್ಪಾಯಿ ಸೇರಿದಂತೆ ಇಪ್ಪತ್ತು ಬಗೆಯ ಹಣ್ಣುಗಳನ್ನು ಬೆಳೆದರೆ ಅಂತವರಿಗೆ ಇಪ್ಪತ್ತೈದರಿಂದ ಎಂಭತ್ತು ಸಾವಿರ ರೂಗಳ ತನಕ ಉದ್ಯೋಗ ಖಾತ್ರಿಯಲ್ಲಿ ಹಣ ದೊರೆಯುತ್ತದೆ.

         ಇದೇ ರೀತಿ ವ್ಯವಸಾಯ ಮಾಡುವ ರೈತರಿಗೂ ನೆರವು ದೊರೆಯುತ್ತದೆ.ಹೀಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಒದಗಿಸುವ ಮೂಲಕ ಅವರು ಕೃಷಿ,ತೋಟಗಾರಿಕೆ ಬೆಳೆ ಪಡೆಯಲು ಹಾಕಿದ ಬಂಡವಾಳ ವಾಪಸ್ ಬರುವಂತೆ ಮಾಡಲಾಗುತ್ತಿದೆ.ಒಂದು ವೇಳೆ ಮಾರುಕಟ್ಟೆಯಲ್ಲಿ ಬೆಲೆ ಕುಸಿದರೂ,ಅವರಿಗೆ ನಷ್ಟವಾಗದಂತೆ ನೋಡಿಕೊಳ್ಳಲಾಗುತ್ತಿದೆ.

         ಪರಿಣಾಮವಾಗಿ ಬಡವರು,ರೈತರು ನೆಮ್ಮದಿಯಾಗಿದ್ದಾರೆ.ಆದರೆ ಇಂತಹ ಮಹತ್ವದ ಯೋಜನೆಗೆ ಕಳೆದೆರಡು ತಿಂಗಳುಗಳಿಂದ ಹಣ ಕೊಡದ ಕೇಂದ್ರ ಸರ್ಕಾರದ ಧೋರಣೆ ಯೋಜನೆಯನ್ನು ನಿಷ್ಕ್ರಿಯಗೊಳಿಸುತ್ತಾ,ಕ್ರಮೇಣ ಸ್ಥಗಿತಗೊಳಿಸುವ ಹುನ್ನಾರ ಎಂಬುದು ಸ್ಪಷ್ಟವಾಗುತ್ತಿದೆ ಎಂದು ವಿಷಾದಿಸಿದರು.

         ಮಾತಿನಲ್ಲಿ ತಮ್ಮ ಸರ್ಕಾರ ಬಡವರ ಪರ,ರೈತರ ಪರ ಎಂದು ಹೇಳುವ ಕೇಂದ್ರ ಸರ್ಕಾರ ಈ ಹಣವನ್ನು ತೆಗೆದುಕೊಂಡು ಹೋಗಿ ಸಮ್ಮಾನ್ ಯೋಜನೆಗೆ ಒದಗಿಸುವ ನಾಟಕವಾಡುತ್ತಿದೆ ಎಂದು ಅವರು ಆರೋಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap