ಬೆಂಗಳೂರು
ಕೇಂದ್ರದ ಬಿಜೆಪಿ ಸರ್ಕಾರ, ಬಹುಸಂಖ್ಯಾತರನ್ನು ತನ್ನ ಪರವಾಗಿ ಸಜ್ಜುಗೊಳಿಸುವ ಹುನ್ನಾರದಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದರು.ನಗರದ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಸಿಎಎ ಮತ್ತು ಎನ್‍ಆರ್‍ಸಿ ವಿರುದ್ಧ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ಭಾರತ ಸಂವಿಧಾನವನ್ನು ರಕ್ಷಿಸಲು ದೊಡ್ಡಮಟ್ಟದ ಜನಾಂದೋಲನವನ್ನು ನಡೆಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್‍ನ ಪ್ರಮುಖ ಮುಖಂಡರು ಜಾತಿ, ಧರ್ಮದ ಆಧಾರದ ಮೇಲೆ ಕಾನೂನು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಹುನ್ನಾರವನ್ನು ತಡೆಗಟ್ಟಬೇಕಿದೆ ಎಂದು ಎಚ್ಚರಿಸಿದರು.ಪ್ರಾಸ್ತಾವಿಕ ಭಾಷಣ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು, ಜಾತಿಜಾತಿ ಧರ್ಮಗಳಲ್ಲಿ ಸಂಘರ್ಷವನ್ನು ಉಂಟುಮಾಡಲು ಕೇಂದ್ರದ ಬಿಜೆಪಿ ಪಕ್ಷ, ಹಿಟ್ಲರ್‍ನಂತೆ ವರ್ತಿಸುತ್ತಿದೆ. ಪೌರತ್ವ ಕಿರುಕುಳವನ್ನು ತಡೆಗಟ್ಟಲು ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದವರು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರೇ ಗೊಂದಲದಲ್ಲಿದ್ದಾರೆ. ಈ ಗೊಂದಲವನ್ನು ಪರಿಹರಿಸಲು ಹೋಬಳಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ವಿಚಾರ ಸಂಕಿರಣಗಳು ನಡೆಸಬೇಕಿದೆ ಎಂದು ಅವರು ಹೇಳಿದರು.ಪೌರತ್ವ ಕಾಯ್ದೆಯಿಂದ ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಧೈರ್ಯ ತುಂಬಲು ಕಾರ್ಯಕರ್ತರು ಮುಂದಾಗಬೇಕು. ದೇಶದಾದ್ಯಂತ ಧರ್ಮದ ವಿಷಬೀಜ ಬಿತ್ತಲು ಮುಂದಾಗಿರುವ ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ, ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಲ್. ಹನುಮಂತಯ್ಯ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ಮೂಲಭೂತ ರಚನೆಗೆ ವಿರುದ್ಧವಾಗಿದೆ. ಈ ಕಾಯ್ದೆಯು ಹಿಂದುತ್ವ ರಾಷ್ಟ್ರಕ್ಕೆ ನಾಂದಿಯಾಡಲಿದೆ. ವಿಶಾಲ ತಳಹದಿಯನ್ನು ಸಂಕುಚಿತಗೊಳಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಕಾಯ್ದೆಯಲ್ಲಿ ಧಮನಿತ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲಾಗುವುದು ಎಂದು ಒಂದೆಡೆ ಹೇಳುತ್ತಿದ್ದರೂ, ಇನ್ನೊಂದೆಡೆ ಅಲ್ಪಸಂಖ್ಯಾತರನ್ನು ಹೊರಗಿಡುವ ಪ್ರಯತ್ನ ನಡೆದಿದೆ ಎಂದು ದೂರಿದರು.
ಸಿಖ್, ಪಾರ್ಸಿ, ಜೈನರಿಗೆ ಪೌರತ್ವ ನೀಡುವ ಅವಕಾಶವಿದೆ. ಆದರೆ ಪಾಕ್, ಅಫ್ಘಾನಿಸ್ತಾನ, ಬಾಂಗ್ಲಾ ದೇಶದ ಪ್ರಜೆಗಳಿಗೆ ಪೌರತ್ವ ನೀಡುವ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ ಅವರು, ಇದರ ಹಿಂದೆ ಊಹಿಸಲಾಗದ ದೊಡ್ಡಹುನ್ನಾರ ಅಡಗಿದೆ ಎಂದು ಹೇಳಿದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಮಾತನಾಡಿ, ಜಾತಿ – ಧರ್ಮದ ಆಧಾರದಲ್ಲಿ ಕಾನೂನು ಮಾಡಲು ಕೇಂದ್ರ ಸರ್ಕಾರ ದೊಡ್ಡ ಪ್ರಯತ್ನ ನಡೆಸಿದೆ. ದೇಶದ ಜನತೆಗೆ ಇದನ್ನು ತಿಳಿಸಲು ಜನಾಂದೋಲನ ರೀತಿಯಲ್ಲಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ, ವಿ.ಆರ್. ಸುದರ್ಶನ್, ಮತ್ತಿತರರು ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ