ಕೇಂದ್ರದ ನಿಲುವಿನಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ : ಮುರುಳಿಧರ ಹಾಲಪ್ಪ

ತುಮಕೂರು
 
    ಜೆಎನ್‍ಯು ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿಯಿಂದ ವಿವಿಗಳಲ್ಲಿ ವಿದ್ಯಾಭ್ಯಾಸ ಮಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಧೋರಣೆ ಕಾರಣ ಎಂದು ಕಾಂಗ್ರೆಸ್ ವಕ್ತಾರ ಮುರಳಿಧರಹಾಲಪ್ಪ ಆರೋಪಿಸಿದರು.
     ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದಲೂ ದೇಶದಲ್ಲಿ ಕೋಮು ಗಲಭೆಗಳು ನಡೆಯುತ್ತಿವೆ. ಇದರಿಂದ ಯಾರೂ ಕೂಡ ನೆಮ್ಮದಿಯ ಜೀವನ ಮಾಡಲಾಗುತ್ತಿಲ್ಲ. ಜೆಎನ್‍ಯು ವಿವಿ ಸೇರಿದಂತೆ ದೇಶದ ಇತರೆ ವಿಶ್ವವಿದ್ಯಾಲಯಗಳಲ್ಲಿ ಕೂಡ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ. ಭಯದ ವಾತಾವರಣದಲ್ಲಿ ಶಿಕ್ಷಣ ಪಡೆಯುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.
     ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಬೇರೆ ಯುವಕರು ತಮ್ಮ ಅಂತರಾಳಕ್ಕೆ ವಿರೋಧವಾಗಿ ಮುಸುಕು ಧರಿಸಿ ಹಲ್ಲೆ ನಡೆಸಿದ್ದಾರೆ. ವಿವಿಯ ಸುತ್ತಲೂ ಪೊಲೀಸ್ ಸರ್ಪಗಾವಲು ವಾಹನಗಳಿದ್ದರೂ ಹಲ್ಲೆ ನಡೆದಿದೆ. ಹಲ್ಲೆ ನಡೆಯುವ ಸಂದರ್ಭದಲ್ಲಿ ರಕ್ಷಣೆಗಾಗಿ ಪೊಲೀಸರಿಗೆ ಕರೆ ಮಾಡಿದರೂ ಒಳ ಹೋಗಲು ಒಂದೂವರೆ ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಇಂದಿನವರೆಗೆ ಹಲ್ಲೆ ಮಾಡಿದವರ ಮೇಲೆ ಪ್ರಕರಣ  ದಾಖಲು ಮಾಡಿದ್ದಾರೆ ಹೊರತು ಅವರನ್ನು ಬಂಧಿಸಿಲ್ಲ ಎಂದರು.
     ಮಹಿಳಾ ಹಾಸ್ಟೆಲ್‍ಗೆ ನುಗ್ಗಿ ಅಲ್ಲಿನ ವಾರ್ಡನ್ ಹಾಗೂ ಜೆಎನ್‍ಯು ಎಸ್‍ಯು ಅಧ್ಯಕ್ಷೆ ಐಶೆಘೋಶ್ ಮೇಲೆ ರಾಡುಗಳಿಂದ ಹಲ್ಲೆ ನಡೆಸುತ್ತಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಸೇರಿದಂತೆ ಎಡಪಂತೀಯ ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿವೆ. ಕೋಮು ಗಲಭೆ ವಿಚಾರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವು ಹೆಸರು ಮಾಡುತ್ತಿದೆ. ಇಡೀ ದೇಶದ ನಾಗರಿಕರು ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವರನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ನೀಡುತ್ತಿಲ್ಲ ಎಂದು ಆರೋಪಿಸಿದರು.
    ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲಿ ಎಂಬ ಉದ್ಧೇಶದಿಂದ ಪೋಷಕರು ನವದೆಹಲಿ ಮತ್ತು ಹೈದ್ರಾಬಾದ್ ನಗರಗಳಿಗೆ ಕಳುಹಿಸಿಕೊಟ್ಟಿರುತ್ತಾರೆ. ಆದರೆ ಇಂದು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ವಾಪಸ್ ಮನೆಗೆ ಬರುವಂತಹ ಪರಿಸ್ಥಿತಿ ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
    ಜೆಎನ್‍ಯು ಘಟನೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷರಾದ ಮುರಳಿ ಮನೋಹರ ಜೋಷಿಯವರೇ ಖಂಡಿಸಿದ್ದಾರೆ. ಘಟನೆಯಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಈವರೆಗೂ ಕೇಂದ್ರದ ಶಿಕ್ಷಣ ಸಚಿವರಾಗಲೀ ಅಥವಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಲೀ ಸೌಜನ್ಯಕ್ಕೂ ಭೇಟಿ ನೀಡಿ ಪರಾಮರ್ಶಿಸಿಲ್ಲ  ಎರಡು ದಿನಗಳ ಕಾಲ ಎನ್‍ಎಸ್‍ಯುಐ ಘಟಕದ ಸದಸ್ಯರಿಗೆ ಹಾಗೂ ವಿವಿಧ ಪದಾಧಿಕಾರಿಗಳಿಗೆ ಹೋರಾಟದ ಹಾದಿಯ ಬಗ್ಗೆ ಹೋರಾಟದ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಿ ಹೋರಾಟಕ್ಕೆ ಸಜ್ಜಾಗುವಂತೆ ಮಾಡಲು ತೀರ್ಮಾನಿಸಿದ್ದೇವೆ ಎಂದರಲ್ಲದೆ, ಮುಂದಿನ ಬಜೆಟ್‍ಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ಇಲ್ಲದೆಯೇ ಬಜೆಟ್ ಬಗೆಗಿನ ಸಭೆಗಳನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ ಎಂದರು.
    ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಜೆಎನ್‍ಯು ಘಟನೆ ವಿರೋಧಿಸಿ ಪ್ರತಿಭಟನೆ ಮಾಡಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡದರೆ ಅದಕ್ಕೆ ಅವರು ಅನುಮತಿ ನೀಡಲಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಟನೆ ಮಾಡಲಾಗಿಲ್ಲ. ಇಲ್ಲಿ ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಪ್ರತಿಭಟನೆ ಮಾಡಬೇಕು ಎಂದೇನಿಲ್ಲ. ದೇಶದ ಪ್ರತಿಯೊಬ್ಬರೂ ಈ ಬಗ್ಗೆ ಆಲೋಚಿಸಬೇಕು. ಪ್ರತಿಭಟನೆಗೆ ಮುಂದಾಗಬೇಕು.
   ಇಂದು ಪ್ರಜಾಪ್ರಭುತ್ವಕ್ಕೆ ಸಂವಿಧಾನಕ್ಕೆ ಗಂಡಾಂತರ ಬಂದಿದೆ. ವಿದ್ಯಾರ್ಥಿಗಳು ಸಂಘಟಿತರಾಗಿ ಸಂವಿಧಾನ ರಕ್ಷಣೆಗೆ ಮುಂದಾಗಬೇಕು, ಸಿಎಎ, ಎನ್‍ಪಿಆರ್ ವಿರುದ್ಧ ವ್ಯವಸ್ಥಿತ ಹೋರಾಟ ಮಾಡಬೇಕೆಂದು ತಿಳಿಸಿದರು.ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾರುದ್ರೇಶ್ ಮಾತನಾಡಿ, ಜೆಎನ್‍ಯು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲಿನ ಹಲ್ಲೆಗೆ ಮಹಿಳಾ ಕಾಂಗ್ರೆಸ್ ಖಂಡಿಸುತ್ತಿದ್ದು, ಹಲ್ಲೆಕೋರರನ್ನು ಕೂಡಲೇ ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಮಹಿಳಾ ಕಾಂಗ್ರೆಸ್‍ನಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
 
    ಪತ್ರಿಕಾಗೋಷ್ಠಿಯಲ್ಲಿ ಎನ್‍ಎಸ್‍ಯುಐ ಅಧ್ಯಕ್ಷ ಸುಮುಖ್, ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಟಿ.ಬಿ.ಮಲ್ಲೇಶ್, ಮುಖಂಡರಾದ ಮರಿಚನ್ನಮ್ಮ, ಟಿ.ಎಸ್.ತರುಣೇಶ್, ರೇವಣ್ಣ ಸಿದ್ಧಪ್ಪ, ಎಚ್.ಎನ್.ದೀಪಕ್, ನರಸೀಯಪ್ಪ, ಎನ್‍ಎಸ್‍ಯುಐ ಅಧ್ಯಕ್ಷ ಕೊಂಡವಾಡಿ ಸುಮುಖ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ