ಬೆಂಗಳೂರು
ದೇಶದ ಐಕ್ಯತೆ, ಬಹು ಸಂಸ್ಕೃತಿ, ನಾಶವಾಗುವಂತಹ ಆಡಳಿತ ನಡೆಸುವುದನ್ನು ಕೇಂದ್ರ ಸರ್ಕಾರ ಮುಂದುವರೆ ಸಿದರೆ ಭಾರತದಲ್ಲಿನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಳೆದುಕೊಂಡು ಬಹುದೊಡ್ಡ ಅನಾಹುತವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.
ನಗರದ ಕೆಪಿಸಿಸಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ದೇಶದಲ್ಲಿ ಸ್ವಾತಂತ್ರ್ಯ ಪ್ರಜಾಪ್ರಭುತ್ವ ತತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಕೇಂದ್ರ ಸರ್ಕಾರದ ನಡೆ, ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿದರು.
ಆಡಳಿತದ ವಿರುದ್ಧ ಕೇಳಿ ಬರುವ ಧ್ವನಿಯನ್ನು ದಮನ ಮಾಡಲಾಗುತ್ತಿದೆ. ಸರ್ಕಾರದ ವಿರುದ್ಧ ನಿಲುವ ಇತರ ಪಕ್ಷದ ನಾಯಕರನ್ನು ಮುಗಿಸುವ ಹುನ್ನಾರ ನಡೆದಿದೆ. ದೇಶದಲ್ಲಿ ಕೋಮುವಾದ ಸಿದ್ದಾಂತ ಆರಂಭವಾಗಿದೆ. ಈ ನಿಟ್ಟಿನಲ್ಲಿ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಉಚ್ಛನ್ಯಾಯಾಲಯ, ಕೇಂದ್ರ ತನಿಖಾ ಸಂಸ್ಥೆ, ಚುನಾವಣಾ ಆಯೋಗ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.ದೇಶದ ಐತಿಹಾಸಿಕ ಜವಾಬ್ದಾರಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ.ಪಾಕಿಸ್ತಾನ ಧರ್ಮ ಆಧಾರಿತ ದೇಶ ಆದರೆ, ಅದು ವಿಭಜನೆ ಆಗಿ ಹೋಗಿದೆ ಅಂತಹ ದುರಂತ ಭಾರತಕ್ಕೆ ಬರಬಾರದು ಎಂದರು.
ದೇಶದಲ್ಲಿನ ಎಲ್ಲಾ ಧರ್ಮ, ಜಾತಿ, ವ್ಯಕ್ತಿಗಳಿಗೆ ಸಮಾನ ಹಕ್ಕು ದೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕಾಗಿ ಕಾಂಗ್ರೆಸ್, ಹೋರಾಟಕ್ಕೆ ಸಿದ್ದವಾಗಿದೆ ಎಂದ ಅವರು ಗಾಂಧೀಜಿ, ನೆಹರು, ಸುಭಾಷ್ ಚಂದ್ರಬೋಸ್ ಹಾಗೂ ಲಕ್ಷಾಂತರ ಕಾರ್ಯಕರ್ತರ ಹೋರಾಟದಿಂದ ದೇಶಕ್ಕೆ ದೊರೆಕಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ನಿರ್ಮಾಣಕ್ಕೆ ಅನೇಕ ವೀರರು ಪ್ರಾಣ ತ್ಯಾಗ ಮಾಡಿದ್ದಾರೆ ಅವರ ಬಲಿದಾನ ತ್ಯಾಗವನ್ನು ನಾವು ಸ್ಮರಿಸಬೇಕಿದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸಂವಿಧಾನ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದವರು, ಅಧಿಕಾರಕ್ಕೆ ಬಂದರೆ ದೇಶದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ಜೀವ ತ್ಯಾಗ ಮಾಡಿದ್ದಾರೆ. ಪ್ರತಿಯೊಬ್ಬರು ಜಾತ್ಯಾತೀತ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಈ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ, ಮಾಜಿ ಸಚಿವ ಆಂಜನೇಯ, ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
