ರೇಷ್ಮೆ ಬೆಳೆಯತ್ತ ಮಧ್ಯ ಕರ್ನಾಟಕ ರೈತರ ಚಿತ್ತ

ದಾವಣಗೆರೆ:

ವಿಶೇಷ ವರದಿ:ವಿನಾಯಕ ಪೂಜಾರ್

      ಹಿಂದೆ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ರೇಷ್ಮೆ ಕೃಷಿಯತ್ತ, ಈಗ ಮಧ್ಯ ಕರ್ನಾಟಕದ ರೈತರ ಚಿತ್ತವೂ ಹರಿದಿದೆ.
ಹಿಂದೆಲ್ಲಾ ಹಳೇ ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ರೇಷ್ಮೆ ಕೃಷಿಯು, ಇದೀಗ ಬಯಲುಸೀಮೆಯ ಚಿತ್ರದುರ್ಗವನ್ನು ದಾಟಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೂ ಕಾಲಿಟ್ಟಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲೂ ರೇಷ್ಮೆ ಕೃಷಿ ಜನಪ್ರಿಯವಾಗುತ್ತಿದೆ.

     ಮಳೆಯ ಅಭಾವ ಹಾಗೂ ಅಂತರ್ಜಲ ಕುಸಿತದಿಂದ ಇತ್ತೀಚಿನ ಹಲವು ವರ್ಷಗಳಿಂದ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು, ಹಾಕಿದ ಬಂಡವಾಳವೂ ಕೈಗೆ ಬಾರದೇ, ತೀವರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ಲಾಭದಾಯಕ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮುಂದಾಗಿದ್ದಾರೆ.

      ಇತ್ತೀಚಿನ ವರೆಗೆ ದಾವಣಗೆರೆ ಜಿಲ್ಲೆಯಲ್ಲಿಯೇ ಇದ್ದು, ಈಗಷ್ಟೇ ಬಳ್ಳಾರಿ ಜಿಲ್ಲೆಗೆ ಮರಳಿರುವ ಹರಪನಹಳ್ಳಿ ತಾಲೂಕಿನಲ್ಲಿ 232 ಹೆಕ್ಟೇರ್ ಹಾಗೂ ಶಾಶ್ವತ ಬರ ಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರು ತಾಲೂಕು 137.57 ಹೆಕ್ಟೇರ್ ಪ್ರದೇಶದೊಂದಿಗೆ ಮುಂಚೂಣಿಯಲ್ಲಿದ್ದು, ಬರಪೀಡಿತ ಪ್ರದೇಶದ ರೈತರಲ್ಲಿ ರೇಷ್ಮೆ ಕೃಷಿಯು ಆಶಾಭಾವ ಮೂಡಿಸಿರುವುದಕ್ಕೆ ಇದು ಸಾಕ್ಷಿಯಾಗಿದೆ.

     ಇನ್ನುಳಿದಂತೆ, ದಾವಣಗೆರೆ ತಾಲೂಕು 55.46 ಹೆಕ್ಟೇರ್ ವಿಸ್ತೀರ್ಣದ ಹಿಪ್ಪುನೇರಳೆ ಕ್ಷೇತ್ರದ ಮೂಲಕ ಮೂರನೇ ಸ್ಥಾನದಲ್ಲಿದೆ. ಹೊನ್ನಾಳಿ, ಹರಿಹರ, ಚನ್ನಗಿರಿ ತಾಲೂಕುಗಳಲ್ಲಿ ಈಗಷ್ಟೇ ರೇಷ್ಮೆ ಬೆಳೆ ಲಯ ಕಂಡುಕೊಳ್ಳುತ್ತಿದೆ.

     ರೈತರ ಆಸಕ್ತಿಗೆ ತಕ್ಕಂತೆ ಸರ್ಕಾರವೂ ರೇಷ್ಮೆ ಬೆಳೆ ಪ್ರದೇಶದ ವಿಸ್ತಾರಕ್ಕೆ ಉತ್ತೇಜನ ನೀಡುತ್ತಿದೆ. ಸರ್ಕಾರದ ಪ್ರೋತ್ಸಾಹದಾಯಕ ಸೌಲಭ್ಯಗಳು ಸಹ ರೇಷ್ಮೆ ಕೃಷಿಯತ್ತ ರೈತರು ಚಿತ್ತ ಹರಿಸಲು ಕಾರಣವಾಗಿವೆ. ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಿದ ಸಾಮಾನ್ಯ ವರ್ಗದವರಿಗೆ ರೇಷ್ಮೆ ಇಲಾಖೆಯಿಂದ ಪ್ರತಿ ಎಕರೆಗೆ 10,500 ರೂ. ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ 12,600 ರೂ. ಸಹಾಯಧನ ನೀಡಲಾಗುತ್ತಿದೆ.

     ಹುಳು ಸಾಕಾಣಿಕೆ ಮನೆಗೆ 1000 ಚದುರ ಅಡಿಗೆ ಸಾಮಾನ್ಯರಿಗೆ 1.37 ಲಕ್ಷ ರೂ., ಪರಿಶಿಷ್ಟರಿಗೆ 2.50 ಲಕ್ಷ ರೂ. ಸಬ್ಸಿಡಿ ಒದಗಿಸಲಾಗುತ್ತಿದೆ. ಸಲಕರಣೆ, ರೇಷ್ಮೆ ಮೊಟ್ಟೆ ಖರೀದಿಗೂ ಸಹಾಯಧನ ಲಭ್ಯವಿದ್ದು, ಸೋಂಕು ನಿವಾರಕ ಔಷಧಗಳನ್ನು ಇಲಾಖೆಯಿಂದ ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ, ರೇಷ್ಮೆ ಗೂಡುಗಳಿಗೂ ವಿಶೇಷ ಪ್ರೋತ್ಸಾಹಧನ, ಹನಿ ನೀರಾವರಿ ಅಳವಡಿಕೆಗೆ ಶೇ.90ರಷ್ಟು ಸಬ್ಸಿಡಿ ಕೊಡಲಾಗುತ್ತಿದೆ.

     ಹಿಪ್ಪುನೇರಳೆ ಬೆಳೆಯನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದಾಗಿದ್ದು, ಮಳೆ ಅಭಾವ ಎದುರಿಸುವ ಪ್ರದೇಶಗಳಿಗೆ ಇದು ಸೂಕ್ತವಾಗಿದೆ. ಹನಿ ನೀರಾವರಿ ಅಳವಡಿಕೆಗೆ ಸರ್ಕಾರದ ಸಹಾಯಧನವಿರುವುದರಿಂದ ಅಂತರ್ಜಲ ಕೊರತೆಯನ್ನೂ ಸಮರ್ಥವಾಗಿ ಬಗೆಹರಿಸಬಹುದು. ಎಕರೆ ಭೂಮಿಯಲ್ಲಿ ವರ್ಷಕ್ಕೆ ಕನಿಷ್ಟ 5 ಬೆಳೆ ತೆಗೆಯಬಹುದಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ರೇಷ್ಮೆ ಕೃಷಿ ವರದಾನವಾಗಿದೆ. ರೇಷ್ಮೆ ಬೆಳೆಯಿಂದ ಕಡಿಮೆ ಖರ್ಚಿನಲ್ಲಿ ನಿರಂತರ ಆದಾಯ ಗಳಿಸಬಹುದು ಎನ್ನುತ್ತಾರೆ ಇಲಾಖೆಯ ತಾಂತ್ರಿಕ ಸಲಹೆಗಾರ ವಿ.ಐ.ಸಾಲಿಮಠ್.

      ನಿರಂತರ ಬರಗಾಲ, ಬೆಲೆ ಕುಸಿತದಿಂದಾಗಿ ಜಿಲ್ಲೆಯ ಭತ್ತ, ಮೆಕ್ಕೆಜೋಳ ಬೆಳೆಗಾರರು ಕೈ ಸುಟ್ಟುಕೊಂಡಿದ್ದಾರೆ. ಇದರಿಂದಾಗಿ ಜಿಲ್ಲೆಯ ರೈತರು ನಿಧಾನವಾಗಿ ರೇಷ್ಮೆಯತ್ತ ವಾಲುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ರೇಷ್ಮೆ ಬೆಳೆಯಲ್ಲಿ ಲಾಭ ಕಂಡುಕೊಳ್ಳುವ ಮನಸ್ಸು ಮಾಡುತ್ತಿದ್ದಾರೆ. ಮೆಕ್ಕೆಜೋಳದ ಕಣಜವೆಂದೇ ಹೆಸರುವಾಸಿಯಾದ ಜಿಲ್ಲೆಯಲ್ಲಿ ರೇಷ್ಮೆ ಕೃಷಿಯೂ ದಾಪುಗಾಲಿಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಗತಿ ನಿರೀಕ್ಷಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap