ತುಮಕೂರು
ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಇತರೆ ಕಾಮಗಾರಿಗಳಿಗೆ ವಿನಿಯೋಗಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯಲ್ಲಿಂದು ಜರುಗಿದ ಬರ ನಿರ್ವಹಣಾ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಜಿಲ್ಲೆಯು ತೀವ್ರ ಬರಕ್ಕೀಡಾಗಿದ್ದು, ಪ್ರಸ್ತುತ ಬೇಸಿಗೆಯಲ್ಲಿ ಅಧಿಕಾರಿಗಳು ಬರಪರಿಸ್ಥಿತಿಯನ್ನು ಸಮಗ್ರವಾಗಿ ನಿರ್ವಹಿಸಬೇಕಲ್ಲದೆ ಕುಡಿಯುವ ನೀರಿನ ಅನುದಾನ ದುರ್ಬಳಕೆಯಾಗದಂತೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದರು.
ಜಿಲ್ಲೆಯಲ್ಲಿ ತೀವ್ರ ಬರಕ್ಕೊಳಗಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ತುರ್ತು ಕ್ರಮ ವಹಿಸಬೇಕೆಂದು ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗಾಗಿ ಆಯಾ ಶಾಸಕರ ನೇತೃತ್ವದ ಕಾರ್ಯಪಡೆಯಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1ಕೋಟಿ ರೂ. ಹಾಗೂ ಸರ್ಕಾರದಿಂದ 50ಲಕ್ಷ ರೂ. ಸೇರಿ ಜಿಲ್ಲೆಗೆ ಒಟ್ಟು 15 ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ. ತುರ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಖರ್ಚಾಗಿ ಹಣಕಾಸಿನ ಕೊರತೆ ಉಂಟಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಬರ ನಿರ್ವಹಣಾ ನಿಧಿಯಿಂದ ಅನುದಾನ ಪಡೆಯಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ದನ-ಕರುಗಳಿಗೆ ಮೇವು ಪೂರೈಕೆ, ಮತ್ತಿತರ ಬರ ನಿರ್ವಹಣೆಗಾಗಿ ಹೋಬಳಿವಾರು ನಿಯೋಜಿಸಲಾಗಿರುವ ಉಸ್ತುವಾರಿ ಅಧಿಕಾರಿಗಳು ತಮಗೆ ವಹಿಸಿದ ಹೋಬಳಿಗಳಲ್ಲಿ ಪ್ರವಾಸ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು. ಬರ ನಿರ್ವಹಣೆಗಾಗಿ ಪ್ರತೀ ತಾಲ್ಲೂಕಿನಲ್ಲಿಯೂ 24×7 ಕಂಟ್ರೋಲ್ ರೂಂ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು.
ಆಗಿಂದಾಗ್ಗೆ ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೈಗೊಳ್ಳಲಾದ ಪರಿಹಾರ ಕಾರ್ಯಗಳ ಕುರಿತು ಬರಪರಿಶೀಲನಾ ಸಭೆಗೆ ನಿಖರ ಮಾಹಿತಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಿಡಿಓಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಲಭ್ಯವಿರುವ ಖಾಸಗಿ ಕೊಳವೆ ಬಾವಿಗಳು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಗ್ರಾಮಗಳು, ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಲಬಿಂದು ಗುರುತಿಸಿರುವ ಬಗ್ಗೆ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರರೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಪ್ರತಿ ಶುಕ್ರವಾರ ಸಂಜೆ 4 ಗಂಟೆಯೊಳಗಾಗಿ ತಮಗೆ ವರದಿ ನೀಡಬೇಕು ಎಂದು ತಿಳಿಸಿದರಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಜನ-ಜಾನುವಾರುಗಳಿಗೆ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸುವುದು ಜಿಲ್ಲಾ, ತಾಲೂಕು ಪಂಚಾಯತಿ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯತಿಗಳ ಆದ್ಯ ಕರ್ತವ್ಯ. ಸರ್ಕಾರ ಬಿಡುಗಡೆ ಮಾಡುವ ಅನುದಾನ ಸಾರ್ವಜನಿಕರಿಗೆ ಸೇರಿದ್ದು, ಈ ಹಣ ದುರುಪಯೋಗವಾಗದಂತೆ ಖರ್ಚು ಮಾಡಬೇಕೆಂದರಲ್ಲದೆ ಅನುದಾನದ ಹಣ ಪೋಲಾಗದಂತೆ ಮಿತವಾಗಿ ಬಳಸಬೇಕೆಂದು ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಕಾಮಗಾರಿ ಕೈಗೊಂಡ ನಂತರ ಹಣಕಾಸು ಖರ್ಚಿನ ಬಗ್ಗೆ ಅಧಿಕಾರಿಗಳು ಸುಳ್ಳು ವರದಿಗಳನ್ನು ನೀಡಿದರೆ ನಾನು ಸಹಿಸುವುದಿಲ್ಲ. ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಪಿಡಿಓಗಳು ಸಂಬಂಧಿಸಿದ ಇಂಜಿನಿಯರ್‍ಗಳಿಂದ ಸಲಹೆ ಪಡೆಯಬೇಕು. ಜಿಲ್ಲೆಯಲ್ಲಿ ಎಲ್ಲ ಗ್ರಾಮಪಂಚಾಯತಿಗಳಲ್ಲಿ ಸೇರಿ ಒಟ್ಟು 38 ಕೋಟಿ ರೂ.ಗಳ ಲಭ್ಯವಿದ್ದು, ಈ ಹಣವನ್ನು ಆದ್ಯತೆ ಮೇಲೆ ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು.
ಈಗಾಗಲೇ ಕೊರೆಯಲಾಗಿರುವ ಕೊಳವೆಬಾವಿಗಳಿಗೆ ಶೀಘ್ರ ಪಂಪು-ಮೋಟಾರು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬತ್ತಿಹೋಗಿರುವ ಕೊಳವೆಬಾವಿಗಳನ್ನು ಗುರುತಿಸಿ ಅಂಥ ಗ್ರಾಮಗಳಲ್ಲಿ ತುರ್ತಾಗಿ ಖಾಸಗಿ ಕೊಳವೆಬಾವಿಗಳ ಮಾಲೀಕರಿಂದ ಕರಾರು ಒಪ್ಪಂದದ ಆಧಾರದ ಮೇಲೆ ನೀರು ಪಡೆದು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಕೊಳವೆ ಬಾವಿ ಕೊರೆಸುವಾಗ ಸರ್ಕಾರಿ ನಿಯಮ ಪಾಲಿಸದೆ ಅಕ್ರಮ ಎಸಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿಕಲಚೇತನರಿಗಾಗಿ ರ್ಯಾಂಪ್, ಬೆಳಕಿನ ವ್ಯವಸ್ಥೆ, ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವ ಬಗ್ಗೆ ಎಲ್ಲಾ ಪಿಡಿಓಗಳಿಂದ ವರದಿ ಪಡೆಯಬೇಕೆಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಕಾರ್ಯದರ್ಶಿ ಕೃಷ್ಣಪ್ಪ, ಮುಖ್ಯ ಯೋಜನಾಧಿಕಾರಿ ಬಾಲರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಇಫ್ತಿಕಾರ ಅಹಮದ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಹೋಬಳಿಗಳ ಮೇಲುಸ್ತುವಾರಿ ಅಧಿಕಾರಿಗಳು, ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಚುನಾವಣೆಯ ನೆಪದಲ್ಲಿ ಅಧಿಕಾರಿಗಳು ಮತ್ತು ನೌಕರರು ಬರ ಪರಿಸ್ಥಿತಿಯ ನಿರ್ವಹಣೆಯನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಕೆಲವು ಗ್ರಾಮಗಳಲ್ಲಿ ಉಂಟಾಗಿರುವ ಹಾಹಾಕಾರದ ಬಗ್ಗೆ `ಪ್ರಜಾಪ್ರಗತಿ’ ಪತ್ರಿಕೆಯು ಮಾ.23 ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಜಿ.ಪಂ.ಕಾರ್ಯನಿರ್ವಹಣಾಧಿಕಾರಿಗಳು ನಡೆಸಿರು ಪರಿಶೀಲನಾ ಸಭೆ ಅಧಿಕಾರಿ ನೌಕರ ವರ್ಗಕ್ಕೆ ಎಚ್ಚರಿಕೆಯ ಸಂದೇಶ ಮೂಡಿಸಿದೆ.