ನಗರದ ಬಹುತೇಕ ರಸ್ತೆಗಳಿಗೆ ಹೊಸ ಆಧುನಿಕ ಸ್ಪರ್ಶ

ಚಳ್ಳಕೆರೆ

        ರಾಜ್ಯದಲ್ಲೇ ಅತ್ಯಂತ ವೇಗವಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದ್ದು, ಪ್ರಸ್ತುತ ನಗರದ 17 ರಸ್ತೆಗಳನ್ನು ಮಣ್ಣಿನಿಂದ ಮುಕ್ತಗೊಳಿಸಿ ಡಾಂಬರೀಕರಣಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೂ ಕೆಲವೇ ದಿನಗಳಲ್ಲಿ ನಗರದ ಬಹುತೇಕ ರಸ್ತೆಗಳು ಡಾಂಬರೀಕರಣದಿಂದ ಕಂಗೊಳಿಸಲಿವೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.

         ಅವರು, ಶುಕ್ರವಾರ ಮಧ್ಯಾಹ್ನ ಶಾಂತಿನಗರದ ಸೈನಿಕ ಆಸ್ಪತ್ರೆ ಮುಂಭಾಗದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಪತ್ರಿಕೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿವರಣೆ ನೀಡಿದರು. ರಾಜ್ಯ ಪೌರಾಡಳಿತ ಇಲಾಖೆ2017-18ನೇ ಸಾಲಿನ ನಗರೋತ್ಥಾನ ಯೋಜನೆಯ 3ನೇ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿ, ನಗರಸಭೆ ಕಟ್ಟಡ, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಸುಮಾರು 21.50 ಕೋಟಿ ವೆಚ್ಚದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಮಣ್ಣಿನ ಮತ್ತು ಶಿಥಿಲಗೊಂಡ ಡಾಂಬರ್ ರಸ್ತೆಯನ್ನು ಕಿತ್ತು ಹಾಕಿ ನೂತನ ತಾಂತ್ರಿಕತೆಯೊಂದಿಗೆ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುತ್ತಿದೆ.

       ನಗರದ ಒಟ್ಟು 17 ರಸ್ತೆಗಳನ್ನು ಡಾಂಬರೀಕರಣಗೊಳಿಸುವ ಗುರಿಯನ್ನು ಹೊಂದಲಾಗಿದ್ದು, ಈಗಾಗಲೇ ಖಾಸಗಿ ಬಸ್ ನಿಲ್ದಾಣದಿಂದ ಸೈನಿಕ ಆಸ್ಪತ್ರೆ, ಅಜ್ಜಯ್ಯನಗುಡಿ ರಸ್ತೆಯಿಂದ ಖಾಸಗಿ ಬಸ್ ನಿಲ್ದಾಣ, ಚಳ್ಳಕೆರೆಯಮ್ಮ ದೇವಸ್ಥಾನ ದಿಂದ ರಹೀಂನಗರ, ಶಾಂತಿನಗರ ಲಿಂಕ್ ರಸ್ತೆ, ಬೆಂಗಳೂರು ರಸ್ತೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ, ಮಹದೇವಿ ರಸ್ತೆಯಿಂದ ಮದಕರಿ ನಗರ, ಡಿವೈಎಸ್ಪಿ ಕಚೇರಿ ಯಿಂದ ಟೆಲಿಪೋನ್ ಟವರ್‍ರವರೆಗೂ ರಸ್ತೆಗಳ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ.

      ಶೀಘ್ರದಲ್ಲೇ ಚಳ್ಳಕೆರೆ ಪ್ರವಾಸಿ ಮಂದಿರದಿಂದ ಸೋಮಗುದ್ದು ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದ ವರೆಗೂ ರಸ್ತೆ ಡಾಂಬರೀಕರಣ, ಚರಂಡಿ ಕಾಮಗಾರಿ, ಗಾಂಧಿನಗರದ ರುಬೀನಾ ಕಾಂಪ್ಲೆಕ್ಸ್ ರಸ್ತೆ, ವಿಠಲನಗರ, ಗಾಂಧಿನಗರ ಸಾರ್ವಜನಿಕ ಹಾಸ್ಟಲ್ ರಸ್ತೆ, ಪಾವಗಡ ರಸ್ತೆಯ ಐಸಿಐಸಿ ಬ್ಯಾಂಕ್ ರಸ್ತೆ, ಚಿತ್ರನಹಟ್ಟಿಯ ಸ್ವಾಗತ ಕಮಾನ್ ರಸ್ತೆ, ಎಲ್‍ಐಸಿ ಕಚೇರಿ ರಸ್ತೆ ಮುಂತಾದ ರಸ್ತೆಗಳ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.

        ಚಳ್ಳಕೆರೆ ನಗರದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಚರಂಡಿ ಕಾಮಗಾರಿ ಹಾಗೂ ನಗರಸಭೆಯ ನೂತನ ಕಟ್ಟಡ, ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಹಮ್ಮಿಕೊಂಡಿದ್ದು, ಸಾರ್ವಜನಿಕರು ನಗರಸಭೆಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕಾರ ನೀಡುವಂತೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಮನವಿ ಮಾಡಿದ್ಧಾರೆ. ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎನ್.ಸ್ವಾಮಿ, ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್, ಸಹಾಯಕ ಇಂಜಿನಿಯರ್ ಲೋಕೇಶ್ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap