ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತ ಚಪಾತಿ ವ್ಯವಸ್ಥೆ

ತುಮಕೂರು

      ಸಕ್ಕರೆ ಕಾಯಿಲೆ ಇರುವವರ ಅಳಲು ಕೇಳಿ, ಅವರ ಸಹಾಯಕ್ಕೆ ಮುಂದಾಗಿರುವ ತುಮಕೂರು ಮಹಾನಗರ ಪಾಲಿಕೆಯು ದಾನಿಗಳ ನೆರವಿನಿಂದ ತುಮಕೂರು ನಗರದಲ್ಲಿರುವ ನಾಲ್ಕೂ ಇಂದಿರಾ ಕ್ಯಾಂಟೀನ್‍ಗಳಲ್ಲಿ ಅಗತ್ಯವಿರುವವರಿಗೆ ಉಚಿತವಾಗಿ ಚಪಾತಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದೆ.

      ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ನಗರಾದ್ಯಂತ ಹೋಟೆಲ್‍ಗಳ ಸೇವೆ ಸದ್ಯಕ್ಕೆ ಇಲ್ಲ. ಇದನ್ನೇ ಅವಲಂಬಿಸಿ ತಮ್ಮ ಅನುಕೂಲಕ್ಕೆ ಅನುಗುಣವಾಗಿ ಊಟೋಪಹಾರ ಮಾಡಿಕೊಂಡಿದ್ದವರ ಸ್ಥಿತಿ ಈಗ ಚಿಂತಾಜನಕವಾಗಿದೆ. ಅದರಲ್ಲೂ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇರುವವರು ಆಹಾರಕ್ಕೆ ಫಜೀತಿ ಪಡುವಂತಾಗಿದೆ. ಸದ್ಯಕ್ಕೆ ನಗರದಲ್ಲಿ ಇಂದಿರಾ ಕ್ಯಾಂಟೀನ್ ತೆರೆದಿದ್ದು, ಅಲ್ಲಿ ಅನ್ನದಿಂದ ತಯಾರಾದ ಆಹಾರವಷ್ಟೇ ಇರುತ್ತದೆ.

      ಇನ್ನು ಬಡವರಿಗೆಂದು ದಾನಿಗಳು ಆಹಾರ ಪೊಟ್ಟಣ ವಿತರಿಸುತ್ತಿದ್ದರೂ, ಆ ಆಹಾರವೂ ಅನ್ನದಿಂದಲೇ ತಯಾರಾದುದಾಗಿದೆ. ಇದನ್ನು ಅನಿವಾರ್ಯವಾಗಿ ಸೇವಿಸಿರುವವರು ತಮಗೆ ಸಕ್ಕರೆ ಪ್ರಮಾಣದಲ್ಲಿ ಏರುಪೇರಾಗಿ ಆರೋಗ್ಯದಲ್ಲಿ ಸಮಸ್ಯೆ ಆಗುತ್ತಿದೆಯೆಂದು ತುಮಕೂರು ಮಹಾನಗರ ಪಾಲಿಕೆಗೆ ಅಲವತ್ತುಕೊಂಡಿದ್ದಾರೆ.

      ಈ ವಿಷಯವನ್ನು ಆಯುಕ್ತ ಟಿ.ಭೂಬಾಲನ್ ಅವರು ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಅವರೊಡನೆ ಚರ್ಚಿಸುತ್ತ, ಇಂದಿರಾ ಕ್ಯಾಂಟೀನ್‍ನಲ್ಲಿ ದಾನಿಗಳ ನೆರವು ಪಡೆದುಕೊಂಡು ಚಪಾತಿ ಮತ್ತು ರಾಗಿಮುದ್ದೆ ಉಚಿತವಾಗಿ ಲಭಿಸುವಂತೆ ವ್ಯವಸ್ಥೆ ಮಾಡಬಹುದೇ ಎಂದು ಆಲೋಚಿಸಿದ್ದಾರೆ. ಆಗ ಅಲ್ಲೇ ಇದ್ದ ಪಾಲಿಕೆ ಕಚೇರಿಯ ಮ್ಯಾನೇಜರ್ ಮಹೇಶ್ ಅವರು ತಾವು ಪ್ರತಿನಿತ್ಯ 100 ಚಪಾತಿಗಳನ್ನು ಕೊಡುಗೆಯಾಗಿ ಒದಗಿಸುವುದಾಗಿ ಹೇಳಿದ್ದಾರೆ ಹಾಗೂ ತಕ್ಷಣವೇ ಆ ನಿಟ್ಟಿನಲ್ಲಿ ಕ್ರಿಯಾಶೀಲರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ 100 ಚಪಾತಿಗಳನ್ನು ಅವರು ಒದಗಿಸಿದ್ದು, ಅದನ್ನು ತುಮಕೂರು ನಗರದ ನಾಲ್ಕು ಇಂದಿರಾ ಕ್ಯಾಂಟೀನ್ (ಪಾಲಿಕೆ ಬಳಿ, ಕ್ಯಾತಸಂದ್ರ, ಜೆ.ಸಿ.ರಸ್ತೆ ಮತ್ತು ಶಿರಾಗೇಟ್) ಗಳ ಮೂಲಕ ಸಾರ್ವಜನಿಕರಿಗೆ ಒದಗಿಸುವಂತೆ ವ್ಯವಸ್ಥೆ ಮಾಡಲಾಯಿತು.

ಪ್ರತಿ ನಿತ್ಯ ಚಪಾತಿ ಲಭ್ಯ

       ಈ ಲಾಕ್ ಡೌನ್ ಅವಧಿಯಲ್ಲಿ ಪ್ರತಿನಿತ್ಯ ತುಮಕೂರಿನ ನಾಲ್ಕೂ ಇಂದಿರಾ ಕ್ಯಾಂಟೀನ್‍ಗಳಲ್ಲಿ ಸಕ್ಕರೆ ಕಾಯಿಲೆ ಇರುವವರಿಗೆ ಉಚಿತವಾಗಿ ಚಪಾತಿ ಒದಗಿಸಲಾಗುವುದು. ತಲಾ 25 ರಂತೆ ಚಪಾತಿಗಳನ್ನು ನಾಲ್ಕೂ ಕಡೆಗಳಿಗೆ ವಿಂಗಡಿಸಲಾಗಿದೆ. ಅಗತ್ಯವುಳ್ಳವರು ಅಲ್ಲಿ ಕೇಳಿ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಪ್ರತಿ ಇಂದಿರಾ ಕ್ಯಾಂಟೀನ್‍ಗೆ ದಿನವೂ ಊಟದ ಅವಧಿಯಲ್ಲಿ ಮೂರ್ನಾಲ್ಕು ಜನ ಸಕ್ಕರೆ ಕಾಯಿಲೆಯವರು ಬರಬಹುದು. ಮಧ್ಯಾಹ್ನ ಮತ್ತು ರಾತ್ರಿ ಊಟದ ಸಮಯದಲ್ಲಿ ಇದನ್ನು ಕೇಳಿ ಪಡೆಯಬಹುದು ಎಂದು ಡಾ. ನಾಗೇಶ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link