ಹುಳಿಯಾರು
ಚರಂಡಿ ಸೇತುವೆ ಮಾಡದೆ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ ಬರದಲೇ ಪಾಳ್ಯದ ಮಂಜುನಾಥ್ ಆರೋಪಿಸಿದ್ದಾರೆ.
ಕೆಂಕೆರೆಯ ಹೆಬ್ಬಾಗಿಲಿನಿಂದ ದೇವಸ್ಥಾನದವರೆಗಿನ ರಸ್ತೆಯು ತೀರಾ ಅದ್ವಾನವಾಗಿದ್ದು ಸುಗಮ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ಮನಗಂಡ ಗ್ರಾಮ ಪಂಚಾಯ್ತಿ ಈಗ ಉದ್ಯೋಗಖಾತ್ರಿ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ.
ಆದರೆ ಈ ರಸ್ತೆಯ ನಡುವೆ ಎರಡು ಚರಂಡಿ ಸೇತುವೆಗಳಿದ್ದು, ಈ ಸೇತುವೆಗಳು ಈಗಾಗಲೇ ಶಿಥಿಲಗೊಂಡಿವೆ. ಆದರೂ ಚರಂಡಿಗಳನ್ನು ನಿರ್ಮಿಸದೇ ಸಿಸಿ ರಸ್ತೆ ಮಾಡುತ್ತಿದ್ದಾರೆ. ಇದರಿಂದ ಮುಂದೆ ಸಿಸಿ ರಸ್ತೆ ಕುಸಿಯುವ ಸಾಧ್ಯತೆಗಳಿವೆ.
ಹಾಗಾಗಿ ಮೊದಲು ಚರಂಡಿಗೆ ಸೇತುವೆಗಳನ್ನು ನಿರ್ಮಿಸಿ ನಂತರ ಸಿಸಿ ರಸ್ತೆಯನ್ನು ಮಾಡಿದರೆ ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆಗಳು ದೀರ್ಘಕಾಲ ಬಾಳಿಕೆ ಬರುತ್ತದೆ. ಎಂಜಿನಿರ್ ಅವರು ತಕ್ಷಣ ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಸೇತುವೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.