ವಿದ್ಯುತ್ ವಾಹನ ರೀಚಾರ್ಜ್ ಮಾಡುವ ಕೇಂದ್ರ ಉದ್ಘಾಟಿಸಿದ ಸಿಎಂ

ಬೆಂಗಳೂರು

         “ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕಲ್ ವಾಹನಗಳ ಬಳಕೆದಾರರಿಗೆ ಅನುಕೂಲ ಒದಗಿಸಲು ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ರೀಚಾರ್ಜ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ” ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

            ವಿಧಾನಸೌಧದ ಬಳಿ ಬೆಸ್ಕಾಂ ವತಿಯಿಂದ ಖರೀದಿಸಿದ ಎಲೆಕ್ಟ್ರಿಕಲ್ ವಾಹನಗಳಿಗೆ ವಿದ್ಯುತ್ ರೀಚಾರ್ಜ್ ಮಾಡುವ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಜನರ ಜೀವನ ವೆಚ್ಚವೂ ದುಬಾರಿಯಾಗಿದೆ. ಹೀಗಾಗಿ ವಿದ್ಯುತ್ ಚಾಲಿತ ಕಾರು, ದ್ವಿಚಕ್ರ ವಾಹನಗಳನ್ನು ಬಳಸಿದರೆ ಅವರಿಗೆ ಈ ವೆಚ್ಚವೂ ಕಡಿಮೆಯಾಗುತ್ತದೆ ಎಂದು ಹೇಳಿದರು.

             ಸರ್ಕಾರಿ ವಾಹನಗಳ ಪೈಕಿ ಶೇಕಡಾ ಐವತ್ತರಷ್ಟು ವಾಹನಗಳು ವಿದ್ಯುತ್ ಚಾಲಿತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಸರ್ಕಾರದ ವೆಚ್ಚಕ್ಕೂ ಕಡಿವಾಣ ಹಾಕಬೇಕು ಎಂದು ಅವರು ಹೇಳಿದರು.

            ಆರಂಭದಲ್ಲಿ ಬೆಂಗಳೂರಿನಲ್ಲಿ ಇಂತಹ ವಿದ್ಯುತ್ ರೀಚಾರ್ಜ್ ಕೇಂದ್ರಗಳನ್ನು ಸ್ಥಾಪಿಸುತ್ತೇವೆ. ನಂತರ ಹಂತ ಹಂತವಾಗಿ ರಾಜ್ಯಾದ್ಯಂತ ಇದನ್ನು ವಿಸ್ತರಿಸುತ್ತೇವೆ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಹೇಳಿದರು.

             ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಎಲೆಕ್ಟ್ರಿಕಲ್ ವಾಹನಗಳನ್ನೇ ಬಳಸಬೇಕು. ಒಂದು ಸಲ ರೀಚಾರ್ಜ್ ಮಾಡಿದರೆ ನೂರಾ ಇಪ್ಪತ್ತು ಕಿಲೋಮೀಟರು ದೂರ ಕ್ರಮಿಸುವ ಇಂತಹ ವಾಹನಗಳು ಪರಿಸರ ಸ್ನೇಹಿಯೂ ಆಗಿರುವುದರಿಂದ ಜನ ಈ ಕಡೆ ಗಮನ ಹರಿಸಬೇಕು ಎಂದರು.

            ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಸ್ಕಾಂ ಎಂ.ಡಿ ಶಿಖಾ ಅವರು,ಮುಂದಿನ ಜನವರಿ ವೇಳೆಗೆ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ಕಾರ್ ಮತ್ತು ಸ್ಕೂಟರ್ ಗಳಿಗೆ 11 ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುತ್ತದೆ ಎಂದರು.

            ಈಗಾಗಲೇ ಬೆಸ್ಕಾಂ ಮತ್ತು ಕೆಇಆರ್ ಸಿ ಆವರಣದಲ್ಲಿ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗಿದೆ. ವಿಧಾನಸೌಧದಲ್ಲಿ ಮೂರನೇ ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಇನ್ನು 11 ಚಾರ್ಜಿಂಗ್ ಪಾಯಿಂಟ್ ಅಳವಡಿಸಲಾಗುತ್ತದೆ ಎಂದು ಹೇಳಿದರು.

             ಖಾಸಗಿಯವರು ಚಾರ್ಜಿಂಗ್ ಪಾಯಿಂಟ್ ಹಾಕುತ್ತಾರೆ. ಈಗ ಪ್ರಾರಂಭಿಕ ಉತ್ತೇಜನಕ್ಕಾಗಿ ಉಚಿತವಾಗಿ ಚಾರ್ಜಿಂಗ್ ಮಾಡಲಾಗುತ್ತಿದೆ. ನಂತರ ಪ್ರತಿ ಯೂನಿಟ್ ಗೆ 4.50 ರೂ ದರ ವಿಧಿಸಲಾಗುತ್ತದೆ.

             ಖಾಸಗಿ ವ್ಯಕ್ತಿಗಳು ಸಾಮಾನ್ಯ ಜನರೂ ತಮ್ಮ ಅಪಾರ್ಟಮೆಂಟ್ ಹಾಗೂ ಮನೆಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ಬೆಸ್ಕಾಂ ಮತ್ತು ನಗರಾಭಿವೃದ್ಧಿ ಇಲಾಖೆ ಬೈಲಾದಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

            ವಿದ್ಯುತ್ ಚಾಲಿತ ವಾಹನಗಳಲ್ಲಿ ಪ್ರತಿ ಕಿಮೀ ಗೆ 1 ರೂ. ವೆಚ್ಚವಾದರೆ ಪೆಟ್ರೋಲ್ ಡೀಸಲ್ ವಾಹನಗಳಿಗೆ ಪ್ರತಿ ಕಿ.ಮೀ ಗೆ 5 ರೂ. ವೆಚ್ಚವಾಗುತ್ತದೆ. ಜತೆಗೆ ಇದು ಪರಿಸರ ಸ್ನೇಹಿಯಾಗಿದ್ದು, ಹಾಗಾಗಿ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದರು.

           ಎಲೆಕ್ಟ್ರಿಕ್ ಬ್ಯಾಟರಿ ಚಾಲಿತ ಕಾರ್ ಮತ್ತು ಸ್ಕೂಟರ್ ಗಳಿಗೆ ಚಾರ್ಜಿಂಗ್ ಪಾಯಿಂಟ್ ನ್ನು ವಿಧಾನಸೌಧದ ಆವರಣದಲ್ಲಿ ಅಳವಡಿಸಿರುವ ಬೆಸ್ಕಾಂ. ಪ್ರತಿ ಯೂನಿಟ್ ಗೆ 4.50 ರೂ.ನಂತೆ ಒಂದು ಕಿಲೋ ವ್ಯಾಟ್ ಗೆ 50 ರೂ. ಶುಲ್ಕ ನಿಗದಿ ಪಡಿಸಿದ್ದು, ಒಂದು ಕಾರ್ ಸಂಪೂರ್ಣ ಚಾರ್ಜ್ ಆಗಲು 90 ನಿಮಿಷ ಸಮಯ ತೆಗೆದುಕೊಳ್ಳುತ್ತದೆ.15 ಕಿಲೋ ವ್ಯಾಟ್ ಚಾರ್ಜ್ ನಲ್ಲಿ 100 ರಿಂದ 120 ಕಿ.ಮೀ ಕ್ರಮಿಸಬಹುದಾಗಿದೆ ಎಂದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap