ಕೆಐಎ ಅಧಿಕಾರಿಯ ಸೋಗಿನಲ್ಲಿ ವಂಚನೆ

ಬೆಂಗಳೂರು

          ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಅಧಿಕಾರಿ ಎಂದು ನಂಬಿಸಿದ ಐನಾತಿ ಮಹಿಳೆಯೊಬ್ಬಳು ಕಾರು ಮಾರಾಟ ಮಾಡುವುದಾಗಿ ಕ್ಯಾಬ್ ಚಾಲಕನಿಗೆ 1.25 ಲಕ್ಷ ರೂ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

          ಒಎಲ್‍ಎಕ್ಸ್‍ನಲ್ಲಿ ಕಾರು ಮಾರಾಟಕ್ಕಿರುವ ಜಾಹೀರಾತು ನೋಡಿ ಅದರಲ್ಲಿದ್ದ ಮೊಬೈಲ್‍ಗೆ ಕರೆ ಮಾಡಿ ಕಾರು ಮಾಡಿದ ಟಿ.ದಾಸರಹಳ್ಳಿಯ ಕ್ಯಾಬ್ ಚಾಲಕ ರವಿ ಕುಮಾರ್ (32)ಗೆ ಕೆಐಎ ಅಧಿಕಾರಿ ಎಂದು ಹೇಳಿಕೊಂಡ ಮಹಿಳೆಯು ಬ್ಯಾಂಕ್ ಅಕೌಂಟಿಗೆ ಎರಡು ಬಾರಿ 1.25 ಲಕ್ಷ ರೂ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾಳೆ.

ಕೃತ್ಯದ ವಿವರ

         ಮಹಿಳೆ ತನ್ನ ಹೆಸರು ಪ್ರಿಯಾ ಎಂದೂ, ಕೆಐಎ ಅಧಿಕಾರಿ ಎಂದೂ ಪರಿಚಯಿಸಿಕೊಂಡು ನೀವು ಇಷ್ಟಪಟ್ಟಿರುವ ಮಾರುತಿ ಸ್ವಿಫ್ಟ್ ಕಾರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ. ಕಾರಿನ ಮಾಲೀಕರು ಅಮೆರಿಕಕ್ಕೆ ವಾಪಾಸಾಗಿದ್ದಾರೆ. ಅವರು ಕಾರಿನ ದಾಖಲೆ ಮತ್ತು ಮಾಲೀಕತ್ವವನ್ನು ತನಗೆ ನೀಡಿದ್ದು, ಬಂದು ಕಾರನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಳು. ಆದರೆ ಕಾರನ್ನು ವಿಮಾನ ನಿಲ್ದಾಣದಿಂದ ಹೊರಗೆ ತರಬೇಕೆಂದರೆ 35 ಸಾವಿರ ರೂ.ನಿಲುಗಡೆ ಶುಲ್ಕ ಕೊಡಬೇಕು ಎಂದು ಕೇಳಿದ್ದಳು.

        ಪ್ರಿಯಾ ಮಾತನ್ನು ಆರಂಭದಲ್ಲಿ ನಂಬದ ರವಿ ಕುಮಾರ್ ಬಳಿಕ ಪ್ರಿಯಾ ಐಡಿ ಕಾರ್ಡ್ ಕಳುಹಿಸಿ, ಅದರಲ್ಲಿ ಕೆಐಎ ಸೆಕ್ಯುರಿಟಿ ಆಫೀಸರ್ ಎಂದು ಬರೆದಿದ್ದನ್ನು ಗಮನಿಸಿ ಹಾಗೂ ಆಕೆಯ ಆಧಾರ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿ ಕಳುಹಿಸಿದ್ದರಿಂದ ಮಹಿಳೆ ಮಾತನ್ನು ನಂಬಿದ್ದರು. ಇದರಿಂದ ಆಕೆ ಬ್ಯಾಂಕ್ ಖಾತೆಗೆ 35 ಸಾವಿರ ಹಣ ವರ್ಗಾವಣೆ ಮಾಡಿದ್ದರು.

        ವಿಮಾನ ನಿಲ್ದಾಣಕ್ಕೆ ರವಿಕುಮಾರ್ ಹೊರಟು ನಿಂತಾಗ ಅದೇ ವೇಳೆ ಕರೆ ಮಾಡಿದ ಪ್ರಿಯಾ ಕಾರಿನ ಮೇಲೆ ಒಂದೂವರೆ ಲಕ್ಷ ರೂ ಸಾಲ ಇದೆಯಂತೆ. ಈಗ ಬ್ಯಾಂಕ್‍ನವರು ಕರೆ ಮಾಡಿ ವಿಷಯ ತಿಳಿಸಿದರು. ಆ ಹಣವನ್ನು ನೀವು ಪಾವತಿಸಿ, ನಮಗೆ ಕೊಡಬೇಕಾದ ಕಾರಿನ ಹಣ 3 ಲಕ್ಷದಲ್ಲಿ ಅದನ್ನು ಕಡಿತ ಮಾಡಿಕೊಳ್ಳಿ. ಆ ಹಣವನ್ನು ನನ್ನ ಖಾತೆಗೆ ಬೇಡ. ಸೀದಾ ಬ್ಯಾಂಕ್‍ನ ಸಾಲದ ಖಾತೆಗೇ ವರ್ಗಾಯಿಸಿ ಎಂದು ಹೇಳಿದ್ದಳು.

ಪೊಲೀಸರಿಗೆ ದೂರು

        ಇದನ್ನು ನಂಬಿದ ರವಿ ಕುಮಾರ್ 1 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಮಾಡಿದ್ದರು. ಹಣ ಪಡೆದ ಪ್ರಿಯಾ, ಮಧ್ಯಾಹ್ನ 2 ಗಂಟೆಯೊಳಗೆ ವಿಮಾನ ನಿಲ್ದಾಣಕ್ಕೆ ಬರುವಂತೆ ಹೇಳಿದ್ದಳು. ತಕ್ಷಣ ವಿಮಾನ ನಿಲ್ದಾಣಕ್ಕೆ ಹೊರಟ ರವಿ ಕುಮಾರ್, ಕೆಐಎಗೆ ತಲುಪಿ ಪ್ರಿಯಾ ನಂಬರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು.

       ಎಷ್ಟು ಹೊತ್ತುಕಾದರೂ ನಂಬರ್ ಸ್ವಿಚ್ ಆನ್ ಆಗಿಲ್ಲ. ಗಾಬರಿಯಾದ ರವಿ ಕುಮಾರ್, ಪ್ರಿಯಾಳ ಐಡಿ ಕಾರ್ಡ್ ನ್ನು ತೋರಿಸಿ ವಿಮಾನ ನಿಲ್ದಾಣದ ಸಿಬ್ಬಂದಿ ಬಳಿ ವಿಚಾರಿಸಿದಾಗ ಆ ಹೆಸರಿನ ಸಿಬ್ಬಂದಿಯಾರೂ ತಮ್ಮಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದರಿಂದ ದಂಗಾದ ರವಿ ಕುಮಾರ್ ತಾನು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link