ತುಮಕೂರು:
ರಾಜ್ಯ ಕಂಡ ಅಪರೂಪದ ರಾಜಕಾರಣಿ ಚನ್ನಿಗಪ್ಪ ಅವರ ಹುಟ್ಟುಹಬ್ಬವನ್ನು ಆಚರಿಸಿದ ಬೆನ್ನಲ್ಲೆ, ಪುಣ್ಯಸ್ಮರಣೆ ಮಾಡುತ್ತಿರುವುದು ನೋವಿನ ಸಂಗತಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದರು.ನಗರದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಚಿವ ದಿವಂಗತ ಸಿ.ಚನ್ನಿಗಪ್ಪ ಅವರ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು ಚನ್ನಿಗಪ್ಪಾಜಿ ಅವರು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದರು, ಅವರ ಬದುಕೇ ಮಾದರಿಯಾಗಿತ್ತು ಎಲ್ಲರಿಗೂ ಸಮನಾಗಿ ಪ್ರೀತಿಯನ್ನು ಹಂಚಿದ ಬಹುದೊಡ್ಡ ಸಂತ ಎಂದು ಅಭಿಪ್ರಾಯಪಟ್ಟರು.
ಚನ್ನಿಗಪ್ಪ ಅವರಿಗಿದ್ದ ಮಾತೃ ಹೃದಯದಿಂದಲೇ ಎಲ್ಲರ ನೋವನ್ನು ಗಮನಿಸುತ್ತಿದ್ದರು, ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದರು, ಕೊರಟಗೆರೆ ಶಾಸಕರಾಗಿದ್ದರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರು ಅವರಿಂದಲೇ ಜಿಲ್ಲೆಯಲ್ಲಿ ಪಕ್ಷ ಸದೃಢವಾಯಿತು ಎಂದು ಚನ್ನಿಗಪ್ಪ ಅವರನ್ನು ನನೆದರು.
ತುಮಕೂರು ಜಿಲ್ಲೆಯ ಹನ್ನೊಂದು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಆಯ್ಕೆಯಾಗಬೇಕು ಎನ್ನುವ ಕನಸು ಚನ್ನಿಗಪ್ಪ ಅವರಿಗಿತ್ತು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಎಲ್ಲರೂ ಸೇರಿ ಚನ್ನಿಗಪ್ಪ ಅವರ ಕನಸನ್ನು ಈಡೇರಿಸಬೇಕು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ ಎಂದು ತಿಳಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಅವರು ಮಾತನಾಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನಿಗಪ್ಪ ಅವರು ಚೇತರಿಸಿಕೊಳ್ಳಲಿ ಎಂದು ಎಲ್ಲ ಕಾರ್ಯಕರ್ತರು ಹಾರೈಸುತ್ತಿದ್ದರು, ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು ಎಂದು ಕಂಬನಿ ಮಿಡಿದರು.
ಡಾ.ಶಿವಕುಮಾರಸ್ವಾಮೀಜಿ ಅವರ ಭಕ್ತರಾಗಿದ್ದ ಚನ್ನಿಗಪ್ಪ ಅವರು ಶ್ರೀಗಳ ದಾರಿಯಲ್ಲಿಯೇ ಅನ್ನದಾಸೋಹ, ವಿದ್ಯಾದಾಸೋಹವನ್ನು ನಡೆಸಿದರು, ಚನ್ನಿಗಪ್ಪ ಅವರಿಗಿದ್ದ ವಿಶಾಲ ಮನೋಭಾವ, ಸೇವೆ ಮಾಡುವ ಮನೋಭಾವ ಬೇರೆ ಯಾರಿಗೂ ಬರಲು ಸಾಧ್ಯವಿಲ್ಲ, ದೇವೇಗೌಡರಿಗೆ ಬಲಗೈ ಬಂಟರಾಗಿದ್ದ ಚನ್ನಿಗಪ್ಪ ಅವರ ಅಗಲಿಕೆ ಜಿಲ್ಲೆಗೆ ಮಾತ್ರ ರಾಜ್ಯಕ್ಕೆ ತುಂಬಲಾಗದ ನಷ್ಟ ಎಂದರು.
ಚನ್ನಿಗಪ್ಪ ಅವರ ಋಣ ತೀರಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿ, ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಅವರ ಸ್ಮರಣಾ ಕಾರ್ಯಕ್ರಮವನ್ನು ದೊಡ್ಡ ಮಟ್ಟ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.ಜೆಡಿಎಸ್ ಮುಖಂಡ ಗೋವಿಂದರಾಜು ಮಾತನಾಡಿ ಚನ್ನಿಗಪ್ಪ ಅವರಿಗೆ ಇದ್ದ ಹೋರಾಟದ ಮನೋಭಾವನೆಯಿಂದಲೇ ಸಚಿವರಾದರು, ಪೊಲೀಸ್ ಇಲಾಖೆಯಲ್ಲಿ ಇದ್ದಾಗಲೇ ಚೆನ್ನಿಗಪ್ಪ ಅವರು ಪರಿಚಿತರು, ಅವರ ಮೇರು ವ್ಯಕ್ತಿತ್ವದಿಂದಲೇ ಎಲ್ಲರಿಗೂ ಆತ್ಮೀಯರಾಗುತ್ತಿದ್ದರು ಎಂದು ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.
ಚನ್ನಿಗಪ್ಪ ಅವರದ್ದು ಸರಳ ವ್ಯಕ್ತಿತ್ವ, ಬೈಯ್ಯುತ್ತಿದ್ದರು ಹಾಗೆ ಬುದ್ದಿ ಹೇಳುತ್ತಿದ್ದರು ಅಂತಹ ದೊಡ್ಡಗುಣದಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು, ಯಾರ ಬಗ್ಗೆಯೂ ದ್ವೇಷ ಸಾಧನೆಯನ್ನು ಮಾಡುತ್ತಿರಲಿಲ್ಲ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಶ್ರಮವಹಿಸಿದ್ದರು, ಪಕ್ಷಕ್ಕಾಗಿ ಅವರಿಗಿದ್ದ ಬದ್ಧತೆ ಎಲ್ಲರಿಗೂ ಅನುಕರಣೀಯ ಎಂದು ಅಭಿಪ್ರಾಯಪಟ್ಟರು.
ಯುವ ಘಟಕದ ಮುಖಂಡ ಬೆಳ್ಳಿ ಲೋಕೇಶ್ ಮಾತನಾಡಿ ನಿಜವಾಗಿಯೂ ಸಮಾಜ ಸೇವೆ ಮಾಡಿದ್ದು ಚೆನ್ನಿಗಪ್ಪ ಅವರು, ಅಧಿಕಾರಿಗಳು ಜನರ ಸೇವಕ ಎನ್ನುವುದನ್ನು ಕಾರ್ಯರೂಪಕ್ಕೆ ಬಂದವರು ಅವರು, ಕಾರ್ಯಕರ್ತರಿಗೆ ಶಕ್ತಿ ತುಂಬಿದರು ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
ಚೆನ್ನಿಗಪ್ಪ ಅವರ ಹಾದಿ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕು ಆಗ ಮಾತ್ರ ಚನ್ನಿಗಪ್ಪ ಅವರು ನಮ್ಮೊಂದಿಗೆ ಎಂದಿಗೂ ಅವರು ಇರುತ್ತಾರೆ ಎಂದ ಅವರು ಪಕ್ಷದ ಕಚೇರಿಯ ಸಭಾಂಗಣಕ್ಕೆ ಚನ್ನಿಗಪ್ಪ ಹೆಸರನ್ನು ಇಡಬೇಕು ಆ ಮೂಲಕ ಅವರ ಹೆಸರನ್ನು ಚಿರಸ್ಥಾಯಿಯಾಗಿಸಬೇಕು, ಅವರ ಜನ್ಮಜಯಂತಿಯನ್ನು ಆಚರಿಸಲು ತುಮಕೂರು ನಗರ ಘಟಕ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮಹಾಲಿಂಗಯ್ಯ, ಬೆಳ್ಳಿ ಲೋಕೇಶ್, ಹಿರೇಹಳ್ಳಿ ಮಹೇಶ್, ಸೋಲಾರ್ ಕೃಷ್ಣಮೂರ್ತಿ, ಗಂಗಣ್ಣ, ದೇವರಾಜು, ಕುಂಭಯ್ಯ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾಹೀರಾಭಾನು, ಲಕ್ಷ್ಮಮ್ಮ, ಲೀಲಾವತಿ, ಕೃಷ್ಣಮೂರ್ತಿ, ಗಣೇಶ್ ಸೇರಿದಂತೆ ಪಾಲಿಕೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
