`ವಿದ್ಯಾರ್ಥಿಗಳು ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆಯಿರಿ’

ತುರುವೇಕೆರೆ

     ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ “ವಿಶ್ವಾಸ ಕಿರಣ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದರು.

      ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸ್ತುತ ದಸರಾ ರಜೆಯ 9 ದಿನ ಉಳಿದಂತೆ 16 ಶನಿವಾರಗಳು ಸೇರಿದಂತೆ 25 ದಿನಗಳ ಕಾಲ ಹಮ್ಮಿಕೊಂಡಿರುವ ವಿಶೇಷ ವಿಶ್ವಾಸಕಿರಣ ಹೆಚ್ಚುವರಿ ಬೋಧನಾ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು .

      ಕಳೆದ ಸಾಲಿನಲ್ಲಿ ಇದನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿತ್ತು. ಇದರಿಂದಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಗುಣಾತ್ಮಕ ಕಲಿಕೆಯೊಂದಿಗೆ ಪರೀಕ್ಷೆಗಳಲ್ಲಿ ಗಣನೀಯ ಅಂಕ ಗಳಿಸುವಲ್ಲಿ ಉತ್ತಮ ಪ್ರಭಾವ ಬೀರಿತ್ತು. ಇದನ್ನು ಮನಗಂಡ ಶಿಕ್ಷಣ ಇಲಾಖೆ ಪ್ರಸ್ತುತ ಸಾಲಿನಿಂದ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿದೆ. ಹಾಗೆಯೇ ಈ ಬೋಧನಾ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅಷ್ಟೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟವನ್ನು ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಕೊಳ್ಳುವುದರೊಂದಿಗೆ ಉತ್ತಮ ಅಂಕಗಳಿಕೆಯೊಂದಿಗೆ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.

      ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಪ್ರಾಂಶುಪಾಲ ಹಾಗೂ ನೋಡಲ್ ಅಧಿಕಾರಿ ಕೆ.ಎಸ್.ನಾಗರಾಜಪ್ಪ ಮಾತನಾಡಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬಹುತೇಕ ವಿಜ್ಞಾನ, ಗಣಿತ, ಇಂಗ್ಲೀಷ್ ವಿಷಯಗಳು ಕಠಿಣವೆನ್ನುತ್ತಾರೆ. ಈ ನಿಟ್ಟಿನಲ್ಲಿ ಇದೇ ಮೂರು ವಿಷಯಗಳನ್ನು ಒಳಗೊಂಡಂತೆ ತಜ್ಞ ವಿಷಯ ಬೋಧಕರನ್ನು ಕರೆಸಿ ಶಿಕ್ಷಣ ನೀಡಲಾಗುತ್ತದೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ, ದಂಡಿನಶಿವರ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳು ಹತ್ತಿರದ ಕೇಂದ್ರಗಳಲ್ಲಿ ಪಾಲ್ಗೊಳ್ಳಬಹುದು ಎಂದರು.

      ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅನಂತರಾಮು, ಸಂಪನ್ಮೂಲ ವ್ಯಕ್ತಿಗಳಾದ ನೂರ್‍ಅಹಮದ್, ಸಾವಿತ್ರಿ, ರೂಪಶ್ರೀ, ಸಚೀಂದ್ರನ್ ಪಾಲ್ಗೊಂಡಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap