ತುಮಕೂರು
ನಮ್ಮ ಮಕ್ಕಳಿಗೆ ಜಾತಿ-ಬೇಧವಿಲ್ಲದಿರುವಂತಹ, ಸೋಲು-ಗೆಲುವನ್ನು ಸಮಾನವಾಗಿ ಕಾಣುವಂತಹ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಶಿಕ್ಷಕರಿಗೆ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಡಾ: ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ 133ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಹೆಚ್ಚಿನ ಅಂಕಗಳಿಸುವ ಶಿಕ್ಷಣಕ್ಕಿಂತ ಸಾಮಾಜಿಕ ಪ್ರಜ್ಞೆ ಮೂಡಿಸುವಂತಹ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರಿಂದಲೇ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವೆಂಬುದು ಡಾ: ಎಸ್.ರಾಧಾಕೃಷ್ಣನ್ ಬಲವಾಗಿ ನಂಬಿದ್ದರು. ಶಿಕ್ಷಕ ಹಾಗೂ ವಿದ್ಯಾರ್ಥಿಗೆ ವಿಶ್ವವನ್ನೇ ಬದಲಾಯಿಸುವ ಶಕ್ತಿಯಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಶಿಕ್ಷಕರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದ ಅವರು ಪ್ರತಿಯೊಬ್ಬರ ಉತ್ತಮ ಜೀವನವನ್ನು ರೂಪಿಸುವಂತಹ ಶಿಕ್ಷಕರಿಗೆ ನಮನ ಸಲ್ಲಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ತಮ್ಮ ಜನ್ಮ ದಿನದಂದೇ ಶಿಕ್ಷಕರ ದಿನವನ್ನಾಗಿ ಆಚರಿಸಬೇಕೆಂಬ ಇಂಗಿತವನ್ನು ವ್ಯಕ್ತಿಪಡಿಸಿದ್ದರಿಂದ 1962ರಿಂದಲೂ ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವಿದ್ಯೆ ಕಲಿಸಿದ ನಮ್ಮೆಲ್ಲ ಶಿಕ್ಷಕರನ್ನು ಸ್ಮರಿಸುವ ಮೂಲಕ ಋಣ ತೀರಿಸಲು ಇದು ಸುದಿನವೆಂದು ಮಾರ್ಮಿಕವಾಗಿ ಹೇಳಿದರು.
ನಮಗೆಲ್ಲ ತಾಯಿಯೇ ಮೊದಲ ಗುರುವಾದರೂ, ಶೈಕ್ಷಣಿಕ ಜೀವನದಲ್ಲಿ ವಿದ್ಯೆ ಕಲಿಸುವ ಮೂಲಕ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ ಎಂದು ತಿಳಿಸಿದರಲ್ಲದೆ ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ನಮ್ಮ ಜೀವ ಹಾಗೂ ಜೀವನ ಇವೆರಡೂ ಬಹಳ ಮುಖ್ಯವಾದುದು. ಜೀವವನ್ನು ಉಳಿಸುವ ಜವಾಬ್ದಾರಿ ವೈದ್ಯರಾದದರೆ, ಜೀವನವನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರೆಲ್ಲ ತಮ್ಮ ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಬೇಕಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮನೆಯಿಂದ ಹೊರಗಡೆ ಹೋಗದ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಹಲವಾರು ಸವಾಲುಗಳನ್ನೆದುರಿಸುತ್ತಾ, ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊಂಡು ವಿದ್ಯೆ ಕಲಿಸಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.
ಮಕ್ಕಳ ಶೈಕ್ಷಣಿಕ ವರ್ಷ ಹಾಳಾಗಬಾರದೆಂದು ಕೋವಿಡ್-19 ಸಂಕಷ್ಟ ಸಂದರ್ಭದಲ್ಲಿಯೂ ಸಹ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಡೆಸಲಾಯಿತು. ಕೋವಿಡ್ ಸೋಂಕಿನಂತಹ ಸವಾಲುಗಳನ್ನು ಎದುರಿಸಿ ಮಕ್ಕಳಿಗೆ ವಿದ್ಯೆ ಕಲಿಸಲು ಸಿದ್ಧರಾಗಬೇಕೆಂದು ಶಿಕ್ಷಕರಿಗೆ ಕರೆ ನೀಡಿದ ಅವರು ಮಕ್ಕಳಿಗೆ ಒತ್ತಡದ ವಾತಾವರಣದಲ್ಲಿ ವಿದ್ಯೆ ಕಲಿಸುವುದಕ್ಕಿಂತ ಅವರಲ್ಲಿ ಸಾಮಾಜಿಕ ಕಳಕಳಿ, ದೇಶಭಕ್ತಿಯನ್ನು ಬೆಳೆಸುವಂತಹ ಶಿಕ್ಷಣ ನೀಡಿದಾಗ ಮಾತ್ರ ಡಾ: ರಾಧಾಕೃಷ್ಣನ್ ಅವರ ಆಸೆಯಂತೆ ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ಮಾಜಿ ರಾಷ್ಟ್ರಪತಿ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು. “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂಬಂತೆ ರಾಧಾಕೃಷ್ಣನ್ ಅವರು ತಾವು ಕಲಿತಿರುವ ವಿದ್ಯೆಯನ್ನು ಸಮಾಜಕ್ಕೇ ಧಾರೆಯೆರೆದಿದ್ದಾರೆ. ತಮಿಳುನಾಡಿನ ಕುಗ್ರಾಮದಲ್ಲಿ ಜನಿಸಿ ದೇಶದ ಉನ್ನತ ಸ್ಥಾನಕ್ಕೇರುವ ಮೂಲಕ ದೇಶಕ್ಕೇ ಮಾದರಿಯಾಗಿದ್ದರು. ಗುರು ಬ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ್ ಮಹೇಶ್ವರಃ ಎಂದು ಗುರುಗಳನ್ನು ದೈವತ್ವಕ್ಕೆ ಹೋಲಿಸಿದ ಸಂಸ್ಕøತಿ ನಮ್ಮದು. ಕೋವಿಡ್-19 ಸಂಕಷ್ಟದಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿರುವ ಶಿಕ್ಷಕರ ಕಾರ್ಯಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಮಕ್ಕಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯೆ ಕಲಿಸಲು ಮುಂದೆ ಬಂದಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ. ಪ್ರಸಕ್ತ ಶೈಕ್ಷಣಿಕ ವರ್ಷ ಹಾಳಾಗದಂತೆ ತಂತ್ರಜ್ಞಾನ ಬಳಸಿಕೊಂಡು ಆನ್‍ಲೈನ್ ಮೂಲಕವೂ ತರಗತಿಗಳನ್ನು ನಡೆಸುತ್ತಿರುವ ಶಿಕ್ಷಕರ ಸೇವೆ ಅನನ್ಯವಾದದ್ದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ದೇಶದ ಹೆಮ್ಮೆಯ ತತ್ವಶಾಸ್ತ್ರಜ್ಞರಾದ ಡಾ: ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿರುವುದು ದೇಶದ ಶಿಕ್ಷಣದ ಮಹತ್ವವನ್ನು ಹೆಚ್ಚಿಸಿದಂತಾಗಿದೆಯಲ್ಲದೆ ವಿದ್ಯಾ-ಬುದ್ಧಿ ಕಲಿಸಿದ ಗುರುಗಳನ್ನೆ ಅನುಕರಿಸೋಣ ಎಂದು ಸಾರಿ ಸಾರಿ ಹೇಳುವ ಮೂಲಕ ಶಿಕ್ಷಕರ ಘನತೆಯನ್ನು ಹೆಚ್ಚಿಸಿದ್ದ ಸರ್ವಪಲ್ಲಿಯವರ ಹಾದಿಯಲ್ಲಿ ನಡೆಯಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಪಾಲ್ಗೊಳ್ಳಲು ಸಾಧ್ಯವಾಗದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ, ವಿಧಾನಪರಿಷತ್ ಸದಸ್ಯ ಡಾ: ವೈ.ಎ. ನಾರಾಯಣಸ್ವಾಮಿ, ಶಾಸಕ ಜ್ಯೋತಿ ಗಣೇಶ್ ಹಾಗೂ ಮತ್ತಿತರ ಜನಪ್ರತಿನಿಧಿಗಳು ಕಳುಹಿಸಿದ ಶಿಕ್ಷಕರ ದಿನಾಚರಣೆಯ ಸಂದೇಶವನ್ನು ಕೃಷ್ಣಪ್ಪ ಅವರು ವಾಚನ ಮಾಡಿದರು.
ಇದಕ್ಕೂ ಮುನ್ನ ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರೆಲ್ಲ ಪುಷ್ಪನಮನ ಸಲ್ಲಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ನಂಜಯ್ಯ ಸ್ವಾಗತಿಸಿದರು. ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಕವಿತಾ, ಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಸದಸ್ಯ ವೈ.ಹೆಚ್. ಹುಚ್ಚಯ್ಯ, ಲಕ್ಷ್ಮಿನರಸಿಂಹೇಗೌಡ, ನರಸಿಂಹಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಡಯಟ್ ಪ್ರಾಂಶುಪಾಲ ಕೆ. ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ್, ಶಿಕ್ಷಕರ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರು ಹಾಜರಿದ್ದರು.
ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಸಹ ಶಿಕ್ಷಕರಾದ ಗುಬ್ಬಿ ತಾಲ್ಲೂಕು ಮುಸಕೊಂಡ್ಲಿ ಶಾಲೆಯ ವಿಮಲ ರೀಟಾ ಟಿ.ಎ., ಕುಣಿಗಲ್ ತಾಲ್ಲೂಕು ಹೊನ್ನೇಗೌಡನಪಾಳ್ಯ ಶಾಲೆಯ ಐ.ಆರ್. ಉಮೇಶ್, ತಿಪಟೂರು ತಾಲ್ಲೂಕು ದಾಸಿಹಳ್ಳಿಯ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಜಿ.ಸಿ. ಕುಮಾರ್, ತುಮಕೂರು ತಾಲ್ಲೂಕು ಕರೆಕಲ್ಲುಪಾಳ್ಯ ಶಾಲೆಯ ಜಯಶಂಕರ್ ಹಾಗೂ ನಂದಿಹಳ್ಳಿ ಶಾಲೆಯ ಎಂ.ಜಿ. ಶಶಿಕಲಾ, ತುರುವೇಕೆರೆ ತಾಲ್ಲೂಕು ಮಾಸ್ತಿಗೊಂಡನಹಳ್ಳಿ ಶಾಲೆಯ ಪದ್ಮ ಜಿ.ಆರ್. ಅವರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅದೇ ರೀತಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹಶಿಕ್ಷಕರಾದ ಗುಬ್ಬಿ ತಾಲ್ಲೂಕು ಮಂಚಲದೊರೆ ಶಾಲೆಯ ಮಂಜುನಾಥ ಜೆ.ಜಿ., ತುಮಕೂರು ತಾಲ್ಲೂಕು ಬಳ್ಳಗೆರೆ ಶಾಲೆಯ ಜಿ. ಶ್ರೀನಿವಾಸಯ್ಯ, ತುರುವೇಕೆರೆ ತಾಲ್ಲೂಕು ಬೊಮ್ಮೇನಹಳ್ಳಿ ಶಾಲೆಯ ರತೀಶ್‍ಕುಮಾರ್ ಎಸ್.ಪಿ., ತಿಪಟೂರು ತಾಲ್ಲೂಕು ಹುಲಿಹಳ್ಳಿ ಶಾಲೆಯ ಬಿ. ಸುಂದರಮೂರ್ತಿ, ಕುಣಿಗಲ್ ತಾಲ್ಲೂಕು ಕಿಚ್ಚವಾಡಿ ಶಾಲೆಯ ತರಬೇತಿ ಹೊಂದಿದ ಪದವೀಧರ ಶಿಕ್ಷಕ(ಟಿಜಿಟಿ) ಹೇಮಂತರಾಜು, ತುಮಕೂರು ತಾಲೂಕು ಶಾಲೆಯ ಮುಖ್ಯ ಶಿಕ್ಷಕ ಡಿ. ಶಿವರಾಜಯ್ಯ ಅವರನ್ನು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಗುಬ್ಬಿ ತಾಲ್ಲೂಕು ಶಿವಪುರ ಶಾಲೆಯ ಸಹ ಶಿಕ್ಷಕ ಶಶಿಧರ ಡಿ.ಆರ್., ಕುಣಿಗಲ್ ತಾಲ್ಲೂಕು ಅಮೃತೂರಿನ ಕೆ.ಪಿ.ಎಸ್.ಶಾಲೆಯ ಅಜ್ಜಯ್ಯ, ತಿಪಟೂರು ತಾಲ್ಲೂಕು ನೊಣವಿನಕೆರೆಯ ಅನುದಾನಿತ ಜಯಪ್ರಕಾಶ ಪ್ರೌಢಶಾಲೆಯ ದೈಹಿಕ ಶಿಕ್ಷಕ ಶಂಕರಲಿಂಗಪ್ಪ ಕೆ.ಬಿ., ತುಮಕೂರು ತಾಲ್ಲೂಕು ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಶಿವಸ್ವಾಮಿ ಡಿ.ಎಸ್., ತುರುವೇಕೆರೆ ಟೌನ್‍ನ ಸ.ಮಾ.ಬಾ.ಹಿ.ಪ್ರಾ.ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಸತೀಶ್‍ಕುಮಾರ್ ಸಿ. ಹಾಗೂ ತುರುವೇಕೆರೆ ತಾಲ್ಲೂಕು ತಂಡಗದ ಶ್ರೀ ಶಾಲಿವಾಹನ ಗ್ರ್ರಾಮಾಂತರ ಪ್ರೌಢಶಾಲೆಯ ವೃತ್ತಿ ಶಿಕ್ಷಕ ವೆಂಕಟೇಶಯ್ಯ ಎಂ.ಜಿ. ಅವರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸರ್ಕಾರಿ ಶಾಲೆಗಳಲ್ಲದೆ ಜಿಲ್ಲೆಯ ಖಾಸಗಿ ಅನುದಾನರಹಿತ ಶಾಲಾ ಶಿಕ್ಷಕರಿಗೂ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖಾಸಗಿ ಶಾಲೆಗಳ ಪ್ರೌಢಶಾಲಾ ವಿಭಾಗದಲ್ಲಿ ತುಮಕೂರು ತಾಲೂಕು ಸಿದ್ದಗಂಗಾ ಬಡಾವಣೆ ಮಾರುತಿ ಇಂಟರ್ ನ್ಯಾಷನಲ್ ಶಾಲೆಯ ವೀಣಾ.ಎಸ್., ಸೈಂಟ್ ಜೋಸೆಫ್ಸ್ ಶಾಲೆಯ ಪಂಚಾಕ್ಷರಿ ಸ್ವಾಮಿ ಎಚ್.ಎಸ್., ಅಂತರಸನಹಳ್ಳಿ ಚೈತನ್ಯ ವಿದ್ಯಾಮಂದಿರದ ಕೆ.ಸಿ ಪುಷ್ಪಲತಾ, ಟಿಪ್ಪುನಗರ ಆಜಾದ್ ಮಾಡ್ರನ್ ಶಾಲೆಯ ನಾಗರತ್ನಮ್ಮ, ಸರಸ್ವತಿಪುರಂ ವಿದ್ಯಾನಿಕೇತನ ಶಾಲೆಯ ಸಿ.ಎಸ್. ಭಾರತಿ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿದ್ಯಾನಗರ ವಿವೇಕಾನಂದ ಶಾಲೆಯ ಸವಿತ.ವಿ., ಬಟವಾಡಿ ಚೇತನ ವಿದ್ಯಾಮಂದಿರದ ಸಿ.ಎಸ್ ಅನಸೂಯ ಅವರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ