ಚೈನಾ ಪ್ಲಾಸ್ಟಿಕ್ ಹೂ ನಿಷೇಧಕ್ಕೆ ಒತ್ತಾಯ

ಬೆಂಗಳೂರು

    ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಚೈನಾ ಪ್ಲಾಸ್ಟಿಕ್ ಹೂಗಳ ಬಳಕೆ ರಾಜ್ಯದ ಹೂ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದ್ದು, ಚೈನಾದಿಂದ ಆಮದಾಗುತ್ತಿರುವ ಪ್ಲಾಸ್ಟಿಕ್ ಹೂಗಳನ್ನು ನಿಷೇಧಿಸಬೇಕು ಹಾಗೂ ಹೂ ಮಾರಾಟಕ್ಕೆ ಸೂಕ್ತ ಮಾರುಕ್ಟೆ ನಿರ್ಮಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ಪ್ರಮುಖರು ನಗರದ ಲಾಲ್ ಭಾಗ ಎದುರು ವಿನೂತನ ಪ್ರತಿಭಟನೆ ನಡೆಸಿದರು.

    ಸುಮಾರು 10 ಲಕ್ಷ ಮೌಲ್ಯದ ಹೂಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚುವ ಮೂಲಕ ಜನರಲ್ಲಿ ಪ್ಲಾಸ್ಟಿಕ್ ಹೂಗಳ ಬಳಕೆಯಿಂದ ಪರಿಸರದ ಮೇಲೆ ಆಗುವ ದುಷ್ಟುರಿಣಾಮಗಳು ಹಾಗೂ ರೈತರಿಗೆ ಆಗುವ ಅನ್ಯಾಯದ ಬಗ್ಗೆ ಅರಿವು ಮೂಡಿಸಲುವ ಪ್ರಯತ್ನ ಮಾಡಿದರು.

    ದಕ್ಷಿಣ ಭಾರತ ಹೂ ಬೆಳೆಗಾರರ ಸಂಘದ ನಿರ್ದೇಶಕ ಶ್ರೀಕಾಂತ್ ಮಾತನಾಡಿ, ರಾಜ್ಯದಲ್ಲಿ ಹೂ ಬೆಳೆಗಾರರು ಸುಮಾರು 5850 ಏಕರೆಯಷ್ಟು ಪಾಲಿಹೌಸ್ ಗಳ ಮೂಲಕ ಗುಲಾಬಿ, ಗೆರ್ಬೆಸ್ಪರಾ, ಕಾರ್ನೇಷನ್, ಸ್ರ್ಪೇ ರೋಸಸ್ ಸೇರಿದಂತೆ 25 ಕ್ಕೂ ಹೆಚ್ಚು ಬಗೆಯ ಹೂಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ನೇರ ಹಾಗೂ ಪರೋಕ್ಷವಾಗಿ 11 ಲಕ್ಷ ಜನರ ಜೀವನ ಪುಷ್ಪೋದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೆ, ರಾಜ್ಯದಲ್ಲಿ 2.8 ಲಕ್ಷ ಏಕರೆ ಪ್ರದೇಶದಲ್ಲಿ ಕಾಕಡ, ಮಲ್ಲಿಗೆ, ಚಂಡು ಹೂ, ಸಂಪಿಗೆ, ಕನಕಾಂಬರ ಸೇರಿ 40 ಬಗೆಯ ಹೂಗಳನ್ನು ಬೆಳೆಯಲಾಗುತ್ತದೆ. ಇದರ ಮೇಲೆ ಅವಲಂಬಿತರಾಗಿರುವ ಜನರ ಸಂಖ್ಯೆ 52 ಲಕ್ಷಕ್ಕೂ ಹೆಚ್ಚು ಎಂದರು.

    ಕಳೆದ ಕೆಲವು ವರ್ಷಗಳಿಂದ ಚೈನಾದಿಂದ ಆಮದಾಗುತ್ತಿರುವ ಕೃತಕ ಪ್ಲಾಸ್ಟಿಕ್ ಹೂಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು 2019 ಸೇ ಸಾಲಿನಲ್ಲಿ ಈ ಶೇಕಡಾ 92 ರಷ್ಷಕ್ಕೆ ಬಂದು ತಲುಪಿದೆ. 2022 ವೇಳೆಗೆ ಹೂ ಮಾರಾಟಗಾರರು ನಾಮಾವಶೇಷವಾಗಲಿದ್ದಾರೆ. ಹೂಗಳ ಮಾರಾಟ ಬೆಲೆಯಲ್ಲಿ ಶೇಕಡಾ 55 ರಷ್ಟು ಕುಸಿತವಾಗಿದೆ. ಹೂ ಬೆಳೆಯುವ ಪ್ರಮುಖ ರಾಜ್ಯಗಳಾದ ಮಹರಾಷ್ಟ್ರ, ತಮಿಳುನಾಡು, ಕರ್ನಾಟಕ, ಹಿಮಾಚಲ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳ ಹೂ ಬೆಳೆಗಾರರ ಆದಾಯಕ್ಕೆ ಕತ್ತರಿ ಬಿದ್ದಿದ್ದು, ರೈತರುಗಳು ಶೇಕಡಾ 13 ರಿಂದ 14 ರಷ್ಟಿರುವ ಬಡ್ಡಿಯ ಬ್ಯಾಂಕುಗಳ ಸಾಲ ತೀರಿಸಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಹೇಳಿದರು.

    ಪ್ರತಿ ಏಕರೆಗೆ 50 ಲಕ್ಷ ರೂಪಾಯಿ ಬಂಡವಾಳ ಹೂಡುವ ಮೂಲಕ ಪಾಲಿ ಹೌಸ್ ಸೇರಿದಂತೆ ಹಲವಾರು ಉಪಕರಣಗಳ ಖರೀದಿಗೆ ರೈತರು ಮುಂದಾಗಿದ್ದಾರೆ. ಸರಿಯಾದ ಪ್ರಮಾಣದ ಬೆಲೆ ದೊರೆಕದೆ ಇದ್ದಲ್ಲಿ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ರೈತರ ಆದಾಯ ಕುಸಿತದಿಂದಾಗಿ ಮಾಡಿರುವ ಸಾಲ ತೀರಿಸಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಜತೆಗೆ ಪ್ಲಾಸ್ಟಿಕ್ ಬಳಸಿ ತಯಾರಿಸಿರುವ ಕೃತಕ ಹೂಗಳು ಸುಲಭವಾಗಿ ಕೊಳೆಯುವಂತಹವಲ್ಲ.

    ಕಾಲಕ್ರಮೇಣ ಭೂಮಿಗೆ ಹಾಗೂ ನೀರಿಗೆ ಸೇರಿ ಪರಿಸರ ಹಾಳು ಮಾಡಲಾಗುತ್ತಿದೆ. ನೈಸರ್ಗಿಕ ಹೂಗಳಿಂದ ಬರುವ ಪರಿಮಳವನ್ನು ಯಾರೂ ನಕಲು ಮಾಡಲು ಸಾಧ್ಯವಿಲ್ಲ. ಈ ಕೃತಕ ಹೂಗಳಲ್ಲಿ ಆ ಅಂಶಗಳಿಲ್ಲದೆ ಹೂಗಳು ನೀಡುವ ಸಾಂತ್ವಾನ ಹಾಗೂ ಒತ್ತಡ ನಿವಾರಣೆಯ ಪರಿಣಾಮ ಸಿಗುವುದಿಲ್ಲ ಎಂದರು.

    ದೇಶದ ಶೇಕಡಾ 78 ರಷ್ಟು ಭಾಗದ ಜನರು ಈಗಲೂ ಕೃಷಿ ಅವಲಂಬಿತರಾಗಿದ್ದಾರೆ. ರೈತರ ಬಳಿ ಹಣವಿದ್ದಲ್ಲಿ ಅವರು ಬೀಜ, ಗಿಡ, ರಾಸಾಯನಿಕ ಗೊಬ್ಬರ, ಕೊಳ್ಳಲು ಹಾಗೂ ಕಾರ್ಮಿಕರಿಗೆ ಕೂಲಿ ನೀಡಲು, ಯಂತ್ರೋಪಕರಣಗಳನ್ನು ಬಿಕರಿಗಾಗಿ ಹಣ ವ್ಯಯಿಸುತ್ತಾರೆ. ಇದು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಶ್ರೀಕಾಂತ್ ಪ್ರತಿಪಾದಿಸಿದರು.

    ಆದರೆ, ಪ್ರತಿವರ್ಷ ಹಬ್ಬಗಳಲ್ಲಿ, ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಕೃತಕ ಹೂಗಳ ಬಳಕೆ ಹೆಚ್ಚಾಗುತ್ತಿದ್ದು, ನೈಸರ್ಗಿಕ ಹೂಗಳನ್ನು ಕೊಳ್ಳುವರಿಲ್ಲದಂತಾಗಿದೆ. ಇದೇ ರೀತಿಯ ಬಳಕೆ ಹೆಚ್ಚಾದಲ್ಲಿ ನೈಸರ್ಗಿಕ ಹೂಗಳ ಬಳಕೆ ಸಂಪೂರ್ಣ ಕಡಿಮೆಯಾಗಲಿದ್ದು, ಹೂ ಬೆಳೆಗಾರರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.

   ಈ ಹಿನ್ನೆಲೆಯಲ್ಲಿ ರಾಜ್ಯದ ಹಾಗೂ ದೇಶದ ಪ್ರಮುಖ ಹೂ ಬೆಳೆಗಾರರ ಪ್ರಮುಖ ಕೇಂದ್ರವಾಗಿರುವ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಹೂ ಬೆಳೆಗಾರ ರೈತರ ಹಿತಾಸಕ್ತಿ ಕಾಪಾಡಲು ಕೃತಕ ಹೂಗಳ ಬಳಕೆಯನ್ನು ನಿಷೇಧಿಸುವಂತೆ ಸರಕಾರವನ್ನು ವಿನಂತಿಸಿಕೊಳ್ಳುತ್ತಿದ್ದೇವೆ. ಅಲ್ಲದೆ, ಬೆಂಗಳೂರು ನಗರದಲ್ಲಿ ಹೂ ಮಾರಾಟಕ್ಕೆ ಸೂಕ್ತ ಮಾರುಕಟ್ಟೆಯನ್ನೂ ನಿರ್ಮಿಸಬೇಕು ಎಂದು ಶ್ರೀಕಾಂತ್ ಆಗ್ರಹಿಸಿದರು.

    ಕಷ್ಟಪಟ್ಟು ಬೆಳೆದ ಹೂಗಳನ್ನು ರಸ್ತೆಯಲ್ಲಿ ಚೆಲ್ಲುವುದು ನಮಗೆ ತುಂಬಾ ನೋವು ತರುತ್ತದೆ. ಈ ಹೂಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಮೂಲಕ ನಮ್ಮ ಪ್ರತಿಭಟನೆಯನ್ನು ಸಾಂಕೇತಿಕವಾಗಿ ವ್ಯಕ್ತಪಡಿಸುತ್ತಿದ್ದೇವೆ. ರಾಜ್ಯ ಸರಕಾರ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎನ್ನುವ ಆಶಯ ನಮ್ಮದು ಎಂದು ಹೇಳಿದರು. ಲಾಲ್ ಬಾಗ್ ನ ನಾಲ್ಕೂ ದ್ವಾರಗಳಲ್ಲಿ ಜಮಾಯಿಸಿದ್ದ ಹೂ ಬೆಳೆಗಾರರು ತಾವು ಬೆಳೆದ ಹೂಗಳನ್ನು ಜನರಿಗೆ ಉಚಿತವಾಗಿ ನೀಡುವ ಮೂಲಕ ಕೃತಕ ಹೂಗಳನ್ನು ಬಳಸದಂತೆ ಮನವಿ ಮಾಡಿಕೊಂಡರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap