ಚೀನಾ ವಿಶ್ವಾಸಕ್ಕೆ ಅರ್ಹವಲ್ಲ ಎಂದು ಸಾಬೀತಾಗಿದೆ : ಸಿ ಟಿ ರವಿ

ಬೆಂಗಳೂರು

   ಚೀನಾ ಕಾಲು ಕೆರೆದು ಜಗಳ ಮಾಡುತ್ತಿದೆ. ಚೀನಾ ದೇಶ ವಿಶ್ವಾಸಾರ್ಹ ಅಲ್ಲ ಎಂದು ಮತ್ತೆ ಮತ್ತೆ ಸಾಬೀತಾಗಿದೆ ಎಂದು ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯವರ ಸ್ವದೇಶಿ ಮಂತ್ರದ ಅಳವಡಿಕೆಗೆ ನಾವು ಮುಂದಾಗಬೇಕು. ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು. ಪ್ರತಿಯೊಬ್ಬ ಭಾರತೀಯನೂ ಯೋಧನ ರೀತಿ ಯೋಚಿಸಬೇಕು. ಆಗ ಭಾರತೀಯ ಯೋಧರ ಬಲಿದಾನ ಸಾರ್ಥಕವಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ನವರು ಪ್ರಧಾನಿಯವರ ಮೌನದ ಬಗ್ಗೆ ಮಾತಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಅವರೇ ನಾಚಿಕೆ ಪಟ್ಟುಕೊಳ್ಳಬೇಕಾಗಿದೆ. ಇಡೀ ದೇಶ ಒಂದಾಗಿ ಯೋಚಿಸುತ್ತಿರುವಾಗ ಕಾಂಗ್ರೆಸ್ ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತದೆ ಎಂದು ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಈಗ ರಾಜಕೀಯ ಮಾಡಿದರೆ ಹಿಂದೆ ಹಿಂದಿ ಚೀನೀ ಭಾಯಿ ಭಾಯಿ ಎಂದು ಹೇಳಿದ್ದರ ಬಗ್ಗೆಯೂ ಮಾತಾಡಬೇಕಾಗುತ್ತದೆ. ಚೀನಾ ಸೈನ್ಯದಲ್ಲಿ ನಮಗಿಂತ ಬಲ ಇರಬಹುದು, ಆದರೆ ಆತ್ಮ ವಿಶ್ವಾಸದಲ್ಲಿ ಭಾರತ ಅವರಿಗಿಂತ ಬಲಶಾಲಿಯಾಗಿದೆ. ಆತ್ಮವಿಶ್ವಾಸ ಕುಗ್ಗಿಸುವ ಹೇಳಿಕೆಗಳು ದೇಶ ವಿರೋಧಿ ಎಂದು ಸಿ.ಟಿ.ರವಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ