ಬೆಂಗಳೂರು
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮತ್ತೆ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸಲು ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಈ ಸಂಬಂಧ ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಮತ್ತಿತರ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಮುಖ್ಯಮಂತ್ರಿಯವರು ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಯಾವ ಯಾವ ಭಾಗಗಳಲ್ಲಿ ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೋ ಅಂತಹ ಕಡೆ ಮೊದಲು ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಬೇಕು.
ಕಾಳಜಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಅಗತ್ಯ ತುರ್ತು ಸೇವೆಗಳನ್ನು ಕೈಗೊಳ್ಳುವಂತೆ ಸೂಚನೆ ಕೊಟ್ಟರು.
ಮಳೆಯಿಂದಾಗಿ ಎಲ್ಲೆಲ್ಲಿ ಅನಾಹುತ ಸಂಭವಿಸಿದೆಯೋ ಅಂತಹ ಕಡೆ ಅಧಿಕಾರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮಳೆಯಿಂದಾಗಿ ಯಾರಿಗೂ ತೊಂದರೆಯಾಗಬಾರದು. ಎಷ್ಟು ಸಾಧ್ಯವೋ ಅಷ್ಟು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.
ಅಗತ್ಯವಿರುವೆಡೆ ಎನ್ಡಿ ಆರ್‍ಎಮಫ್,ಎಸ್ಡಿಂಆರ್‍ಎ?ಫ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಸಂಘ-ಸಂಸ್ಥೆಗಳ ಜೊತೆ ಕೈಜೋಡಿಸಿ ಸಂತ್ರಸ್ತರಿಗೆ ನೆರವು ಒದಗಿಸಬೇಕು. ಹೆಚ್ಚು ಮಳೆಯಾಗುತ್ತಿರುವ ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಸೂಚನೆ ನೀಡಬೇಕೆಂದು ಹೇಳಿದ್ದಾರೆ.
ಪ್ರವಾಹ ಹೆಚ್ಚಾದಲ್ಲಿ ಸಾರ್ವಜನಿಕರನ್ನು ಬಲವಂತವಾಗಿಯಾದರೂ ತೆರವುಗೊಳಿಸಿ. ಆಸ್ತಿ-ಮನೆ, ಜಾನುವಾರುಗಳ ರಕ್ಷಣೆಗೂ ಆದ್ಯತೆ ನೀಡಬೇಕು. ಹವಾಮಾನ ಇಲಾಖೆ ಅಧಿಕಾರಿಗಳು ಹೆಚ್ಚಿನ ಮಳೆಯಾಗಬಹುದೆಂದು ಸೂಚನೆ ನೀಡಿರುವ ಕಾರಣ ತಗ್ಗುಪ್ರದೇಶಗಳಲ್ಲಿರುವ ಸಾರ್ವಜನಿಕರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕಿಂಚಿತ್ತೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ನಾನೂ ಸಹ ಪ್ರತಿಕ್ಷಣವೂ ಪ್ರವಾಹದ ಮಾಹಿತಿಯನ್ನು ಪಡೆಯುತ್ತಿದ್ದೇನೆ. ಎಲ್ಲೆಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಯಾರಾದರೂ ಅಸಡ್ಡೆ ವಹಿಸಿದರೆ ಸುಮ್ಮನಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
