ಚಿನ್ನಾಭರಣ ಖರೀದಿ ಭರಾಟೆ ಜೋರು

ಚಿತ್ರದುರ್ಗ

      ಅಕ್ಷಯ ತದಿಗೆಯ ದಿನ ಮನೆಗೆ ತರುವ ಸಂಪತ್ತು ಅಕ್ಷಯವಾಗಲಿದೆ ಎಂಬ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಅಕ್ಷಯ ತೃತೀಯ ದಿನ ಹಳದಿ ಲೋಹ ಖರೀದಿಸಲು ಬಹಳಷ್ಟು ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಮಳಿಗೆಗಳಲ್ಲಿ ವೈವಿಧ್ಯಮಯ ಆಭರಣಗಳನ್ನು ಪ್ರದರ್ಶಿಸಿ, ಗ್ರಾಹಕರ ಆಕರ್ಷಣೆಗೆ ಮುಂದಾಗಿದ್ದಾರೆ. ಈ ದಿನ ಮಾಮೂಲಿಗಿಂತ ಹೆಚ್ಚಿನ ವಹಿವಾಟು ನಡೆಯುತ್ತದೆ. ಮದುವೆ, ನಾಮಕರಣ, ನಿಶ್ಚಿತಾರ್ಥ ಮೊದಲಾದ ಶುಭಸಮಾರಂಭಗಳ ಹೆಸರಿನಲ್ಲೂ ಬಹಳಷ್ಟು ಮಂದಿ ಖರೀದಿಸುತ್ತಾರೆ. ಅಕ್ಷಯ ತೃತೀಯ ದಿನ ಪ್ರಯುಕ್ತ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ಒಂದೆರಡು ಗ್ರಾಂ ಚಿನ್ನ ಖರೀದಿಸುವ ರೂಢಿಯೂ ಇದೆ.

       ಇತ್ತ ಅಕ್ಷಯ ತೃತೀಯ ಪ್ರಯುಕ್ತ ಆಭರಣ ಮಳಿಗೆಯವರು ರಿಯಾಯಿತಿ, ಕೊಡುಗೆಗಳನ್ನು ಘೋಷಿಸಿದ್ದು, ಒಡವೆ ಖರೀದಿಗೆ ಬಹಳಷ್ಟು ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಗ್ರಾಹಕರನ್ನು ಆಕರ್ಷಿಸಲು ಬಹಳಷ್ಟು ಅಂಗಡಿಗಳ ಮಳಿಗೆಗಳನ್ನು ಅಲಂಕರಿಸಿ ಸಜ್ಜುಗೊಳಿಸಿದ್ದಾರೆ. ರಿಯಾಯಿತಿ, ಕೊಡುಗೆಗಳ ಫಲಕಗಳನ್ನು ಹಾಕಿದ್ದಾರೆ. ನಗರದ ಬಹುತೇಕ ಆಭರಣ ಮಳಿಗೆಗಳು ಗ್ರಾಹಕರಿಂದ ಇಂದು ಬೆಳಗ್ಗಿನಿಂದಲೇ ಗಿಜಿಗುಡುತ್ತಿದೆ.

       ಚಿನ್ನದ ನಾಣ್ಯ ಖರೀದಿಸಿದರೆ ಮಜೂರಿ ಇಲ್ಲ, ಚಿನ್ನ ಖರೀದಿಗೆ ಬೆಳ್ಳಿ ನಾಣ್ಯ ಉಚಿತ ಕೊಡುಗೆ ಹೀಗೆ ಮೊದಲಾದ ಉಡುಗೊರೆಗಳನ್ನು ಪರಿಚಯಿಸಿದ್ದಾರೆ. ಯಾವ ಅಂಗಡಿಯಲ್ಲಿ ಯಾವ ಕೊಡುಗೆ ಪರಿಚಯಿಸಿದ್ದಾರೆ ಎಂಬುದರ ಮೇಲೆ ಗ್ರಾಹಕರ ಕಣ್ಣುಗಳು ನೆಟ್ಟಿವೆ. ಇದರೊಟ್ಟಿಗೆ ಆಭರಣಗಳನ್ನು ಒಪ್ಪ ಒರಣವಾಗಿ ಇಡುವುದು, ಗ್ರಾಹಕರನ್ನು ತಕ್ಷಣ ಆಕರ್ಷಿಸುವ ಆಭರಣಗಳನ್ನು ಪ್ರದರ್ಶನಕ್ಕೆ ಇಡುವುದು, ಹೆಚ್ಚಿನ ಸಿಬ್ಬಂದಿ ನಿಯೋಜನೆ, ಸಿ.ಸಿ ಟಿವಿ ಕ್ಯಾಮೆರಾ ಸೇರಿದಂತೆ ಹೆಚ್ಚಿನ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡುತ್ತಿರುವುದು ಸಾಮಾನ್ಯವಾಗಿ ಆಭರಣದ ಅಂಗಡಿಗಳಲ್ಲಿ ಕಂಡುಬರುತ್ತಿರುವ ದೃಶ್ಯವಾಗಿದೆ.

      ಇಡೀ ವರ್ಷದಲ್ಲಿ ಯುಗಾದಿ, ದೀಪಾವಳಿ, ವರಮಹಾಲಕ್ಷ್ಮಿ ಆಚರಣೆ ಸೇರಿದಂತೆ ಯಾವುದೇ ಹಬ್ಬಗಳಲ್ಲಿ ಆಗದ ಚಿನ್ನದ ಖರೀದಿ ಈ ಅಕ್ಷಯ ತೃತೀಯ ದಿನದಂದು ಆಗುತ್ತದೆ. ಹೀಗಾಗಿ, ಈ ಒಂದು ದಿನಕ್ಕಾಗಿ ಆಭರಣ ವ್ಯಾಪಾರ ಮಳಿಗೆಗಳ ಮಾಲೀಕರು ಕಾದಿರುತ್ತಾರೆ. ಈ ಅವಕಾಶವನ್ನು ಯಾರು ಕಳೆದುಕೊಳ್ಳುವುದಿಲ್ಲ. ಇಡೀ ವರ್ಷದ ವ್ಯಾಪಾರ ಒಂದೇ ದಿನ ಆದ ಉದಾಹರಣೆಗಳಿವೆ ಎಂದು ಆಭರಣ ಮಳಿಗೆಯ ಮಾಲೀಕರೊಬ್ಬರು ತಿಳಿಸಿದರು.

       ಅಕ್ಷಯ ತೃತೀಯದ ದಿನ ಚಿನ್ನ ಖರೀದಿಸಿದರೆ ಒಳ್ಳೆಯದಾಗುತ್ತದೆ, ಹಲವಾರು ವರ್ಷಗಳಿಂದ ಖರೀದಿಸಿದ್ದೇನೆ. ಈ ವರ್ಷ ಇದೇ ತಿಂಗಳಿನಲ್ಲಿ ಪುತ್ರಿಯ ಮದುವೆ ಇದೆ. ಪುತ್ರಿ, ಅಳಿಯ, ಮನೆಯವರಿಗೆ ಅಕ್ಷಯ ತೃತೀಯದಂದು ಆಭರಣ ಖರೀದಿಸಲು ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿದ್ದೇವೆ. ಈ ದಿನ ಖರೀದಿಸುವುದು ಒಳ್ಳೆಯದುಎಂದು ಗೃಹಿಣಿ ಸುಧಾ ತಿಳಿಸಿದ್ದಾರೆ.

       ಆಭರಣ ಖರೀದಿಯಂತೆಯೇ ಆಸ್ತಿಪಾಸ್ತಿ ಖರೀದಿಯೂ ಸೌಭಾಗ್ಯವೇ ಅಲ್ಲವೇ, ಹಾಗಾಗಿ ಲ್ಯಾಂಡ್ ಟ್ರೇಡರ್ಸ್ ಬಿಲ್ಡರ್ಸ್ ಇದೇ ಅವಕಾಶವನ್ನು ಬಳಸಿಕೊಂಡು ಅಪಾರ್ಟ್‍ಮೆಂಟ್‍ಗಳ ಬುಕಿಂಗ್‍ಗೆ ವಿಶೇಷ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ. ನಗರವಿರಲಿ, ಹಳ್ಳಿ ಇರಲಿ ವಾಹನಗಳು ಎಲ್ಲರಿಗೂ ಅಗತ್ಯವಾಗಿವೆ. ಹಾಗಾಗಿ ಅಕ್ಷಯ ತದಿಗೆಯ ದಿನ ಹೊಸ ವಾಹನ ಖರೀದಿಗೆ ಬುಕಿಂಗ್ ಮಾಡಿ ಹಲವಾರು ಮಂದಿ ಈಗಾಗಲೇ ವಾಹನದ ಜೊತೆಗೆ ಸೆಲ್ಫಿ ತೆಗೆದುಕೊಂಡು ಫೇಸ್‍ಬುಕ್‍ನಲ್ಲಿ , ಇನ್‍ಸ್ಟಾಗ್ರಾಂನಲ್ಲಿ ಅಪ್‍ಡೇಟ್ ಮಾಡಿದ್ದಾರೆ. ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾಮಾನ್ಯವಾಗಿ ದಿನಕ್ಕೆ 80ರಿಂದ 100 ದ್ವಿಚಕ್ರ ವಾಹನಗಳ ನೋಂದಣಿ ಸಾಮಾನ್ಯ. ಆದರೆ ಅಕ್ಷಯ ತೃತೀಯ ದಿನ ಸುಮಾರು 250ಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗುತ್ತಿವೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap