ಅಕ್ಷಯ ತೃತೀಯ ದಿನದಂದು ಚಿನ್ನದ ಬೇಟೆ

ದಾವಣಗೆರೆ:

    ಸಮೃದ್ಧಿಯ ಸಂಕೇತವಾದ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸಿದರೆ, ಸಂಪತ್ತು ವೃದ್ಧಿಯಾಗುತ್ತದೆ. ಹಾಗೂ ಈ ಬಾರಿ ಅಕ್ಷಯ ತೃತೀಯ ಮಂಗಳವಾರ ಬಂದಿರುವ ಕಾರಣಕ್ಕೆ ಇಂದು ಆಭರಣ ಖರೀದಿಸಿದರೆ, ಮಂಗಳ ಹೊತ್ತು ತರುತ್ತದೆ ಎಂಬ ಆಶಾಭಾವನೆಯೊಂದಿಗೆ ಬಂಗಾರದ ಅಂಗಡಿಗಳತ್ತ ಮಹಿಳಯರು ಮುಖ ಮಾಡಿದ್ದರು.

     ನಗರದ ಪ್ರತಿಷ್ಠಿತ ಬಂಗಾರದ ಅಂಗಡಿಗಳಲ್ಲಿ ಹಾಗೂ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಘೋಷಿಸಿದ್ದ ಅಂಗಡಿಗಳಿಗೆ ಜನರು ಬೆಳಗ್ಗೆಯಿಂದಲೇ ಲಗ್ಗೆ ಇಟ್ಟಿದ್ದರು. ಹೀಗಾಗಿ ಚಿನ್ನಾಭರಣದ ಅಂಗಡಿಗಳಲ್ಲಿ ಜನಜಂಗುಳಿ ರಾತ್ರಿಯಾದರೂ ಕಡಿಮೆ ಆಗಿರಲಿಲ್ಲ.

     ಚಿನ್ನ ಖರೀದಿ ಮಾಡಿ, ಏನೋ ಗೆದ್ದಂತೆ ಸಂಭ್ರಮಿಸುತ್ತಿದ್ದ ಯುವತಿ ದಿಶಾ, ಅಕ್ಷಯ ತೃತೀಯ ಉತ್ತಮ ದಿನವಾಗಿದೆ. ಈ ದಿನದಂದು ಚಿನ್ನ ಖರೀದಿ ಮಾಡಿದರೆ ಸಂಪತ್ತು ವೃದ್ಧಿಸುತ್ತದೆ ಎಂಬ ಪ್ರತೀತಿ ಇದೆ. ಆದ್ದರಿಂದ ಚಿನ್ನ ಖರೀದಿ ಮಾಡಿದ್ದೇವೆಂದು ಹೇಳಿದರು. ಈ ದಿನ ಕೈಗೊಳ್ಳುವ ಎಲ್ಲಾ ಶುಭ ಕಾರ್ಯಗಳಿಗೆ ಯಶಸ್ಸು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇದು ಜೀವನದ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಶುಭ ಕಾರ್ಯಗಳನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸಲಿದೆ ಎನ್ನುತ್ತಾರೆ ಹಿರಿಯ ಗೃಹಿಣಿ ಲಕ್ಷದೇವಿ.

       ಇಂದಿನ ದುಬಾರಿ ಕಾಲದಲ್ಲಿ ಅಕ್ಷಯ ತೃತೀಯ ದಿನದಂದು ಕನಿಷ್ಟ ತಮಗಾದರೂ ಚಿನ್ನ ಖರೀದಿಸಬೇಕು ಎಂಬುವುದು ಬಹುತೇಕರ ಬಯಕೆಯಾಗಿದೆ. ಆದ್ದರಿಂದ ಬಂಗಾರದ ಖರೀದಿಯಲ್ಲಿ ಜನ ಆಸಕ್ತಿಯಿಂದ ತೊಡಗಿದ್ದರು.ಈ ಬಾರಿ ಅಕ್ಷಯ ತೃತೀಯ ದಿನದಂದು ಹಿಂದಿನ ವ್ಯಾಪಾರದಂತೆ ವಹಿವಾಟು ಆಗುತ್ತಿಲ್ಲ. ಕೆಲವು ದೊಡ್ಡ ಮತ್ತು ಪ್ರತಿಷ್ಠಿತವಾಗಿರುವ ಬ್ರಾಂಡೆಡ್ ಅಂಗಡಿಗಳತ್ತ ಜನರು ಹೆಚ್ಚು ಆಕರ್ಷಣೆ ಒಳಗಾಗಿದ್ದಾರೆ. ಆದ್ದರಿಂದ ಸಣ್ಣ-ಪುಟ್ಟ ಅಂಗಡಿಗಳಿಗೆ ಅಷ್ಟೇನೂ ಹೇಳಿಕೊಳ್ಳುವಂತಹ ವಹಿವಾಟು ನಡೆಯುತ್ತಿಲ್ಲ ಎಂಬುದು ಮಧ್ಯಮ ವರ್ಗ ಬಂಗಾರ ವ್ಯಾಪಾರಿಯೊಬ್ಬರ ಅಳಲು.

     ಮಧ್ಯಮ ವರ್ಗದ ಜನರು ಅಪರೂಪಕ್ಕೆ ಚಿನ್ನ ಖರೀದಿ ಮಾಡುತ್ತಾರೆ. ಅದರಲ್ಲೂ ಇಂಥ ದಿನದಂದು ತಾವು ಕೊಳ್ಳುವ ಚಿನ್ನಾ ಚೆನ್ನಾಗಿರಲಿ ಎಂದು ಬಯಸುತ್ತಾರೆ. ಹೀಗಾಗಿ, ಬ್ರಾಂಡೆಡ್ ಅಂಗಡಿಗಳಿಗೆ ಹೆಚ್ಚಾಗಿ ಹೋಗುತ್ತಿದ್ದಾರೆ. ಈ ಅಂಗಡಿಗಳ ಮೇಲೆ ಜನರಿಗೆ ಹೆಚ್ಚಿನ ವಿಶ್ವಾಸ ಮೂಡಿದೆ. ಈ ಪ್ರತಿಷ್ಠಿತ ಅಂಗಡಿಗಳಿಗೆ ಹೋಗಿ ಚಿನ್ನ ಖರೀದಿ ಮಾಡಿದ್ದೇವೆ ಎನ್ನುತ್ತಾರೆ ತೆರಿಗೆ ಸಲಹೆಗಾರ ಕೆ.ಸಿ. ನಾಗರಾಜ್.

      ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ, ಬಾಳು ಬಂಗಾರವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಜನಮರಳೋ ಜಾತ್ರೆ ಮರಳೋ ಎಂಬಂತೆ, ಜನರು ಮಂಗಳವಾರ ಚಿನ್ನಾಭರಣದ ಅಂಗಡಿಗಳನ್ನು ಮುತ್ತಿಕೊಂಡಂದಂತು ಸುಳ್ಳಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap