ಕೋಟೆನಗರಿಯ ಗುಡ್ಡಗಳಿಗೆ ಮಂಜಿನ ಬೇಲಿ..!

ಚಿತ್ರದುರ್ಗ

    ಎಲ್ಲೆಂದರಲ್ಲಿ ಆವರಿಸಿ ಲಾಗ ಹೊಡೆಯುವ, ಒಬ್ಬರಿಗೆ ಮತ್ತೊಬ್ಬರು ಕಾಣದಂತೆ ತೆರೆ ಎಳೆದು ತನಗೇನೂ ಗೊತ್ತೇ ಇಲ್ಲದಂತೆ ಭರಭರನೆ ಸಾಗುವ ಮಂಜಿನ ಲಾಸ್ಯದ ಚಿತ್ರಣ ಇದೀಗ ಮುಂಜಾನೆಯ ಚುಮುಚುಮು ಚಳಿಯಲ್ಲಿ ಚಿತ್ರದುರ್ಗದ ಬೆಟ್ಟದತ್ತ ಸಾಗುವ ವಾಯುವಿಹಾರಿಗಳ ಕಣ್ಣಿಗೆ ಕಟ್ಟುತ್ತಿದೆ.

     ಪ್ರತಿದಿನವೂ ಮುಂಜಾನೆ ಬೆಟ್ಟದ ಪಾದದಿಂದ ಮೆಟ್ಟಿಲನ್ನೇರಿ ಏದುರುಸಿರು ಬಿಡುತ್ತಾ ಬೆಟ್ಟದ ಮೇಲೆ ಸಾಗಿ ತಲುಪುವ ಮಂದಿಗೆ ತಂಗಾಳಿ ಮುದ ನೀಡುತ್ತದೆ. ಈಗ ಚಳಿಗಾಲ. ಹೀಗಾಗಿ ಮುಂಜಾನೆಯ ನಸು ಬೆಳಕಿನಲ್ಲಿ ಬೆಟ್ಟದಲ್ಲಿ ಅಡ್ಡಾಡುವವರಿಗೆ ಸ್ವರ್ಗಾನುಭವ ಆಗದೇ ಇರದು. ಬೀಸಿ ಬರುವ ತಂಗಾಳಿಗೆ ಮೈಕೊಟ್ಟು ನಡೆಯುವುದೇ ಸುಂದರ. ಇಡೀ ಬೆಟ್ಟ ಸಹಿತ ಮಂಜಂತೂ ಕಣ್ಣಿಗೆ ಹಬ್ಬ. ಮುಂಜಾನೆಯ ಕುಳಿರ್ ಗಾಳಿ, ಮೈಕೊರೆವ ಚಳಿಯ ನಡುವೆ ಹೆಜ್ಜೆ ಹಾಕುತ್ತಾ ಬರುವ ಭಕ್ತರು… ಅದರಾಚೆಗೆ ಮುಂಜಾನೆಯಲ್ಲಿ ನಗರದಿಂದ ಮೆಟ್ಟಿಲೇರಿ ಬರುವ ವಾಯುವಿಹಾರಿಗಳು… ಎಲ್ಲ ನೋಟಗಳು ಹೊಸದೊಂದು ಅನುಭವ ನೀಡುತ್ತದೆ.

     ಒಂದೊಂದು ಕಾಲಕ್ಕೂ ಬೆಟ್ಟದಲ್ಲಿ ಸಿಗುವ ನೋಟ ಮತ್ತು ವಾತಾವರಣ ವಿಭಿನ್ನವಾಗಿರುತ್ತದೆ. ಒಂದು ದಿನ ಇಡೀ ಬೆಟ್ಟಕ್ಕೇ ಮಂಜಿನ ತೆರೆ ಎಳೆದಿದ್ದರೆ, ಮತ್ತೊಂದು ದಿನ ಎಲ್ಲವೂ ತಿಳಿಗೊಂಡು ಶುಭ್ರ ವಾತಾವರಣ ಸೃಷ್ಟಿಯಾಗಿರುತ್ತದೆ. ಅದರಲ್ಲೂ ಮುಂಜಾನೆಯಲ್ಲಿ ಜಿಟಿ ಜಿಟಿ ಮಳೆಯಲ್ಲಿ ಹೆಜ್ಜೆ ಹಾಕುವಾಗ ಸಿಗುವ ಆನಂದವನ್ನು ವರ್ಣಿಸಲೇ ಆಗದು.ಮೊನ್ನೆಯವರೆಗೂ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ಇಡೀ ಬೆಟ್ಟ ಕಡು ಹಸಿರಿನ ಹಚ್ಚಡವನ್ನೊದ್ದು ನಳನಳಿಸುತ್ತಿದ್ದರೆ, ಮಂಜಿನ ಪರದೆಯಲ್ಲಿ ಅಡಗಿದ ಮರಗಳು ಆಗೊಮ್ಮೆ ಈಗೊಮ್ಮೆ ಪರದೆ ಸರಿಸಿ ಇಣುಕಿ ತುಂಟ ನೋಟ ಬೀರುತ್ತವೆ.

ನಗರಕ್ಕೂ ಬೆಟ್ಟಕ್ಕೂ ನಿರ್ಮಾಣವಾಗುವ ಮಂಜಿನ ಬೇಲಿ

      ಗಿಡ ಮರಗಳ ಮೇಲೆಲ್ಲಾ ಹರಡಿ ನಿಂತ ಮಂಜು ಹನಿಗಳು ಪಟಪಟನೆ ತೊಟ್ಟಿಕ್ಕುತ್ತಿದ್ದರೆ ಮಜವೋ ಮಜಾ. ಒಮ್ಮೊಮ್ಮೆ ದಟ್ಟಮಂಜು ಇಡೀ ನಗರ ಮತ್ತು ಬೆಟ್ಟದ ಮಧ್ಯೆ ಮಂಜಿನ ಬೇಲಿ ನಿರ್ಮಿಸಿ ಅದರಾಚೆಗೆ ಮಂಜಿನ ಸಾಗರ ನಿರ್ಮಿಸಿ ನಮ್ಮನ್ನು ತಬ್ಬಿಬ್ಬು ಮಾಡಿ ಬಿಡುತ್ತದೆ. ಒಮ್ಮೊಮ್ಮೆ ರವಿಯ ನೋಟಕ್ಕೆ ಹೆದರಿ ಕರಗಿ ನೀರಾಗಿ ಬಿಡುತ್ತದೆ. ಆಗೆಲ್ಲ ಬೆಟ್ಟದ ಮೇಲಿಂದ ನಿಂತು ನೋಡಿದರೆ ಇಡೀ ನಗರ ಆಗಷ್ಟೆ ಮಿಂದೆದ್ದಂತೆ ಭಾಸವಾಗುತ್ತದೆ.ಮುಂಜಾನೆಯಲ್ಲಿ ಬೆಟ್ಟದ ಪಾದದಿಂದ ಒಂದೊಂದೇ ಮೆಟ್ಟಿಲೇರುತ್ತಾ ಸಾಗುತ್ತಾ ಮೇಲು ಕೋಟೆಯನ್ನು ತಲುಪುತ್ತಿದ್ದಂತೆಯೇ ಅದೊಂದು ರೀತಿಯ ಸುಖಾನುಭವ. ಅಲ್ಲಿ ತನಕದ ಆಯಾಸವನ್ನೆಲ್ಲ ತಂಗಾಳಿ ಹೊಡೆದೋಡಿಸಿಬಿಡುತ್ತದೆ.

ಮುದ ನೀಡುವ ನೋಟ

    ಮಂಜು ಆವರಿಸಿದ ದಿನಗಳಲ್ಲಿ ನಗರದ ಬೀದಿ ದೀಪಗಳೆಲ್ಲವೂ ಮಬ್ಬಾಗಿ ಕಂಡರೆ, ಉಳಿದ ದಿನಗಳಲ್ಲಿ ಪಿಳಿಪಿಳಿ ಹೊಳೆಯುತ್ತವೆ. ನಗರದ ಹಲವೆಡೆಯ ರಸ್ತೆಗಳಲ್ಲಿ ಮಂದ ದೀಪದೊಂದಿಗೆ ಮಂಜನ್ನು ಸೀಳಿ ಬರುವ ವಾಹನಗಳ ನೋಟ ಸೊಗಸಾಗಿರುತ್ತದೆ. ಹಾಗೆಯೇ ಸೂರ್ಯೋದಯದ ಹೊತ್ತಿಗೆ ತನ್ನ ಮೇಲೆ ಬೀಳುವ ಸೂರ್ಯರಶ್ಮಿಯಲ್ಲಿ ಬಗೆಬಗೆಯ ಚೆಲುವು ಪ್ರದರ್ಶಿಸುತ್ತಾ ಪ್ರಖರತೆ ಹೆಚ್ಚಾಗುತ್ತಿದ್ದಂತೆಯೇ ಪರದೆ ಕಳಚಿ ಮಾಯವಾಗಿ ಬಿಡುವ ಮಂಜಿನ ಆಟ ಮನಸ್ಸಿಗೆ ಮುದ ನೀಡುತ್ತದೆ.

ನಿದ್ದೆ ಬದಿಗೊತ್ತಿ ಬಂದ್ರೆ ಮಂಜಿನಾಟ

     ಇಷ್ಟಕ್ಕೂ ಮಂಜಿನಾಟವನ್ನು ನೋಡಬೇಕಾದರೆ ಮುಂಜಾನೆಯ ಮಬ್ಬು ಬೆಳಕಿನಲ್ಲಿ ತೆರಳಬೇಕು. ಅದು ಎಲ್ಲರಿಗೂ ಸಾಧ್ಯವಿಲ್ಲ. ಏಕೆಂದರೆ ಬೆಳಗ್ಗಿನ ಚಳಿ ಹಾಸಿಗೆಯಿಂದ ಮೇಲೇಳಲು ಬಿಡದೆ ಕಂಬಳಿ ಹೊದ್ದು ಮಲಗುವಂತೆ ಪ್ರೇರೇಪಿಸುತ್ತದೆ. ಹೀಗಾಗಿ ಹೆಚ್ಚಿನವರು ಬೆಟ್ಟದ ಮುಂಜಾನೆಯ ಸುಂದರ ನೋಟ ಮತ್ತು ಆಹ್ಲಾದಕರ ವಾತಾವರಣದಿಂದ ವಂಚಿತರಾಗುತ್ತಾರೆ. ಆದರೆ ಸವಿನಿದ್ದೆಯನ್ನು ಬದಿಗೊತ್ತಿ ಮೆಟ್ಟಿಲೇರಿ ಬರುವ ವಾಯುವಿಹಾರಿಗಳಿಗೆ ಮಾತ್ರ ಪ್ರತಿದಿನವೂ ಇಲ್ಲಿ ಹೊಸ ಹೊಸ ಅನುಭವ ಸಿಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link