ದುರ್ಗದ ಡಿಸಿ ಕಚೇರಿ ಕಟ್ಟಡಕ್ಕೆ 150ರ ಸಂಭ್ರಮ

ಚಿತ್ರದುರ್ಗ  :
   ಏಳು ಸುತ್ತಿನ ಕೋಟೆಯ ದುರ್ಗ, ವೀರ ಮಹಿಳೆ ಓಬವ್ವ ನಾಡು, ಬತೇರಿಗಳ ಬೀಡು ಹೀಗೆ ಹತ್ತು ಹಲವು ಅನ್ವರ್ಥ ನಾಮಗಳಿಂದ ಬಣ್ಣಿಸಲ್ಪಡುವ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಕ್ಕೆ ಇದೀಗ 150 ವರ್ಷಗಳ ಸಂಭ್ರಮ. 1869 ನೇ ವರ್ಷದಲ್ಲಿ ಕಟ್ಟಲ್ಪಟ್ಟ ಈ ಕಟ್ಟಡ 150 ವಸಂತಗಳನ್ನು ಕಳೆದರೂ ಇಂದಿಗೂ ಸುಸ್ಥಿತಿಯಲ್ಲಿದೆ ಅಲ್ಲದೆ ಗಟ್ಟಿಮುಟ್ಟಾಗಿಯೂ ಇದೆ.  ತನ್ನ ಅಂದ ಚೆಂದದಿಂದ ಕಟ್ಟಡ ಈಗಲೂ ಜನಾಕರ್ಷಣೆಯ ಕೇಂದ್ರವಾಗಿದೆ.
     ಹಲವಾರು ಆಡಳಿತದ ಮಜಲುಗಳನ್ನು ಕಂಡಿರುವ ಈ ಕಟ್ಟಡದಲ್ಲಿ ಸದ್ಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ನೆಲಮಹಡಿಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ, ಭೂದಾಖಲೆಗಳ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಂಚೆ ಕಚೇರಿ ಸೇರಿದಂತೆ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.  ಮೊದಲನೆ ಮಹಡಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಕಚೇರಿ, ಚುನಾವಣಾ ವಿಭಾಗ, ಕಂದಾಯ ಇಲಾಖೆ ಸಿಬ್ಬಂದಿ ವಿಭಾಗ, ಸಣ್ಣಉಳಿತಾಯ ಇಲಾಖೆ, ಮುಜರಾಯಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಎನ್‍ಐಸಿ ಸೇರಿದಂತೆ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.  ಈ ಕಟ್ಟಡಕ್ಕೆ ಹೊಂದಿಕೊಂಡಂತೆ, ನಂತರದ ದಿನಗಳಲ್ಲಿ ವಿಸ್ತರಿಸಲಾದ ಕಟ್ಟಡದ ಮೇಲ್ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕೊಠಡಿ ಹಾಗೂ ನೆಲಮಹಡಿಯಲ್ಲಿ ಸಭಾಂಗಣ ಇದೆ.
      ಕಟ್ಟಡದಲ್ಲಿನ ಕೊಠಡಿಗಳು ಸಾಕಷ್ಟು ವಿಶಾಲವಾಗಿದ್ದು, ಮೇಲ್ಛಾವಣಿ ಭದ್ರವಾಗಿದೆ.  ಕಿಟಕಿ, ಬಾಗಿಲುಗಳು ಕೂಡ ಈಗಲೂ ಸುಸ್ಥಿತಿಯಲ್ಲಿದ್ದು ಬಳಕೆಯಲ್ಲಿವೆ.  ಲೋಕೋಪಯೋಗಿ ಇಲಾಖೆಯ ಮೂಲಗಳ ಪ್ರಕಾರ ಈ ಕಟ್ಟಡ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಭರಿಸಿದ ವೆಚ್ಚ ಕೇವಲ 1. 42 ಲಕ್ಷ ರೂ. ಮಾತ್ರ.  
       ಕಟ್ಟಡದಲ್ಲಿ ಹಲವು ವಿಶಾಲ ಹಾಗೂ ಎತ್ತರದ ಕೊಠಡಿಗಳಿದ್ದು, ಗಾಳಿ ಮತ್ತು ಬೆಳಕಿನ ಕೊರತೆಯಾಗದಂತೆ ನಿರ್ಮಿಸಿರುವ ಕಿಟಕಿಗಳು, ಕೊಠಡಿಯಿಂದ ಕೊಠಡಿಗೆ ತೆರಳಲು ಉತ್ತಮ ಸಂಪರ್ಕ ವ್ಯವಸ್ಥೆ, ಬೃಹತ್ ಕಂಬಗಳು, ನಾಜೂಕಾಗಿ ವ್ಯವಸ್ಥಿತವಾಗಿ ಹಾಕಲಾಗಿರುವ ಗಟ್ಟಿಮುಟ್ಟಾದ ಮೇಲ್ಛಾವಣಿ ಕಟ್ಟಡದ ವಾಸ್ತುಶಿಲ್ಪಿಯ ಜಾಣ್ಮೆಗೆ ಸಾಕ್ಷಿಯಾಗಿವೆ. 
 
      ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು, ಸುಗಮ ಆಡಳಿತ ಇನ್ನಿತರ ಸದುದ್ದೇಶದಿಂದ ಕಟ್ಟಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದರೂ, ಕಟ್ಟಡದ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.ಆಧುನಿಕ ಕಾಲದ ಈ ದಿನಗಳಲ್ಲಿ ನಿರ್ಮಿಸಲಾಗುವ ಅನೇಕ ಕಟ್ಟಡಗಳು ಕೆಲವೇ ಕೆಲವು ವರ್ಷಗಳಲ್ಲೇ ಶಿಥಿಲಗೊಂಡು, ಕುಸಿಯುವುದು ಸಾಮಾನ್ಯ ಸಂಗತಿಯಂತಾಗಿದೆ.  ಹೀಗಾಗಿ 150 ವರ್ಷಗಳ ಹಿಂದೆ ಕಟ್ಟಲಾದ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ಈಗಲೂ ಸುಸ್ಥಿತಿ ಹಾಗೂ ಗಟ್ಟಿಮುಟ್ಟಾಗಿರುವುದನ್ನು ನೋಡಿದರೆ, ಕಟ್ಟಡ ನಿರ್ಮಾಣದ ಗುಣಮಟ್ಟ ಎಂಥಾದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.  ಈ ಕಟ್ಟಡ ಸದ್ಯ 150 ವರ್ಷಗಳ ಸಂಭ್ರಮ ಆಚರಿಸುತ್ತಿದ್ದು, ಎಂದಿನಂತೆ ಜನರ ಸೇವೆಯಲ್ಲಿ ಮುಂದುವರೆದಿದೆ.
      ಕಟ್ಟಡ ನಿರ್ಮಾಣದ ಇತಿಹಾಸ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಇತಿಹಾಸದ ಪುಟಗಳಲ್ಲಿ ದಾಖಲಾಗಿರುವಂತೆ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್ (1799-1868) ರ ಅಧಿಕಾರಾವಧಿಯಲ್ಲಿ ಮೈಸೂರು ರಾಜ್ಯವು ಸುಗಮ ಆಡಳಿತದ ದೃಷ್ಟಿಯಿಂದ 6 ಫೌಜ್‍ದಾರ್‍ಗಳಾಗಿ ಹಾಗೂ 101 ತಾಲ್ಲೂಕುಗಳಾಗಿ ವಿಂಗಡಣೆ ಮಾಡಲಾಗಿತ್ತು.  ಬೆಂಗಳೂರು ಹಾಗೂ ಮದ್ದಗಿರಿ (ಈಗಿನ ಮಧುಗಿರಿ) ಜಿಲ್ಲೆಗಳ ವ್ಯಾಪ್ತಿಯಲ್ಲಿ 27 ತಾಲ್ಲೂಕುಗಳು, ಚಿತಲ್‍ಡ್ರುಗ್ (ಈಗಿನ ಚಿತ್ರದುರ್ಗ) ವ್ಯಾಪ್ತಿಗೆ 13 ತಾಲ್ಲೂಕುಗಳು, ಅಷ್ಟಗ್ರಾಮ ವ್ಯಾಪ್ತಿಗೆ 25, ಮಂಜರಾಬಾದ್-11 ಹಾಗೂ ನಗರ್ ವ್ಯಾಪ್ತಿಗೆ 25 ತಾಲ್ಲೂಕುಗಳು ಸೇರಿದ್ದವು. 
    1834 ರಲ್ಲಿ ಈ 06 ಫೌಜ್‍ದಾರ್‍ಗಳನ್ನು 04 ವಿಭಾಗಗಳಾಗಿ ಅಂದರೆ ಬೆಂಗಳೂರು, ನಗರ್, ಚಿತಲ್‍ಡ್ರುಗ್ ಹಾಗೂ ಅಷ್ಠಗ್ರಾಮ ವಿಭಾಗಗಳಾಗಿ ಮರು ವಿಂಗಡಣೆ ಮಾಡಲಾಯಿತು.  ತುಮಕೂರು ಜಿಲ್ಲೆ ಮತ್ತು ಮದ್ದಗಿರಿ (ಈಗಿನ ಮಧುಗಿರಿ) ಫೌಜ್‍ದಾರ್‍ಗಳನ್ನು ಸೇರಿಸಿ ಚಿತಲ್‍ಡ್ರುಗ್ ವಿಭಾಗವಾಗಿ ಮಾಡಲ್ಪಟ್ಟಿತು, ಅಲ್ಲದೆ ತುಮಕೂರನ್ನು ಕೇಂದ್ರಸ್ಥಾನವನ್ನಾಗಿ ಮಾಡಲಾಯಿತು. ಪ್ರತಿ ವಿಭಾಗಕ್ಕೂ ಯೂರೋಪಿಯನ್ ಸೂಪರಿಂಟೆಂಡೆಂಟ್‍ಗಳನ್ನು ನೇಮಕ ಮಾಡಿ, ರೆವಿನ್ಯೂ ಮತ್ತು ಜುಡಿಷಿಯನ್ ಅಧಿಕಾರ ನೀಡಲಾಯಿತು.  
     ನಂತರದ ವರ್ಷಗಳಲ್ಲಿ 1862 ರಲ್ಲಿ ಲಿವಿನ್ ಬೆಂಥೆಮ್ ಬೋರಿಂಗ್ ಅವರನ್ನು ಮೈಸೂರು ಕಮಿಷನರ್ ಆಗಿ ಬ್ರಿಟೀಷ್ ಸರ್ಕಾರ ನೇಮಕ ಮಾಡಿತು.  ಇವರು ಆಡಳಿತದ ದೃಷ್ಟಿಯಿಂದ ಮೈಸೂರು ರಾಜ್ಯವನ್ನು 8 ಜಿಲ್ಲೆಗಳಾಗಿ ವಿಂಗಡಣೆ ಮಾಡಿದರು, ಇದರಲ್ಲಿ ಚಿತಲ್‍ಡ್ರುಗ್ (ಈಗಿನ ಚಿತ್ರದುರ್ಗ) ಸಹ ಒಂದು.  ಈ 08 ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಪ್ರತಿ ವಿಭಾಗಕ್ಕೂ ಒಬ್ಬರು ಸೂಪರಿಂಟೆಂಡೆಂಟ್ ಮತ್ತು ಜಿಲ್ಲೆಗಳಿಗೆ ಡೆಪ್ಯುಟಿ ಸೂಪರಿಂಟೆಂಡೆಂಟ್‍ಗಳನ್ನು ನೇಮಕ ಮಾಡಲಾಯಿತು.  ನಂತರದಲ್ಲಿ ಇಡೀ ರಾಜ್ಯಕ್ಕೆ ಒಬ್ಬರೇ ಚೀಫ್ ಕಮಿಷನರ್ ರನ್ನು ಮತ್ತು ಪ್ರತಿ ಜಿಲ್ಲೆಗೆ ಡೆಪ್ಯೂಟಿ ಕಮಿಷನರ್‍ಗಳನ್ನು ನೇಮಕ ಮಾಡಲಾಯಿತು. 
 
     ಈ ಕಾರಣಕ್ಕಾಗಿಯೇ ಇಂದಿಗೂ ಕರ್ನಾಟಕದಲ್ಲಿ ಜಿಲ್ಲಾಧಿಕಾರಿಗಳನ್ನು ಇಂಗ್ಲೀಷ್‍ನಲ್ಲಿ ಡೆಪ್ಯೂಟಿ ಕಮಿಷನರ್ ಎಂದೇ ಕರೆಯಲಾಗುತ್ತದೆ.  ಡಿಸಿ ಅವರ ಅಡಿಯಲ್ಲಿ ಉಪವಿಭಾಗಗಳಿಗೆ ಅಸಿಸ್ಟೆಂಟ್ ಕಮಿಷನರ್ (ಎಸಿ ಅಥವಾ ಉಪವಿಭಾಗಾಧಿಕಾರಿ) ಮತ್ತು ತಾಲ್ಲೂಕುಗಳಿಗೆ ಅಮಲ್ದಾರ್‍ಗಳನ್ನು (ಈಗಿನ ತಹಸಿಲ್ದಾರ್) ನೇಮಕ ಮಾಡಲಾಯಿತು.  ಈ ಸಂದರ್ಭದ ವರ್ಷದಲ್ಲಿ 1869 ರಲ್ಲಿ ಚಿತಲ್‍ಡ್ರುಗ್ ಅಂದರೆ ಈಗಿನ ಚಿತ್ರದುರ್ಗದಲ್ಲಿ ಆಗ ಡೆಪ್ಯೂಟಿ ಕಮಿಷನರ್ ಕಚೇರಿ ಕಟ್ಟಡವನ್ನು ನಿರ್ಮಿಸಲಾಯಿತು.  ಕಟ್ಟಡದ ನೆಲಮಹಡಿಯ ಪ್ರವೇಶದ್ವಾರದ ಎದುರಿನ ಗೋಡೆಯ ಮೇಲೆ ಕಟ್ಟಡ ಕಟ್ಟುವಾಗ ಅಳವಡಿಸಿದ್ದ ‘1869’ ಎಂಬ ಫಲಕವನ್ನು ಈಗಲೂ ಕಾಣಬಹುದಾಗಿದೆ.  ಹೀಗಾಗಿ ಕಟ್ಟಡಕ್ಕೆ 2019 ಕ್ಕೆ 150 ವರ್ಷಗಳು ಸಂದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap