ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿ

0
11

ಚಿತ್ರದುರ್ಗ:

      ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿರುವುದರಿಂದ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಬೇಕೆಂದು ಪಾರ್ಲಿಮೆಂಟ್ ಚುನಾವಣೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರವಿಕುಮಾರ್ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಕರೆ ನೀಡಿದರು.

        ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಗೊಂಡ ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಂಪ್ಯೂಟರ್, ಮೊಬೈಲ್ ಫೋನ್‍ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದು, ರಾಜೀವ್‍ಗಾಂಧಿ. ನಾಲ್ಕುವರೆ ವರ್ಷಗಳ ಕಾಲ ಶವನ್ನಾಳಿದ ಬಿಜೆಪಿ.ಜಾತಿ, ಧರ್ಮಗಳ ನಡುವೆ ಘರ್ಷಣೆಯುಂಟು ಮಾಡುವುದನ್ನ ಬಿಟ್ಟರೆ ಬೇರೆ ಯಾವ ಅಭಿವೃದ್ದಿಯೂ ಆಗಿಲ್ಲ. ಕಾಂಗ್ರೆಸ್ ವಿರುದ್ದ ಅಪ್ರಚಾರ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಹಾಗಾಗಿ ಕಾರ್ಯಕರ್ತರು ಮತ್ತು ಮುಖಂಡರುಗಳು ಎಚ್ಚೆತ್ತುಕೊಂಡು ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನವರನ್ನು ಗೆಲ್ಲಿಸಬೇಕು ಎಂದು ವಿನಂತಿಸಿದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡುತ್ತ ಬೂತ್‍ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ತಮ್ಮ ಬೂತ್‍ಗಳನ್ನು ಶಕ್ತಿಶಾಲಿಯನ್ನಾಗಿಸಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನವರನ್ನು ಗೆಲ್ಲಿಸುವ ಮೂಲಕ ರಾಹುಲ್‍ಗಾಂಧಿ ಹಾಗೂ ಸೋನಿಯಾಗಾಂಧಿರವರ ಕೈಬಲಪಡಿಸಬೇಕು ಎಂದು ತಿಳಿಸಿದರು.

       ಎಪ್ಪತ್ತು ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್‍ನವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿರುವ ಕೋಮುವಾದಿ ಬಿಜೆಪಿ.ಯವರು ನಾಲ್ಕುವರೆ ವರ್ಷದಲ್ಲಿ ಅಡಿಯಿಂದ ಹಿಡಿದು ಮುಡಿಯವರೆಗೆ ಸುಳ್ಳು ಹೇಳಿದ್ದನ್ನು ಬಿಟ್ಟರೆ ಇನ್ನೇನು ಮಾಡಿಲ್ಲ. ಯೋಧರ ಹೆಣಗಳ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿ.ಸಂವಿಧಾನವನ್ನು ಬದಲಾವಣೆ ಮಾಡಲು ಬಿಡಬಾರದೆಂದರೆ ಚುನಾವಣೆಯಲ್ಲಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದೊಂದು ಉಳಿದಿರುವ ಮಾರ್ಗ ಅದಕ್ಕಾಗಿ ಬೂತ್‍ಕಮಿಟಿಯಲ್ಲಿ ಪ್ರತಿ ಮನೆ ಮನೆಗೆ ಹೋಗಿ ಕಾಂಗ್ರೆಸ್ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದರು.

        ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ ಮಾತನಾಡಿ ಬರೀ ಅಧಿಕಾರಕ್ಕಾಗಿ ಹಪಹಪಿಸಿದರೆ ಪಕ್ಷಕ್ಕೆ ಯಾವ ಲಾಭವೂ ಇಲ್ಲ. ಚುನಾವಣೆಗೆ ಇನ್ನು ಕೇವಲ ಮೂವತ್ತು ದಿನಗಳ ಕಾಲಾವಕಾಶವಿರುವುದರಿಂದ ಬೂತ್ ಕಮಿಟಿಯಲ್ಲಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಬಿಜೆಪಿ.ಯ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ನಿಷ್ಟೆಯಿಂದ ಮಾಡಬೇಕು ಎಂದು ವಿನಂತಿಸಿದರು.

        ಕಾಂಗ್ರೆಸ್ ಪಕ್ಷದ ಸಾಧನೆಗಳುಳ್ಳ ಕೈಪಿಡಿಗಳನ್ನು ಬೂತ್‍ಮಟ್ಟದಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಜನತೆಗೆ ಮುಟ್ಟಿಸಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪನವರನ್ನು ಗೆಲ್ಲಿಸಿ ಬೂತ್‍ಮಟ್ಟದಲ್ಲಿ ತಳಮಟ್ಟದಿಂದ ಕೆಲಸ ಮಾಡದವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

       ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ಜಯಣ್ಣ ಮಾತನಾಡುತ್ತ ಪಾರ್ಲಿಮೆಂಟ್ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುತ್ತಿರುವುದರಿಂದ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಲು ಜಾತ್ಯಾತೀತ ಪಕ್ಷಗಳ ಆಂದೋಲನವಾಗಬೇಕಿದೆ. ಎಪ್ಪತ್ತು ವರ್ಷಗಳಿಂದಲೂ ಭಾರತದಲ್ಲಿ ಎಲ್ಲಾ ಕೋಮಿನವರು ಶಾಂತಿಯಿಂದ ಬದುಕುತ್ತಿರುವುದನ್ನು ಕಂಡು ಸಹಿಸಿಕೊಳ್ಳಲು ಆಗದ ಬಿಜೆಪಿ.ಅಶಾಂತಿಯನ್ನುಂಟು ಮಾಡಲು ಹೊರಟಿದೆ. ದೇಶಕ್ಕಾಗಿ ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನವಿದೆ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದರು.

        ಕಾಂಗ್ರೆಸ್ ಉಪಾಧ್ಯಕ್ಷ ಆರ್.ಕೆ.ನಾಯ್ಡು ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ನವರನ್ನು ಗೆಲ್ಲಿಸಲು ಏನು ಮಾಡಬೇಕೊ ಅದನ್ನು ಮಾಡೋಣ. ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟಿದ್ದು, ಕಾಂಗ್ರೆಸ್ ಪಕ್ಷ ಎನ್ನುವುದನ್ನು ಮರೆತಿರುವ ಬಿಜೆಪಿ.ಯವರು ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷದ ವಿರುದ್ದ ಅಪಪ್ರಚಾರ ಮಾಡುವ ಕುತಂತ್ರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸಾಧನೆಯನ್ನು ಜನರಿಗೆ ತಿಳಿಸಬೇಕಿದೆ ಎಂದು ಹೇಳಿದರು.

        ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ನಜ್ಮತಾಜ್, ಪ್ರಧಾನ ಕಾರ್ಯದರ್ಶಿ ದುರುಗೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷ್, ಗ್ರಾಮಾಂತರ ಅಧ್ಯಕ್ಷ ಆರ್.ಪ್ರಕಾಶ್, ಮುದಸಿರ್ ನವಾಜ್, ವಸೀಂ, ರೆಹಮಾನ್, ನಾಗರಾಜ್ ಪೈಲೆಟ್, ಖಲೀಲ್, ಚಾಂದ್‍ಪೀರ್, ಚೌಳೂರು ಪ್ರಕಾಶ್, ಚಿದಾನಂದಮೂರ್ತಿ, ನಾಗರಾಜ್ ಜಾನ್ಹವಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here