ಹಗರಿಬೊಮ್ಮನಹಳ್ಳಿ:
ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಸ್ವತ: ಅಕ್ಷರಸ್ತರಾಗಬೇಕು, ಒಂದುವೇಳೆ ಅಕ್ಷರ ಜ್ಞಾನವಿಲ್ಲವೆಂದರೂ ಕಲಿತುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಾ.ಪಂ.ಅಧ್ಯಕ್ಷೆ ನಾಗಮ್ಮ ಗೋಣಿಬಸಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹರದೇಗುಲದ ರಸ್ತೆಯಲ್ಲಿರುವ ಸಾಮಥ್ರ್ಯಸೌಧದಲ್ಲಿ ಬುಧವಾರ ವಯಸ್ಕರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾ.ಪಂ.ಗಳ ಜನಪ್ರತಿನಿಧಿಗಳಿಗೆ ಅಕ್ಷರ ಅಭ್ಯಾಸ ಕಾರ್ಯಗಾರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಗ್ರಾ.ಪಂ.ಗಳಿಗೆ ಸರ್ಕಾರದಿಂದ ಗ್ರಾಮಗಳ ಅಭಿವೃದ್ಧಿ ಮತ್ತು ಯುವಜನತೆ ಸೇರಿದಂತೆ ಇತರೆ ಸೌಲಭ್ಯಗಳಿಗೆ ಸಾಕಷ್ಟು ಅನುದಾನ ಬರುತ್ತದೆ.
ಈ ಬಗ್ಗೆ ತಿಳಿದುಕೊಳ್ಳುವಂತ ಜ್ಞಾನ ಪ್ರತಿಯೊಬ್ಬ ಸದಸ್ಯರಿಗೆ ಇರಬೇಕಾಗಿರುವುದು ಸಾಮಾನ್ಯ ತಿಳುವಳಿಕೆ ಆದ್ದರಿಂದ ಪ್ರತಿಯೊಬ್ಬರು ಓದು ಬರಹ, ಲೆಕ್ಕಾಚಾರದ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಇಲ್ಲಿ ನಡೆಯುವ ತರಬೇತಿಯ ಉಪಯೋಗವನ್ನು ಪಡೆದುಕೊಂಡು ಅಕ್ಷರವಂತರಾಗಿ ಎಂದು ಕರೆ ನೀಡಿದರು.
ತಾಲೂಕು ಸಂಯೋಜಕರಾದ ಎ.ಹಾಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ತಾಲೂಕಿನಲ್ಲಿ ಎಲ್ಲಾ ಗ್ರಾ.ಪಂ.ಗಳಲ್ಲಿ 124ಜನ ಅನಕ್ಷರಸ್ಥ ಸದಸ್ಯರಿದ್ದು, ಅದರಲ್ಲಿ 55ವರ್ಷ ಮೀರಿದ ಸದಸ್ಯರನ್ನು ಬಿಟ್ಟು 95ಜನ ಸದಸ್ಯರು ಅನಕ್ಷರಸ್ಥರಿದ್ದಾರೆ. ಅದರಲ್ಲಿ ಮೊದಲಿನ ಹಂತವಾಗಿ ತಾಲೂಕಿನ ಬಾಚಿಗೊಂಡನಹಳ್ಳಿ, ಬನ್ನಿಗೋಳ, ಬೆಣ್ಣಿಕಲ್ಲು, ಬ್ಯಾಸಗಿದೇರಿ, ದಶಮಾಪುರ, ಮಾದೂರು ಮತ್ತು ಹಂಪಾಪಟ್ಟಣ ಗ್ರಾ.ಪಂ.ಗಳ 50 ಸದಸ್ಯರಿರುತ್ತಾರೆ. ಇವರಿಗೆ ತರಬೇತಿ ಆರಂಭವಾಗಿದ್ದು, ಉಳಿದಂತೆ ಎರಡನೇ ಹಂತದಲ್ಲಿ ತರಬೇತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಕೆ.ಕೆ.ಕೊಟ್ರೇಶ್, ಮುಖಂಡ ಗೋಣಿಬಸಪ್ಪ ಇತರರು ಇದ್ದರು. ಗ್ರಾ.ಪಂ.ಸದಸ್ಯೆ ಸಲೀಮಾಭೀ ಪ್ರಾರ್ಥಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸಿದ್ದರಾಮೇಶ್, ಟಿ.ಬಸವರಾಜ್ ಹಾಗೂ ಡಿ.ರುದ್ರಗೌಡ ಕಾರ್ಯಕ್ರಮ ನಿರ್ವಹಿಸಿದರು.