ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ನಗರಾದ್ಯಂತ ಅವ್ಯವಸ್ಥೆ : ಜಿ.ಎಸ್.ಬಸವರಾಜು

ತುಮಕೂರು
    ಸ್ಮಾರ್ಟ್ ಸಿಟಿಯ ಕಾಮಗಾರಿಗಳಿಂದ ನಗರದಲ್ಲಿ ಅಭಿವೃದ್ಧಿ ಬದಲಾಗಿ ಅವ್ಯವಸ್ಥೆ ಹೆಚ್ಚಾಗಿದೆ. ಇದನ್ನು ಸರಿಪಡಿಸುವುದರ ಜೊತೆಗೆ ಮುಂದೆ ಮಾಡಬೇಕಾದ ಅಭಿವೃದ್ಧಿ ಕಾಮಗಾರಿಯತ್ತ ಗಮನ ಹರಿಸಬೇಕು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ದಿಶಾ ಸಮಿತಿ ಅಧ್ಯಕ್ಷ ಹಾಗೂ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಸೂಚನೆ ನೀಡಿದರು.
    ನಗರದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ದಿಶಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ಮಾರ್ಟ್ ಸಿಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಸ್ಮಾರ್ಟ್ ಸಿಟಿ ಇದಾಗಿದ್ದು, ಸ್ಮಾರ್ಟ್ ಸಿಟಿ ಜಾರಿಯಾಗಿ ಎರಡೂವರೆ ವರ್ಷ ಕಳೆದಿದೆ.
 
      ಆದರೆ ತುಮಕೂರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ನೋಡಿದರೆ ಅದು ಎಲ್ಲಿಯೂ ಸ್ಮಾರ್ಟ್ ಸಿಟಿ ಅನಿಸುತ್ತಿಲ್ಲ. ಸ್ಮಾರ್ಟ್ ಸಿಟಿಯಲ್ಲಿನ ಲೋಪದೋಷಗಳ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ವರದಿಗಳು ಬರುತ್ತಲೇ ಇವೆ.  ಈ ಕುರಿತು ಸ್ಮಾರ್ಟ್ ಸಿಟಿಯ ಕಾಮಗಾರಿಗಳ ವಿಚಾರಣೆ ಮಾಡಲು ದಿಶಾ ಸಮಿತಿಯನ್ನು ರೂಪಿಸಲಾಗಿದೆ ಎಂದರಲ್ಲದೆ, ಕಾಮಗಾರಿಯ ಹೊಣೆ ಹೊತ್ತಿರುವ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ಮೊಬೈಲ್‍ನಲ್ಲಿಯೇ ಇಟ್ಟುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು. ಸದ್ಯ ನಡೆಯುತ್ತಿರುವ ಕಾಮಗಾರಿಗಳಲ್ಲಿಯೇ ಅನೇಕ ಸಮಸ್ಯೆಗಳಿವೆ. ಪ್ರತಿತಯೊಂದನ್ನೂ ದಿಶಾ ಸಮಿತಿಯಲ್ಲಿ ಚರ್ಚೆ ಮಾಡಿ ಸಮಿತಿಯ ಅನುಮತಿ ಪಡೆಯದೇ ಯಾವುದೇ ಕಾಮಗಾರಿ ಮಾಡುವಂತಿಲ್ಲ ಎಂದು ಸೂಚಿಸಿದರು.
     ಲೋಕಸಭೆಯ ಅಧಿವೇಶನ ಇದ್ದು, ಅದಕ್ಕೆ ತೆರಳುವ ಮುನ್ನ ನಗರದಲ್ಲಿನ ಸಮಸ್ಯೆಗಳ ಬಗ್ಗೆ, ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಬಗ್ಗೆ ಪೂರ್ಣ ಮಾಹಿತಿ ಪಡೆಯುವ ನಿಟ್ಟಿನಲ್ಲಿ ದಿಶಾ ಸಮಿತಿಯಿಂದ ಸ್ಮಾರ್ಟ್ ಸಿಟಿಯ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಿದ್ದು ಇದರಲ್ಲಿ ನೀಡಲಾದ ವಿಷಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಡಿಜಿಟಲ್ ಮುಖಾಂತರ ತೋರಿಸುವಂತೆ ಸೂಚಿಸಿದರಲ್ಲದೆ, ಎಂಜಿ ರಸ್ತೆಯಲ್ಲಿ ಏರಿಯಂತೆ ಮಣ್ಣು ಗುಡ್ಡೆ ಹಾಕಲಾಗಿದೆ.
    ಅಲ್ಲಲ್ಲಿ ಚೇಂಬರ್‍ಗಳನ್ನು ತೆಗೆಯುವಾಗ ಒಳಚರಂಡಿಯನ್ನು ಹೊಡೆದಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಾ ದುರ್ನಾತ ಬೀರುತ್ತಿದೆ. ಇಂತಹ ಅನೇಕ ಸಮಸ್ಯೆಗಳು ಕಣ್ಣಮುಂದೆ ಕಾಣುವಾಗ ಅದೇಗೆ ಸ್ಮಾರ್ಟ್ ಸಿಟಿ ಆಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
     ಈ ವೇಳೆ ಶಾಸಕ ಜಿಬಿ.ಜ್ಯೋತಿಗಣೇಶ್ ಮಾತನಾಡಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು ನೀವು ಕಚೇರಿಗಳಿಗೆ ಸೀಮಿತರಾಗಿರುತ್ತೀರಾ. ನೀವು ಯಾರಿಗೂ ಕಾಣುವುದಿಲ್ಲ. ಬೆಳಗಾದರೆ ಜನ ಹಾಗೂ ಮಾಧ್ಯಮದವರು ಜನಪ್ರತಿನಿಧಿಗಳನ್ನು ನಿಂದಿಸುತ್ತಾರೆ. ಇಲ್ಲಿ ನಾವು ಸೂಚಿಸಿದ ಕಾಮಗಾರಿಗಳ ಬದಲಾಗಿ ತುಮಕೂರಿಗೆ ಬೇಡವಾದ ಕಾಮಗಾರಿಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಉದಾಹರಣೆಗೆ ಸ್ಮಾರ್ಟ್ ಲಾಂಜ್‍ನಿಂದ ಏನು ಪ್ರಯೋಜನವಿದೆ. ಇದರ ನಿರ್ಮಾಣಕ್ಕೆ ಲಕ್ಷಾಂತರ ರೂಗಳನ್ನು ಖರ್ಚು ಮಾಡಿದ್ದಾರೆ. ಅಲ್ಲದೆ ಇನ್ನೂ ನಾಲ್ಕು ಮಾಡಬೇಕೆಂಬ ಯೋಜನೆ ಹಾಕಿಕೊಂಡಿದ್ದಾರೆ ಇದರಿಂದ ಯಾರಿಗೂ ಪ್ರಯೋಜನ ಎಂದು ಪ್ರಶ್ನಿಸಿದರು. 
      ದಿಶಾ ಸಮಿತಿಯಿಂದ ನೀಡಲಾದ ವಿಷಯಗಳನ್ನಾಧರಿಸಿ ಸಭೆಯನ್ನು ಮುಂದುವರೆಸಿದ ಸಂಸದರು ಲೋಕಲ್ ಪ್ಲಾನಿಂಗ್ ಏರಿಯಾ ಹಾಗೂ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಬಗ್ಗೆ ಕೇಳಿದಾಗ ಟೂಡಾ ಆಯುಕ್ತರು ಉತ್ತರಿಸಿ ಈಗಾಗಲೇ ಮಾಡಿದ ಸರ್ವೇ ಪ್ರಕಾರ ಕಟ್ಟಡಗಳ ಮಾಹಿತಿ ನಮ್ಮಲ್ಲಿದೆ. ಉಳಿದಿರುವುದು ಪಾಲಿಕೆ ವತಿಯಿಂದ ಹೊಂದಾಣಿಕೆ ಮಾಡಿಕೊಂಡು ಮಾಡಬೇಕು ಎಂದು ತಿಳಿಸಿದರು.
       ಇದಕ್ಕೆ ಸಂಬಂಧಿಸಿದಂತೆ ಡ್ರೋನ್ ಸರ್ವೇ ಬಗ್ಗೆ ಚರ್ಚೆ ಮಾಡಿದ್ದು, 2 ಕೋಟಿ ರೂಗಳ ವೆಚ್ಚದಲ್ಲಿ ಪಾಲಿಕೆ ವತಿಯಿಂದ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್‍ಮೆಂಟ್) ಪ್ರದೇಶದಲ್ಲಿ ಸರ್ವೇ ಮಾಡಲಾಗಿದೆ. ಉಳಿದ ಭಾಗಗಳನ್ನು ಸ್ಮಾರ್ಟ್ ಸಿಟಿ ವತಿಯಿಂದ ಸರ್ವೇ ಮಾಡಲಾಗುತ್ತಿದೆ ಎಂದರು. ಈ ಹಿಂದೆ ಮಾಡಲಾದ ಡ್ರೋನ್ ಸರ್ವೇ ಮಾಹಿತಿ ನಿಮ್ಮಲ್ಲಿ ಇದೆಯೇ ಎಂದು ಪ್ರಶ್ನಿಸಿದಾಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಲು ತಡಬಡಿಸಿದರು. ಆಗಾ ಸರ್ವೇ ಮಾಡಲು ಹಣ ಕೊಡಲಾಗಿದೆ ಎಂದಾಗ ಅದರ ಸಂಪೂರ್ಣ ಮಾಹಿತಿ ಕಲೆ ಹಾಕಬೇಕಲ್ಲವೇ ಎಂದು ಸಂಸದರು ಆಗ್ರಹಿಸಿದರು. ಈ ಬಗ್ಗೆ ಒಂದು ತಿಂಗಳೊಳಗೆ ಸಂಪೂರ್ಣ ವರದಿ ನೀಡುವುದಾಗಿ ಅಜಯ್ ತಿಳಿಸಿದರು.
      ಜಿಐಎಸ್ ಆಧಾರಿತ ತುಮಕೂರು ಬೇಸ್ ಮ್ಯಾಪ್ ಕಾಮಗಾರಿ ಆರಂಭಿಸುವ ಮುನ್ನ ಒಂದು ನಕ್ಷೆ ಮತ್ತು ಕಾಮಗಾರಿ ಮುಗಿದ ತಕ್ಷಣ ಇತಿಹಾಸ ಸಹಿತ ಒಂದು ನಕ್ಷೇ ನೀಡುವಂತೆ ಕೋರಿದಾಗ ಒಬ್ಬರಿಗೊಬ್ಬರು ಮಾಹಿತಿ ಹಂಚಿಕೊಳ್ಳಲು ಗೊಂದಲಗಳಿದ್ದು, ಇದನ್ನು ಗಮನಿಸಿದ ಸಂಸದರು ಇಲಾಖೆಗಳ ನಡುವೆ ಸರಿಯಾದ ಹೊಂದಾಣಿಕೆ ಇಲ್ಲ ಎಂದು ಸಂಸದರು ಕಿಡಿಕಾರಿದರು.
     ಜಿಐಎಸ್ ಆಧಾರಿತ ಇಲಾಖಾವಾರು ಇತಿಹಾಸ ಸಹಿತ ಲೇಯರ್‍ಗಳ ಬಗ್ಗೆ ಮಾಹಿತಿ ಕೇಳಿದಾಗ ಒಂದೊಂದು ಇಲಾಖೆ ತಮ್ಮದೇ ಆದ ರೀತಿಯಲ್ಲಿ ಸರ್ವೇ ಮಾಡಿಕೊಂಡು ದಾಖಲೆಗಳನ್ನು ಇಟ್ಟುಕೊಳ್ಳಲಾಗಿದೆ. ಇವುಗಲ್ಲಿ ಒಂದಕ್ಕೊಂದು ತಾಳೆಯಾಗುವುದಿಲ್ಲ. ಈಗ ಪ್ರತಿಯೊಂದು ಇಲಾಖೆಯ ಮಾಹಿತಿಯೂ ಒಂದೇ ತಂತ್ರಾಂಶದಲ್ಲಿ ಸಿಗುವಂತಾಗಬೇಕು. ಪ್ರತಿಯೊಬ್ಬರ ಕೆಲಸ ಕಾರ್ಯಗಳು ಒಂದೇ ಕಡೆಯಲ್ಲಿ ಸಿಗುವಂತಾಗಬೇಕು ಎಂದು ಶಾಸಕರು ಸೂಚಿಸಿದರು.
      ನಗರದಲ್ಲಿ ಮಾಡುತ್ತಿರುವ ಕಾಮಗಾರಿಗಳಲ್ಲಿ ಕಾರ್ಯಪಾಲಕ ಅಭಿಯಂತರರ ಕಾರ್ಯ ಹೆಚ್ಚಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಎಐಸಿಟಿ ಮಾರ್ಗದರ್ಶಿ ಸೂತ್ರದ ಪ್ರಕಾರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಕ್ವಿಟೀವ್ ಪಾಯಿಂಟ್ಸ್ ಮತ್ತು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಮಾಡಿರುವುದರಿಂದ ತುಮಕೂರು ನಗರದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳನ್ನು ಸಂಪರ್ಕಿಸಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಂಡರೆ ಅವರಿಗೆ ಅಭ್ಯಾಸವಾದಂತಾಗುತ್ತದೆ. ಜೊತೆಗೆ ಹಣವೂ ಉಳಿತಾಯವಾಗುತ್ತದೆ.
 
     ಈ ಬಗ್ಗೆ ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಚರ್ಚೆ ಮಾಡಿ ಎಂದು ಸೂಚನೆ ನೀಡಿದರು.ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದ ವಿಷಯ ಸಂಬಂಧಿಸಿದಂತೆ ಪಾಲಿಕೆ ಎಂಜಿನಿಯರ್‍ಗೆ ಪ್ರಶ್ನಿಸಿದಾಗ ಹಾಲಿ ಎಂಜಿನಿಯರೊಬ್ಬರು ಉತ್ತರಿಸಿ ದಿನಂಪ್ರತಿ 100 ಟನ್ ಕಸ ಬರುತ್ತಿದೆ. ಅದರಲ್ಲಿ ಒಣ ಕಸ ಹಾಗೂ ಹಸಿ ಕಸ ಬೇರ್ಪಡಿಸಿ ತರಲಾಗುತ್ತಿದೆ.
    ಇದರಿಂದ 4 ಟನ್ ವರೆಗೆ ಗೊಬ್ಬರ ತಯಾರಾಗುತ್ತಿದೆ ಎಂದರು. ಅಲ್ಲದೆ ಅಲ್ಲಿ ಅಳವಡಿಸಿದ ವಿವಿಧ ಮಿಷನರಿಗಳ ಬಗ್ಗೆ ಪ್ರಶ್ನಿಸಿದಾಗ ಸಂಬಂಧಪಟ್ಟ ಮಾಹಿತಿ ಇಲ್ಲದೇ ಇದ್ದು, ಮುಂದಿನ ಸಭೆಯ ವೇಳೆ ಎಲ್ಲಾ ಮಾಹಿತಿಯನ್ನು ನೀಡುವುದಾಗಿ ಒಪ್ಪಿಕೊಂಡರು.
     ಅಜ್ಜಗೊಂಡನಹಳ್ಳಿ ಸುತ್ತಲಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಗೆ ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಸಂಬಂಧ ಅಲ್ಲಿನ ಸ್ಥಿತಿ ಗತಿಗಳು ಹೇಗಿವೆ. ಅಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ ಎಂಬುದರ ಬಗ್ಗೆ ವರದಿ ತಯಾರಿಸಿ ಕೊಡಲು ಪಾಲಿಕೆ ಪ್ರಭಾರ ಆಯುಕ್ತರಿಗೆ ಸೂಚನೆ ನೀಡಲಾಯಿತು.
      ರಿಂಗ್ ರಸ್ತೆ ಅಭಿವೃದ್ಧಿ ಸಂಬಂಧಿಸಿದಂತೆ 19 ಲಕ್ಷ ವೆಚ್ಚದಲ್ಲಿ ಗಿಡಗಳನ್ನು ಹಾಕಲು ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಈಗಾಗಲೇ 6 ಲಕ್ಷ ರೂಗಳ ವೆಚ್ಚದಲ್ಲಿ ಕುರುಚಲು ಗಿಡಗಳನ್ನು ಬೆಳೆಸಲಾಗಿದೆ ಎಂದು ಆರೋಪಿಸಿದಾಗ ಸಂಬಂಧಿಸಿದ ಎಂಜಿನಿಯರೊಬ್ಬರು ಮಾತನಾಡಿ, ಈಗಾಗಲೇ ಎಲ್ಲ ಕಡೆ ಗಿಡಗಳನ್ನು ಬೆಳೆಸಲಾಗಿದೆ. ಮಳೆ ಬಂದಿದ್ದ ಕಾರಣ ಅದನ್ನುಕಟಾವು ಮಾಡಲಾಗಿಲ್ಲ ಎಂದು ತಿಳಿಸಿದರು. ಇದಕ್ಕೆ ಮರು ಪ್ರಶ್ನಿಸಿದ ದಿಶಾ ಸಮಿತಿಯ ಸದಸ್ಯರು, ಎಲ್ಲಿ ಹಾಕಿದ್ದೀರಾ ತೋರಿಸಿ ಎಂದಾಗ ಉತ್ತರ ನೀಡಲಾಗದಿದ್ದಕ್ಕೆ ಸಂಸದರು ಮತ್ತೆ ಆಕ್ರೋಶಕ್ಕೀಡಾದರು.
     ನಗರದಲ್ಲಿ ಕಸ ಎತ್ತುವಳಿ ಬಗ್ಗೆ ಮಾತನಾಡಿದ ಸಂಸದರು, ಹಾಗೂ ಶಾಸಕರು ನಗರದಲ್ಲಿ ದಿನೇ ದಿನೇ ಕಟ್ಟಡಗಳ ಕಸ ಹೆಚ್ಚಾಗುತ್ತಿದೆ ಅದನ್ನು ಎತ್ತುವಳಿ ಮಾಡುವಲ್ಲಿ ಎದುರಾಗುವ ಸಮಸ್ಯೆ ಏನು ಎಂದಾಗ ಪಾಲಿಕೆಯ ಪ್ರಭಾರ ಆಯುಕ್ತ ಸಿ.ಎಲ್.ಶಿವಕುಮಾರ್ ಮಾತನಾಡಿ, ಹಸಿಕಸ, ಒಣಕಸ ನಮ್ಮ ವ್ಯಾಪ್ತಿಗೆ ಸೇರುವುದರಿಂದ ಈ ಕೆಲಸ ನಾವು ಮಾಡಲಾಗುತ್ತಿದೆ.
 
     ಉಳಿದಂತೆ ರಾತ್ರೋ ರಾತ್ರಿ ಕೆಲವರು ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆದಾರರು ಕೆರೆಗಳಿಗೆ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ಕಸವನ್ನು ಎಸೆಯುತ್ತಿದ್ದಾರೆ ಎಂದಾಗ ಅದಕ್ಕೆ ಸಂಸದರು, ಗುತ್ತಿಗೆದಾರರಿಗೆ ಮನೆ ಕಟ್ಟಲು ಅನುಮತಿ ನೀಡುವಾಗಲೇ ಅವರ ಬಳಿ ಇಂತಿಷ್ಟು ಹಣ ಡಿಪಾಸಿಟ್ ಮಾಡಬೇಕು.
     ಒಂದು ವೇಳೆ ಆ ಗುತ್ತಿಗೆದಾರ ಕೆರೆಗೆ ಮಣ್ಣು ಎಸೆದಾಗ ಆತನು ಕಟ್ಟಿದ್ದ ಹಣದಿಂದಲೇ ಅದನ್ನು ಸ್ವಚ್ಛ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ಸೂಚಿಸಿದರುಪ್ರಾಜೆಕ್ಟ್ ಕನ್ಸಲ್ಟೆಂಟ್‍ನ ಮುಖ್ಯಸ್ಥರಾದ ಪವನ್‍ಕುಮಾರ್ ಸೈನಿಯವರನ್ನು ಪ್ರಶ್ನಿಸಿದ ಸಂಸದರು, ಕಾಮಗಾರಿ ಆರಂಭ ಮಾಡುವ ಮುನ್ನ ಜನರೊಂದಿಗೆ ಚರ್ಚೆ ಮಾಡಲಾಗಿದೆಯೇ…? ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಲಹೆ ಸೂಚನೆಗಳನ್ನು ಪಡೆಯಲಾಗಿದೆಯೇ ಎಂದಾಗ ಅವರು ಎಲ್ಲಾ ಸಭೆಗಳನ್ನು ಮಾಡಲಾಗಿದೆ ಎಂದು ಉತ್ತರಿಸುತ್ತಲೇ ಆಕ್ರೋಶಗೊಂಡ ಸಂಸದರು ಸುಳ್ಳು ಹೇಳ ಬೇಡಿ. ಕನ್ನಡ ಬಾರದೇ ಇರುವವರನ್ನು ಕರೆತಂದು ಇಲ್ಲಿ ಕೆಲಸ ಮಾಡಿಸಿದರೆ ಹೀಗೆ ಆಗುತ್ತದೆ ಎಂದು ಛೇಡಿಸಿದರು.
     ನಗರದಿಂದ 10 ಕಿಮೀ ವ್ಯಾಪ್ತಿಯಲ್ಲಿ ಇರವ ಸರ್ಕಾರಿ ಜಾಗಗಳು ಹಾಗೂ ಪಾಲಿಕೆ ವ್ಯಾಪ್ತಿಯ ಜಾಗಗಳನ್ನು ಗುರುತಿಸಿದರೆ ಅವುಗಳು ಸರ್ಕಾರದ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂದು ಶಾಸಕರು ಸೂಚಿಸಿದರು. ಇನ್ನೂ ಉಳಿದ ವಿವಿಧ ಇಲಾಖೆಗಳ ಕಾಮಗಾರಿಗಳ ಬಗ್ಗೆ ಅಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ ಸಂಸದರು, ಎಲ್ಲಾ ಇಲಾಖೆಗಳಿಗೂ ಕೇಳಿದ ವರದಿಗಳನ್ನು 15 ದಿನಗಳೊಳಗೆ ನೀಡುವಂತೆ ಸೂಚನೆ ನೀಡಿದರು.
     ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಎಂಜಿನಿಯರ್ ಗೋವಿಂದಪ್ಪ, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಚಂದ್ರಿಕಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಎಂಜಿನಿಯರ್ ಸಂಪತ್, ಮಹಾನಗರ ಪಾಲಿಕೆಯ ಎಂಜಿನಿಯರ್ ಆಶಾ, ಸ್ಮಾರ್ಟ್ ಸಿಟಿಯ ಎಂಜಿನಿಯರ್‍ಗಳಾದ ಬಸವರಾಜುಗೌಡ, ರಶ್ಮಿ, ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap