ಪ್ರಧಾನಿ ಆಗಮನದ ಹಿನ್ನೆಲೆ ಶರವೇಗದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ

ತುಮಕೂರು
     ರಾಷ್ಟ್ರ ಮಟ್ಟದ ಕಾರ್ಯಕ್ರಮವೊಂದು ತುಮಕೂರಿನಲ್ಲಿ ಆಯೋಜನೆಗೊಂಡಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಪ್ರಮುಖ ರಸ್ತೆಯಾದ ಬಿ.ಎಚ್.ರಸ್ತೆಯನ್ನು ಶರವೇಗದಲ್ಲಿ ಸುಂದರೀಕರಣ ಮಾಡಲಾಗುತ್ತಿದೆ. 
     ಜನವರಿ 2ರಂದು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಕೃಷಿ ಸಮ್ಮಾನ್ ಯೋಜನೆಯ ಮುಂದಿನ ಹಂತ ಅನುಷ್ಠಾನ ಮಾಡಲು ಮೋದಿಯವರು ಭೇಟಿ ನೀಡಲಿದ್ದಾರೆ. ಜ.2ರ ಮಧ್ಯಾಹ್ನ ತುಮಕೂರು ವಿವಿಯ ಹೆಲಿಪ್ಯಾಡ್‍ನಲ್ಲಿ ಇಳಿದು ಅಲ್ಲಿಂದ ಕಾರಿನ ಮೂಲಕ ಸಿದ್ದಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಮಾಡಿಕೊಂಡು, ಕಿರಿಯ ಶ್ರೀಗಳ ಆಶೀರ್ವಾದ ಪಡೆದು, ಸಾಮೂಹಿಕ ಪ್ರಾರ್ಥನೆಯನ್ನು ಪಾಲ್ಗೊಂಡು ನಂತರದಲ್ಲಿ ಮೈದಾನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 
      ನಗರದಲ್ಲಿ ರಸ್ತೆ ಮೂಲಕ ಸಂಚರಿಸಲಿರುವ ಮೋದಯವರಿಗೆ ಧೂಳಿನ ಸಮಸ್ಯೆಯಾಗಲಿ, ಇನ್ನಿತರೆ ಸಮಸ್ಯೆಗಳು ಎದುರಾಗದಂತೆ ಟೌನ್‍ಹಾಲ್‍ನಿಂದ ಹಿಡಿದು ಕ್ಯಾತ್ಸಂದ್ರ ವರೆಗಿನ ರಸ್ತೆಯನ್ನು ಸ್ವಚ್ಛ ಮಾಡಲಾಗುತ್ತಿದೆ. ಎಸ್‍ಐಟಿ ಮುಂಭಾಗ ಸೇರಿದಂತೆ ಹಲವೆಡೆ ರಸ್ತೆಗೆ ಟಾರ್ ಹಾಕಿ ಸುಸಜ್ಜಿತಗೊಳಿಸಲಾಗುತ್ತಿದೆ. ಸ್ಮಾರ್ಟ್ ಸಿಟಿಯಿಂದ ಮಾಡಲಾದ ಕಾಮಗಾರಿಯ ಬಳಿ ಉಂಟಾದ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ.
     ಅಲ್ಲಲ್ಲಿ ರಸ್ತೆಯ ಹಂಪ್ಸ್‍ಗಳನ್ನು ತೆಗೆದು ಹಾಕಲಾಗಿದೆ. ಒಟ್ಟಾರೆ ಮೋದಿ ಬರುವ ಹಿನ್ನೆಲೆಯಲ್ಲಿ ನಗರದ ಕೆಲಭಾಗದಲ್ಲಿ ಶರವೇಗದಲ್ಲಿ ಕಾಮಗಾರಿ ಮಾಡುತ್ತಿದ್ದು, ಸುಂದರೀಕರಣ ಮಾಡುವತ್ತ ಗಮನ ಹರಿಸಿದ್ದಾರೆ.ಜೂನಿಯರ್ ಕಾಲೇಜು ಮೈದಾನದ ಪಕ್ಕದಲ್ಲಿ ಸುಮಾರು 1 ವರ್ಷದಿಂದ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದ ಆ ರಸ್ತೆಯಲ್ಲಿ ಓಡಾಡಲು ಆಗುತ್ತಿರಲಿಲ್ಲ. ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಒಂದು ಕಡೆಯಲ್ಲಿ ರಸ್ತೆಯನ್ನು ಸರಿಪಡಿಸಲಾಯಿತು. ಇದೀಗ ಮೋದಿ ಆಗಮನ ಹಿನ್ನೆಲೆಯಲ್ಲಿ ಹಗಲು ರಾತ್ರಿ ಎನ್ನದೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇನ್ನೇನು ಕೊನೆಯ ಹಂತಕ್ಕೆ ತಂದಿದ್ದಾರೆ. ಈಗಾಗಲೇ ಜಲ್ಲಿ ಹಾಕಿ ಸಮಮಾಡಿದ್ದು, ಇನ್ನು ಎರಡು ದಿನಗಳೊಳಗೆ ಟಾರ್‍ನಿಂದ ಕಂಗೊಳಿಸುತ್ತದೆ. 
      ಬಿ.ಎಚ್.ರಸ್ತೆಯಲ್ಲಿ ಮಣ್ಣಿನ ಗುಡ್ಡೆಗಳು ರಾರಾಜಿಸುತ್ತಿದ್ದವು. ಪ್ರತಿನಿತ್ಯ ಅಧಿಕಾರಿಗಳು, ರಾಜಕಾರಣಿಗಳು ಇದನ್ನು ನೋಡುತ್ತಾ ಚಲಿಸಿದರೂ ಅದನ್ನು ಕ್ಯಾರೆ ಅನ್ನುವವರಿರಲಿಲ್ಲ. ಈಗ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಸುಂದರೀಕರಣ ಕೆಲಸದಿಂದ ಮಣ್ಣಿನ ಗುಡ್ಡೆಗಳನ್ನು ನೆಲಸಮ ಮಾಡಲಾಗಿದೆ. ಚೇಂಬರ್ ಸುತ್ತಲೂ ಮಣ್ಣನ್ನು ಅದುಮಲಾಗುತ್ತಿದೆ. ಈ ಹಿಂದೆ ಇದ್ದ ರಸ್ತೆಯನ್ನು ಯಥಾಸ್ಥಿತಿಗೆ ತರುವಲ್ಲಿ ಅವಿರತ ಶ್ರಮ ಹಾಕಲಾಗುತ್ತಿದೆ. 
      ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ತುಮಕೂರು ಮಹಾನಗರ ಪಾಲಿಕೆಯಿಂದ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ, ಸ್ವಚ್ಛತೆ ಕೆಲಸ, ಸುಂದರೀಕರಣ ಕೆಲಸ ಹಗಲು ರಾತ್ರಿ ನಡೆಯುತ್ತಿದೆ. 
ಸ್ವಚ್ಛತೆಯತ್ತ ವಿವಿ ಹೆಲಿಪ್ಯಾಡ್ ಆವರಣ
      ವಿ.ವಿ. ಆವರಣದಲ್ಲಿನ ಹೆಲಿಪ್ಯಾಡ್‍ಗಳ ಸುತ್ತಲೂ ಹುಲ್ಲು ಬೆಳೆದಿತ್ತು. ಸ್ವಚ್ಛತೆಯು ಮರೀಚೆಕೆಯಾಗಿತ್ತು. ಇದೀಗ ಮೋದಿಗಾಗಿ ಹೆಲಿಪ್ಯಾಡ್ ಆವರಣವನ್ನು ಸುಸ್ಥಿತಿಯಲ್ಲಿ ಇರಿಸುವತ್ತ ಗಮನ ಹರಿಸಿದ ಪಾಲಿಕೆಯು ಹೆಲಿಪ್ಯಾಡ್ ಸುತ್ತ ಬೆಳೆದಿರುವ ಹುಲ್ಲನ್ನು ತೆಗೆಯುವ ಕೆಲಸ ಮಾಡುತ್ತಿದೆ. 
ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆ
   ಬಿಎಚ್ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸವನ್ನು ಪಾಲಿಕೆ ಪೌರ ಕಾರ್ಮಿಕರು ಸ್ವಚ್ಛ ಮಾಡುತ್ತಿದ್ದಾರೆ. ಪಾಲಿಕೆಯ ಕೆಲ ಕಾರ್ಮಿಕರನ್ನು ಇದಕ್ಕಾಗಿಯೇ ನಿಯೋಜಿಸಿದ್ದು, ಅವರು ಸಂಪೂರ್ಣವಾಗಿ ರಸ್ತೆಗಳನ್ನು ಸ್ವಚ್ಛತೆ ಮಾಡುವಲ್ಲಿ ಗಮನ ಹರಿಸಬೇಕಿದೆ. ಇವರು ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ ಗೆÀಂಟಿಗಳನ್ನು, ರಸ್ತೆಯ ಪಕ್ಕದಲ್ಲಿ ಹರಡಿರುವ ಹುಲ್ಲನ್ನು ತೆಗೆಯುವ ಕೆಲಸ ಮಾಡುತ್ತಿದ್ದಾರೆ. 
ವಿವಿಧ ಗಣ್ಯರ ಭೇಟಿ, ಪರಿಶೀಲನೆ
   ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಈಗಾಗಳೆ ಮೂರು ದಿನಗಳಿಂದ ಬಿ.ಎಚ್.ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ತಳ್ಳು ಗಾಡಿಗಳನ್ನು ಒಕ್ಕಲೆಬ್ಬಿಸಲಾಗಿದೆ. ಜೂನಿಯರ್ ಕಾಲೇಜು ಮೈದಾನದ ಸುತ್ತಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಆಗಾಗ್ಗೆ ಬಾಂಬ್ ನಿಷ್ಕ್ರಿಯ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ವಿವಿಧ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 
ಮೈದಾನಕ್ಕೆ ಪ್ರವೇಶ ನಿಷೇಧ
   ಪ್ರತಿನಿತ್ಯ ಮೈದಾನದಲ್ಲಿ ಜನ ಜಂಗುಳಿ ಕಾಣುತ್ತಿತ್ತು. ಕಳೆದ ಎರಡ್ಮೂರು ದಿನಗಳಿಂದ ಜನಸಂದಣಿ ಇಲ್ಲದಂತಾಗಿದೆ. ಮೈದಾನದೊಳಗೆ ಪ್ರವೇಶ ನಿಷೇಧಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ  ಅನಿರೀಕ್ಷಿತ ಕಾರಣಗಳಿಂದ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ ಎಂದು ಪ್ರಕಟಣೆಯ ಬ್ಯಾನರ್ ಅನ್ನು ಅಳವಡಿಸಲಾಗಿದೆ. 
ಅಧಿಕಾರಿಗಳಿಗೆ ಜನರ ಶಾಪ
    ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಂದ ಧೂಳೆದ್ದು, ಜನರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಕಂಡು ಬಂದ ಸಮಸ್ಯೆಗಳನ್ನು ಪರಿಹರಿಸಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಆದರೆ ನಗರಕ್ಕೆ ಮೋದಿ ಬರುತ್ತಾರೆ ಎನ್ನುತ್ತಿದ್ದಂತೆ ಪ್ರಮುಖ ರಸ್ತೆಗಳನ್ನು ಸ್ವಚ್ಛ ಮಾಡಿಸುವುದು, ಟಾರ್ ಹಾಕುವುದು ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೇ ಕೆಲಸ ಮೊದಲೇ ಮಾಡಿದ್ದರೆ ಆಗುತ್ತಿರಲಿಲ್ಲವೇ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ.
ರಸ್ತೆ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಾಣ
     ಬಿಎಚ್ ರಸ್ತೆಯ ಇಕ್ಕೆಲಗಳಲ್ಲಿ ಬಿದಿರಿನ ಕಟ್ಟಿಗೆಯಿಂದ ತಡೆಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಭದ್ರಮ್ಮ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಬಳಿಯಿಂದ ಜಿಲ್ಲಾ ಪಂಚಾಯತ್ ಕಮಾನ್‍ವರೆಗೆ ಒಂದು ಕಡೆ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ.  ಅತ್ತ ಕಾಳಿದಾಸ ಹಾಸ್ಟೆಲ್ ಮುಂಭಾಗದಲ್ಲಿಯೂ ರಸ್ತೆ ಯುದ್ದಕ್ಕೂ ತಡೆಗೋಡೆ ನಿರ್ಮಾಣ ಮಾಡುತ್ತಿದ್ದಾರೆ. 
ಅಧಿಕಾರಿಗಳು ಜನ ಸೇವೆಗೋ, ಜನಪ್ರತಿನಿಧಿಗಳ ಸೇವೆಗೋ..?
      ಅಧಿಕಾರಿಗಳು ಜನ ಸೇವೆ ಮಾಡುವತ್ತ ಗಮನ ಹರಿಸ ಬೇಕೇ ಹೊರತು, ಜನಪ್ರತಿನಿಧಿಗಳ ಓಲೈಕೆ ಮಾಡಲು ಅಲ್ಲ. ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ವಿವಿಧ ಸಮಸ್ಯೆಗಳು ತಾಂಡವವಾಡುತ್ತಿವೆ. ಇವುಗಳನ್ನು ಸರಿಪಡಿಸುವತ್ತ ಮನಸ್ಸು ಮಾಡದ ಅಧಿಕಾರಿ ವರ್ಗ ಇದೀಗ ಮೋದಿ ಬರುತ್ತಾರೆ ಎಂದು ಅವರ ಕಣ್ಣಿಗೆ ಎಲ್ಲಿಯೂ ಸಮಸ್ಯೆ ಕಾಣದಂತೆ ನಗರ ಸುಂದರೀಕರಣ ಮಾಡಲು ಹೊರಟಿದ್ದಾರೆ. ಇದನ್ನು ನೋಡಿದರೆ ಅಧಿಕಾರಿಗಳು ಜನ ಸೇವೆ ಮಾಡಲು ಬಂದಿದ್ದಾರೋ ಅಥವಾ ಜನಪ್ರತಿನಿಧಿಗಳ ಸೇವೆ ಮಾಡಲು ನಿಂತಿದ್ದಾರೋ ಎಂಬುದು ತಿಳಿಯದಾಗಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link