ಅತೀವೃಷ್ಠಿ-ಅನಾವೃಷ್ಠಿ ತಾಪಮಾನಕ್ಕೆ ಅರಣ್ಯ ನಾಶವೇ ಕಾರಣ

ಹಾವೇರಿ

        ದಿನದಿಂದ ದಿನಕ್ಕೆ ಅರಣ್ಯ ನಾಶವಾಗುತ್ತಿದ್ದು, ಇದರಿಂದ ಭೂಮಿಯ ತಾಪಮಾನ ಹೆಚ್ಚಾಗಿ ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತಿದೆ ಹಾಗೂ ಅತೀವೃಷ್ಟಿ -ಅನಾವೃಷ್ಠಿಗಳು ಸಂಭವಿಸುತ್ತಿವೆ. ಪರಿಸರ ಕಾಪಾಡುವಲ್ಲಿ ಯುವಜನತೆ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.

         ಶುಕ್ರವಾರ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಹಾವೇರಿ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ವಿಜ್ಞಾನ ಪರಿಷತ್ ಸಹಯೋಗದಲ್ಲಿ ನಗರದ ಡಿ.ದೇವರಾಜ ಅರಸುಭವನದಲ್ಲಿ ಜರುಗಿದ ಹಾವೇರಿ ಜಿಲ್ಲಾ ಪರಿಸರ ಮಿತ್ರ ಶಾಲೆ2018-19ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

         ಮೊದಲು ಭೂಮಿಯಲ್ಲಿ ಶೇ.60 ರಷ್ಟು ಅರಣ್ಯ ಪ್ರದೇಶವಿತ್ತು. ನಂತರದ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದ ನಗರೀಕಣ ಹೆಚ್ಚಾದಂತೆ ಅರಣ್ಯ ವಾಶವಾಗುತ್ತಿದೆ. ನೈಸರ್ಗಿಕ ಕಾಡುಗಳನ್ನು ನಾಶಮಾಡಿ ಕಾಂಕ್ರೀಟ್ ಕಾಡುಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪ್ರಾಣಿ ಹಾಗೂ ಪಕ್ಷಿ ಸಂಕುಲ ಸೇರಿದಂತೆ ಸೂಕ್ಷ್ಮ ಜೀವಿಗಳ ಸಂತತಿ ಅವನತಿಯ ಅಂಚಿಗೆ ತಲುಪಿವೆ ಎಂದು ಹೇಳಿದರು.

         ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ, ನೀರಿನ ಸಮಸ್ಯೆ, ಕಲುಷಿತ ವಾತಾವರಣ ಹಾಗೂ ಭೂಮಿಯ ಫಲವತ್ತತೆ ನಾಶವಾಗುತ್ತಿದೆ. ಪರಿಸರ ನಾಶಕ್ಕೆ ಮೂಲ ಕಾರಣ ಪ್ರಕೃತಿ ವಿನಾಶವಾಗಿದೆ. ಸರಿಯಾದ ಮಳೆಯಿಲ್ಲದೆ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಪ್ರತಿಯೊಬ್ಬರೂ ಪರಿಸರ ಕಾಳಜಿ ಹೊಂದುವುದು ಅಗತ್ಯವಾಗಿದೆ. ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ. ಮುಂದಿನ ಪೀಳಿಗೆಗೆ ಪರಿಶುದ್ಧ ಪರಿಸರ ನೀಡುವ ಜವಾಬ್ದಾರಿ ಇಂದಿನ ಯುವಜನತೆ ಹಾಗೂ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.

        ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಅವರು ಮಾತನಾಡಿ, ಪರಿಸರವನ್ನು ಸ್ವಚ್ಛತೆಯಿಂದ ಹಾಗೂ ಕಾಳಜಿಯಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಇಂದಿನಿಂದಲೇ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಡೈನೋಸರ್ ಅವನತಿ ಹೊಂದಿದಂತೆ ಮುಂದೊಂದು ದಿನ ಮನುಷ್ಯ ಸಂಕುಲ ನಾಶವಾಗಬಹುದೆಂದು ವಿಷಾಧ ವ್ಯಕ್ತಪಡಿಸಿದರು.

          ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರಾದ(ಅಭಿವೃದ್ಧಿ) ಜಿ.ಎಂ.ಬಸವಲಿಂಗಪ್ಪ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಬೇಕು. ಇದರಿಂದ ಅರಣ್ಯ ಸುಧಾರಿಸುತ್ತದೆ ಹಾಗೂ ಪರಿಸರದಲ್ಲಿ ಶುದ್ಧವಾದ ಗಾಳಿ ದೊರೆಯುತ್ತದೆ ಎಂದು ಹೇಳಿದರು.

         ಇದೇ ಸಂದರ್ಭದಲ್ಲಿ ಕನಸು-ನನಸು ಪುಸ್ತಕ ಬಿಡುಗಡೆಗೊಳಿಸಿದ ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಎಸ್.ಬಿ.ಹಿರೇಮಠ ಅವರು ಮಾತನಾಡಿ, ಅಗ್ನಿ, ವಾಯು, ಜಲ ಹಾಗೂ ಇನ್ನಿತರ ಜೀವ ಸಂಕುಲದಿಂದ ಪರಿಸರ ಒಳಗೊಂಡಿದೆ. ಪ್ರಕೃತಿ ಎಂದರೆ ಪರಿಸರ, ಪರಿಸರ ಎಂದರೆ ಪ್ರಕೃತಿ. ಪರಿಸವನ್ನು ನಾಶಮಾಡದೆ ಅದನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದ ಎಂದು ಹೇಳಿದರು.

         ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ ಎಂ.ಎಸ್.ಮಹೇಶ್ವರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಜಿಲ್ಲಾ ಪರಿಸರ ಮಿತ್ರ ಶಾಲೆ, 10 ಹಸಿರು ಮಿತ್ರ ಶಾಲೆಗಳು ಹಾಗೂ 10 ಹಳದಿ ಶಾಲೆಗಳು ಸೇರಿ ಒಟ್ಟು 21 ಶಾಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಂದು ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಶ್ರೀಮತಿ ರೇಣುಕಾ ಗುಡಿಮನಿ, ಕೃಷ್ಣ ಜವಳಿ ಇತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ

         ರಾಣೇಬೆನ್ನೂರು ತಾಲೂಕು ಹೆಡಿಯಾಲ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಸಿರು ಶಾಲೆ

          ಹಿರೇಕೆರೂರು ತಾಲೂಕಿನ ಕಣವಿಸಿದ್ದಗೇರಿ, ಯತ್ತಿನಹಳ್ಳಿ(ಎಂ.ಕೆ) ಹಾಗೂಡಮ್ಮಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳಿಗೆ, ರಟ್ಟೀಹಳ್ಳಿ ತಾಲೂಕು ಬುಳ್ಳಾಪುರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಬ್ಯಾಡಗಿ ತಾಲೂಕು ತುಮರಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಹಾವೇರಿ ತಾಲೂಕು ಹಂದಿಗನೂರು ಹಾಗೂ ಬರಡಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳಿಗೆ, ಶಿಗ್ಗಾಂವ ತಾಲೂಕು ಬಂಕಾಪೂರ, ಮುನವಳ್ಳಿ ಸದಾಶಿವಪೇಟ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳಿಗೆ ಹಸಿರು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಳದಿ ಶಾಲೆ

          ಹಿರೇಕೆರೂರು ತಾಲೂಕು ಆಲದಕಟ್ಟಿ, ನೂಲಗೇರಿ ಹಾಗೂ ಹೊಸಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳಿಗೆ, ನಿಡನೇಗಿಲು ಹಾಗೂ ಹಿರೇಕೆರೂರು ಸರಕಾರಿ ಪ್ರೌಢಶಾಲೆಗಳಿಗೆ, ಬ್ಯಡಗಿ ತಾಲೂಕು ಹಿರೇಹಳ್ಳಿ ಸರಕಾರಿ ಪ್ರೌಢಶಾಲೆಗೆ, ರಾಣೇಬೆನ್ನೂರು ತಾಲೂಕು ಅಸುಂಡಿ, ಮುಷ್ಟೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ, ಹಾವೇರಿ ತಾಲೂಕು ದೇವಿಹೊಸೂರ ನಿಂಗಪ್ಪ ಬಸಪ್ಪ ಕಬ್ಬೂರ ಪ್ರೌಢಶಾಲೆಗೆ ಹಾಗೂ ಶಿಗ್ಗಾಂವ ತಾಲೂಕು ಶಿಶುವಿನಹಾಳ ಶರೀಫ ಶಿವಯೋಗೇಶ್ವರ ಪ್ರೌಢಶಾಲೆಗೆ ಹಳದಿ ಶಾಲೆ ಪ್ರಶಸ್ತಿ ನೀಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap