ಯೂರೋಪ್ ಮಾದರಿ ಕ್ಲಾಕ್ ಟವರ್ ಸ್ಥಗಿತ!

ದಾವಣಗೆರೆ

        ಸುಮಾರು 1.99 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ನಿರ್ಮಾಣವಾಗಿದ್ದ ಪಾಶ್ಚಿಮಾತ್ಯ ಯುರೋಪ್ ಮಾದರಿಯ ಕ್ಲಾಕ್ ಟವರ್ ಕಾರ್ಯನಿರ್ವಹಿಸದೇ, ಸ್ಥಗಿತಗೊಂಡಿರುವುದು ನಾಗರೀಕರ ಅಸಮಾಧಾನಕ್ಕೆ ಕಾರಣವಾಗಿದೆ.

         ಹೌದು… ದಾವಣಗೆರೆ ಮಹಾನಗರ ಪಾಲಿಕೆಯ 33ನೇ ವಾರ್ಡ್ ವ್ಯಾಪ್ತಿಯ ಎಸ್.ನಿಜಲಿಂಗಪ್ಪ ಬಡಾವಣೆಯ ಸರ್ಕಾರಿ ನೌಕರರ ಸಮುದಾಯ ಭವನದ ಪಕ್ಕದಲ್ಲಿ ಹಲವು ರಸ್ತೆಗಳು ಕೂಡುವ ಜಂಕ್ಷನ್ ವೃತ್ತದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ 49 ಲಕ್ಷ ರೂ., ಮಹಾನಗರ ಪಾಲಿಕೆಯಿಂದ 1.50 ಕೋಟಿ ರೂ. ಅನುದಾನ ಸೇರಿದಂತೆ ಒಟ್ಟು 1.99 ಕೋಟಿ ರೂ. ವೆಚ್ಚದಲ್ಲಿ ಒರಿಸ್ಸಾ ಮೂಲದ ಗುತ್ತಿಗೆದಾರ ಡಾ.ಜ್ಞಾನೇಶ್ ಮಿಶ್ರಾ ಎಂಬುವರು ಈ ಅತ್ಯಾಧುನಿಕ ಕ್ಲಾಕ್ ಟವರ್ ನಿರ್ಮಿಸಿದ್ದರು.

         ಆದರೆ, ಈ ಪಾಶ್ಚಿಮಾತ್ಯ ಶೈಲಿಯ ಗಡಿಯಾರ ಗೋಪುರ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಸ್ಮಾರ್ಟ್‍ಸಿಟಿ ದಾವಣಗೆರೆಯಲ್ಲೊಂದು ಅತ್ಯಾಕರ್ಷಕ ಕ್ಲಾಕ್ ಟವರ್ ನಿರ್ಮಾಣವಾಗಿ, ಗಂಟೆಗೊಮ್ಮೆ ಸಾರ್ವಜನಿಕರಿಗೆ ಸಮಯ ತಿಳಿಸಿ, ಸಮಯಪ್ರಜ್ಞೆ ಮೂಡಿಸಲಿದೆ ಎಂಬ ನಾಗರೀಕ್ಷರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಹೀಗಾಗಿ ಸುಮಾರು 1.99 ಕೋಟಿ ರೂ. ಹಣ ಹೊಳೆಯಲ್ಲಿ ಹುಣಸೆಹಣ್ಣು ಕಿವುಚಿದಂತಾಗಿದೆ ಎಂದು ಈ ಭಾಗದ ನಾಗರೀಕರು ಆರೋಪಿಸುತ್ತಾರೆ.

         ಇಲ್ಲಿ ನಿರ್ಮಾಣವಾಗಿರುವ ಆಕರ್ಷಕ ವೃತ್ತ ಹಾಗೂ ಕ್ಲಾಕ್ ಟವರ್‍ಗಳನ್ನು ಉತ್ತರ ಭಾರತದ ಓರಿಸ್ಸಾ, ಭುವನೇಶ್ವರ, ಕಾಟ್ರಾ ನಗರಗಳಲ್ಲಿ ನೋಡಲು ಸಿಗಲಿದ್ದು, ದಾವಣಗೆರೆಯಲ್ಲಿ ನಿರ್ಮಾಣವಾದ ಪಾಶ್ಚಿಮಾತ್ಯ ಯುರೋಪ್ ಮಾದರಿಯ ಕ್ಲಾಕ್ ಟವರ್ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾದ ಕಾರಣ ಇದು ದಾವಣಗೆರೆಯ ಹೆಸರನ್ನು ದಕ್ಷಿಣ ಭಾರತದಲ್ಲಿಯೇ ಚಿರಸ್ಥಾಯಿಗೊಳಿಸಲಿದೆ ಎಂಬ ಕನಸು ಇಲ್ಲಿಯ ನಾರೀಕರದ್ದಾಗಿತ್ತು. ಆದರೆ, ಈ ಕ್ಲಾಕ್ ಟವರ್ ಅನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸ್ಥಗಿತಗೊಂಡು, ಧೂಳು ಹಿಡಿಯುವಂತಾಗಿದೆ.

          ಸುಮಾರು ಒಂದೂವರೆ ಟನ್ ತೂಕ ಹಾಗೂ 25 ಅಡಿ ಎತ್ತರ, 11 ಅಡಿ ಅಗಲ ಅಳತೆ ಹೊಂದಿರುವ ಈ ಕ್ಲಾಕ್ ಟವರ್‍ನ ತ್ರಿಕೋನಾಕೃತಿಯ ಪಿಲ್ಲರ್‍ಗಳ ಮಧ್ಯೆ ಬೃಹದಾಕಾರದಲ್ಲಿರುವ ಗಡಿಯಾರವು ಎಷ್ಟು ಗಂಟೆಯಾಗಿದೆ ಎಂಬುದನ್ನು ಸೂಚಿಸಲು ಬೆಲ್ ಬಾರಿಸುವುದರ ಜೊತೆಗೆ, ಸಮಯವನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಕೂಗಿ ಹೇಳುವುದರ ಜೊತೆಗೆ ಹ್ಯಾಪಿ ನ್ಯೂ ಇವರ್, ಹ್ಯಾಪಿ ಸಂಕ್ರಾಂತಿ, ಹ್ಯಾಪಿ ಹೋಲಿ ಎಂಬುದು ಸೇರಿದಂತೆ ಆಯಾ ಹಬ್ಬ ಹಾಗೂ ಸಂಭ್ರಮಗಳ ಸಂದರ್ಭದಲ್ಲಿ ನಾಗರೀಕರಿಗೆ ಶುಭಾಶಯವನ್ನೂ ಸಹ ತಿಳಿಸಲಿದೆ ಎಂಬುದಾಗಿ ಗುತ್ತಿಗೆದಾರರು ತಿಳಿಸಿದ್ದರಿಂದ ಕ್ಲಾಕ್ ಟವರ್‍ನ ವಿಶೇಷತೆಯ ಬಗ್ಗೆ ಇಲ್ಲಿಯ ಜನರು ಇಟ್ಟುಕೊಂಡಿದ್ದ ಹಲವು ನಿರೀಕ್ಷೆಯನ್ನು ಹುಸಿಗೊಳಿಸಿದಂತಾಗಿದೆ.

           ಇದೇ ವೃತ್ತದ ಕೂಗಳತೆಯ ದೂರದಲ್ಲಿಯೇ ಜಿಲ್ಲಾಧಿಕಾರಿಗಳ ನಿವಾಸ ಇದೆ. ಅಲ್ಲದೇ, ಈ ವೃತ್ತವನ್ನೇ ಬಳಿಸಿಕೊಂಡು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಓಡಾಡುತ್ತಾರೆ. ಆದರೆ, ಅವರ್ಯಾರೂ ಸಹ ಈ ಬೃಹದಾಕಾರದ ಕ್ಲಾಕ್ ಟವರ್‍ನ ಅವಸ್ಥೆಯನ್ನು ಗಮನಿಸದಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ ಎಂದು ವಕೀಲರಾದ ವಸುಂಧರಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

           ಕ್ಲಾಕ್ ಟವರ್ ನಿರ್ಮಾಣವಾಗಿದ್ದ ಆರಂಭದಲ್ಲಿ ಕೆಲ ದಿನಗಳ ಕಾಲ ಮಾತ್ರ ಈ ಗಡಿಯಾರ ಕಾರ್ಯನಿವಹಿಸಿತ್ತು. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ಈ ಬೃಹತ್ ಗಡಿಯಾರ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಇದನ್ನು ದುರಸ್ತಿಗೊಳಿಸುವ ಮೂಲಕ ಈ ಕ್ಲಾಕ್ ಟವರ್ ಹಾಗೂ ವೃತ್ತವನ್ನು ಅಭಿವೃದ್ಧಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link